ಸುದ್ದಿ ಸಂಕ್ಷೇಪ
ರಾಯಾಪುರ ಇಸ್ಕಾನ್ನಲ್ಲಿ ವೈಕುಂಠ ಏಕಾದಶಿ
ಹುಬ್ಬಳ್ಳಿ: ವೈಕುಂಠ ಏಕಾದಶಿ ನಿಮಿತ್ತ ರಾಯಾಪುರದಲ್ಲಿರುವ ಇಸ್ಕಾನ್ನ ಕೃಷ್ಣ ಬಲರಾಮ ದೇವಸ್ಥಾನದಲ್ಲಿ ಜ. 11ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜ.11ರಂದು ಬೆಳಗ್ಗೆ 8ಕ್ಕೆ ವೈಕುಂಠ ದ್ವಾರ ಪೂಜೆ, 10 ಗಂಟೆ ನಂತರ ಲಕ್ಷ ಚರಣ ಸೇವೆ, ಸಂಜೆ 5ಕ್ಕೆ ವೆಂಕಟೇಶ್ವರ ಹೋಮ ನಡೆಯಲಿದೆ. ನಂತರ ಸಂಜೆ 6ರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಇಸ್ಕಾನ್ ಪ್ರಕಟಣೆಯಲ್ಲಿ ತಿಳಿಸಿದೆ. ಇಸ್ಕಾನ್ ಪ್ರಮುಖ ಉತ್ಸವಗಳಲ್ಲಿ ಒಂದಾಗಿರುವ ವೈಕುಂಠ ಏಕಾದಶಿ ಕಾರ್ಯಕ್ರಮಕ್ಕೆ ಈ ಬಾರಿ ಇಸ್ಕಾನ್ ದೇವಸ್ಥಾನಕ್ಕೆ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ. ವೈಕುಂಠ ಏಕಾದಶಿ ನಿಮಿತ್ತ 15 ಅಡಿ ಎತ್ತರ ಮತ್ತು 11 ಅಡಿ ಅಗಲದ ಬಂಗಾರ ವರ್ಣದಿಂದ ನಿರ್ಮಿಸಿರುವ ವೈಕುಂಠ ದ್ವಾರವನ್ನು ದೇವಾಲಯದ ಮಹಾದ್ವಾರದಲ್ಲಿ ನಿರ್ಮಿಸಲಾಗುವುದು. ವೈಕುಂಠ ಏಕಾದಶಿಯಂದು ನಾರಾಯಣನೇ ಮಹಾದ್ವಾರದಲ್ಲಿ ನಿಂತು ಭಕ್ತರ ಸೇವೆ ಸ್ವೀಕರಿಸುತ್ತಾನೆ. ಹೀಗಾಗಿ ಅಂದು ದೇವಾಲಯದ ದ್ವಾರವನ್ನು ಬಂಗಾರದ ಬಣ್ಣದಿಂದ ವೈಕುಂಠ ದ್ವಾರದಂತೆ ನಿರ್ಮಿಸಲಾಗುತ್ತಿದೆ.ಜ.11ರಂದು ಬೆಳಗ್ಗೆ 11ರಿಂದ ರಾತ್ರಿ 9ರವರೆಗೆ ಗೋವಿಂದನ ಒಂದು ಲಕ್ಷ ನಾಮಗಳನ್ನು ಭಕ್ತರು ಲಕ್ಷಾರ್ಚಣೆ ಕಾರ್ಯಕ್ರಮದ ಅಂಗವಾಗಿ ಜಪಿಸಲಿದ್ದಾರೆ. ನಂತರ ಸಂಜೆ 5ಕ್ಕೆ ವೈಕುಂಠ ಏಕಾದಶಿ ನಿಮಿತ್ತ ವೆಂಕಟೇಶ್ವರ ಹೋಮ ನಡೆಯಲಿದೆ. ಶ್ರೀಮನ್ ನಾರಾಯಣನ ಮಹಿಮೆ ಕಥಾಪ್ರಸಂಗವನ್ನು ನೃತ್ಯ ಪಟು ಸಹನಾ ಭಟ್ ಮತ್ತು ತಂಡ ಪ್ರಸ್ತುತಪಡಿಸಲಿದ್ದು, ನಂತರ ಮಾಯಾ ಚಿಕ್ಕೇರೂರ ಅವರಿಂದ ಸಂಜೆ 6ಕ್ಕೆ ದಾಸವಾಣಿ ನಡೆಯಲಿದೆ.
ಉದ್ಯೋಗ ಮೇಳ
ಹುಬ್ಬಳ್ಳಿ: ವರ್ಟೆಕ್ಸ್ ಕಂಪನಿ ವತಿಯಿಂದ ನಗರದಲ್ಲಿ ಜ. 11ರಂದು ಉಚಿತ ಉದ್ಯೋಗ ಮೇಳ ಆಯೋಜಿಸಲಾಗಿದೆ. ವಾಯಿಸ್ ಪ್ರೊಸೆಸ್ ಹುದ್ದೆಗಾಗಿ ನಡೆಯುವ ಉದ್ಯೋಗ ಮೇಳದಲ್ಲಿ ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಪದವಿ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಮಾಹಿತಿಗೆ ಟ್ರಿಯಾ ಸೊಲ್ಯುಶನ್ಸ್, ಐಟಿ ಪಾರ್ಕ್, ಇಂದಿರಾ ಗಾಜಿನ ಮನೆ ಎದುರು, ಪಾಸ್ಪೋರ್ಟ್ ಕಚೇರಿ ಮೇಲೆ, ಇ ಬ್ಲಾಕ್, 4ನೇ ಮಹಡಿ, ಹುಬ್ಬಳ್ಳಿ-580029 (ಮೊಸಂ- 8792405059 ಅಥವಾ 8792405081) ಸಂಪರ್ಕಿಸಲು ಕೋರಲಾಗಿದೆ.