ಐಸಿಡಿಎಸ್ ದುರ್ಬಲಗೊಳಿಸಲು ಸರ್ಕಾರದ ಹುನ್ನಾರ
ಹುಬ್ಬಳ್ಳಿ: ಅಸಂಘಟಿತ, ದುರ್ಬಲ ಮತ್ತು ಸಾಮಾಜಿಕ ನ್ಯಾಯದಿಂದ ವಂಚಿತ ಕುಟುಂಜ್ಗಳಿಗೆ ಆಶಾಕಿರಣವಾಗಿದ್ದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಯನ್ನು ಬಲಿಷ್ಠಗೊಳಿಸುವ ಹೆಸರಿನಲ್ಲಿ ದುರ್ಬಲಗೊಳಿಸುವ ಹುನ್ನಾರ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತಿವೆ ಎಂದು ಆರೋಪಿಸಿ ಶುಕ್ರವಾರ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ನ ಜಿಲ್ಲಾ ಘಟಕದಿಂದ ಪ್ರತಿಭಟನೆ ಮಾಡಲಾಯಿತು.
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಪುನರ್ ರಚಿಸುವ ನೆಪದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಿಷನ್ ಮೋಡ್ ಹೆಸರಿನಲ್ಲಿ ಶಿಶು ಕಲ್ಯಾಣ ಯೋಜನೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ ಮಾಡುತ್ತಿವೆ. ಶಿಶು ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ವಾಸ್ತವಿಕವಾಗಿ 204 ಯೋಜನೆಗಳನ್ನು ಜಾರಿಗೆ ತಂದಿದ್ದರೂ ರಾಜ್ಯದಲ್ಲಿ 171 ಯೋಜನೆಗಳು ಮಾತ್ರ ಚಾಲ್ತಿಯಲ್ಲಿವೆ. ರಾಜ್ಯದಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಶೇ. 28.9ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಮತ್ತು ಶೇ. 1.32ರಷ್ಟು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆದರೂ ಸರ್ಕಾರ ಐಸಿಡಿಎಸ್ ಯೋಜನೆಯನ್ನು ಶಾಶ್ವತಗೊಳಿಸುವ ಬದಲು ಮೋಡ್ ಹೆಸರಿನಲ್ಲಿ ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿರುವುದು ಸರಿಯಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಈಗ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ತ್ರೀಶಕ್ತಿ, ಭಾಗ್ಯಲಕ್ಷ್ಮಿ ಸೇರಿದಂತೆ ವಿವಿಧ ಸಮೀಕ್ಷೆ ಕಾರ್ಯಗಳನ್ನು ವಹಿಸಲಾಗುತ್ತಿದ್ದು, ಈ ಹೆಚ್ಚುವರಿ ಇಲಾಖೇತರ ಕೆಲಸಗಳನ್ನು ಕಡಿಮೆಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಸಿ, ಡಿ ಗ್ರೂಪ್ ನೌಕರರು ಎಂದು ನೇಮಕ ಮಾಡಬೇಕು. ಕಾರ್ಯಕರ್ತೆಯರಿಗೆ ಕನಿಷ್ಠ ರು. 15 ಸಾವಿರ ಮತ್ತು ಸಹಾಯಕಿಯರಿಗೆ ರು. 10 ಸಾವಿರ ವೇತನ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎನ್.ಎಫ್. ಸಮುದ್ರಿ, ರಾಷ್ಟ್ರೀಯ ಸಮಿತಿ ಸದಸ್ಯೆ ಲತಿಫಾ ಬೇಗಂ, ಜಿಲ್ಲಾ ಕಾರ್ಯದರ್ಶಿ ಈರಮ್ಮ ತುರಕಾಣಿ ಮತ್ತು ಜಿಲ್ಲಾ ಸಂಚಾಲಕ ಎನ್.ಎ. ಖಾಜಿ ಸೇರಿದಂತೆ ಇನ್ನಿತರರು ಇದ್ದರು.