ನಮ್ಮ ಮನೆ, ನಮ್ಮ ತೋಟ ಅವ್ಯವಹಾರ: ಪ್ರತಿಭಟನೆ
ಕುಂದಗೋಳ: ನಮ್ಮ ಮನೆ-ನಮ್ಮ ತೋಟ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ತಾಲೂಕಿನ ಮಳಿಲಿ ಗ್ರಾಮಸ್ಥರು ಹಾಗೂ ಯುವ ನಾಗರಿಕ ವೇದಿಕೆ ಸದಸ್ಯರು ಗ್ರಾಮ ಪಂಚಾಯತಿ ಎದುರು ಧರಣಿ ಆರಂಭಿಸಿದ್ದಾರೆ.
ಎರಡು ದಿನಗಳಿಂದ ಧರಣಿ ನಡೆಸುತ್ತಿರುವ ಗ್ರಾಮಸ್ಥರು ಯೋಜನೆ ಲಾಭ ಗಿಟ್ಟಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ದಾಖಲೆ ನೀಡಿದರೂ ಈ ವರೆಗೂ ಹಣ ಮಂಜೂರು ಮಾಡಿಲ್ಲ ಎಂದು ಪ್ರತಿಭಟನಾನಿರತರು ದೂರಿದರು.
ಈ ಹಿಂದೆ ಆಡಳಿತ ನಡೆಸಿದ ಕೆಲ ಗ್ರಾಪಂ ಸದಸ್ಯರು ಈ ಯೋಜನೆ ಅಡಿಯಲ್ಲಿ ಬಿಡುಗಡೆಯಾಗಿದ್ದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. 79 ಫಲಾನುಭವಿಗಳು ಈ ಯೋಜನೆ ಲಾಭ ಪಡೆಯುವುದರಿಂದ ವಂಚಿತರಾಗಿದ್ದಾರೆ ಎನ್ನುವುದು ಮಾಹಿತಿ ಹಕ್ಕು ಕಾಯ್ದೆಯಿಂದ ಬೆಳಕಿಗೆ ಬಂದಿದೆ ಎಂದು ಅನೇಕರು ಆರೋಪಿಸಿದರು.
ನಮ್ಮ ಮನೆ-ನಮ್ಮ ತೋಟ ಯೋಜನೆಯಲ್ಲಿ ಅವ್ಯವಹಾರ ನಡೆಸಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ತಾಪಂ, ಜಿಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಈವರೆಗೂ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಧರಣಿನಿರತರು ಪಟ್ಟು ಹಿಡಿದರಲ್ಲದೆ, ಈ ಹೋರಾಟ ಮುಂಬರುವ ದಿನಗಳಲ್ಲಿ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ನಾಗಪ್ಪ ತಿಪ್ಪಣ್ಣವರ, ಮಂಜುನಾಥ ಕಮಡೊಳ್ಳಿ, ಪ್ರವೀಣ ಸಂಶಿ, ಫಕ್ಕಿರೇಶ ದೊಡಗೌಡರ, ಪರಮೇಶ ಕಳ್ಳಿಮನಿ, ಸಿ.ಎಂ ಕಮ್ಮಾರ, ಎಂ.ಬಿ ಯರನಾಳ, ಬಸವರಾಜ ಮಾಗಡಿ, ಪ್ರಕಾಶ ಬನವಾಸಿ, ಶಿವಾನಂದ ತಿಪ್ಪಣ್ಣವರ, ಕಾಂತಪ್ಪ ಹರಿಜನ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.