ಬೇಡಿಕೆ ಈಡೇರಿಕೆಗಾಗಿ ಜೈಲ್‌ಭರೋ
ಧಾರವಾಡ: ಐಸಿಡಿಎಸ್ ಯೋಜನೆಯನ್ನು ಪುನರ್‌ರಚಿಸುವ ಹೆಸರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಿಷನ್ ಎಂಬ ಹೆಸರಿನಲ್ಲಿ ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿದ್ದು, ಅದನ್ನು ಈ ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಶುಕ್ರವಾರ ಜೈಲ್ ಭರೋ ಚಳವಳಿ ನಡೆಸಿದರು.
ಇದಕ್ಕೂ ಪೂರ್ವದಲ್ಲಿ ವಿವಿಧ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ್ದ ಕಾರ್ಯಕರ್ತೆಯರು ನಗರದ ಕಲಾಭವನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ರ್ಯಾಲಿನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿ ತಿಂಗಳು ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದಿಂದ ಕೇವಲ ರು. 3 ಸಾವಿರ, ಸಹಾಯಕಿಯರಿಗೆ ರು. 1500 ಹಾಗೂ ರಾಜ್ಯ ಸರ್ಕಾರದಿಂದ ಕಾರ್ಯಕರ್ತೆಯರಿಗೆ ರು. 2 ಸಾವಿರ ಮತ್ತು ಸಹಾಯಕಿಯರಿಗೆ ರು. 1 ಸಾವಿರ ನೀಡಲಾಗುತ್ತದೆ. ಆದ್ದರಿಂದ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಕ್ರಮವಾಗಿ ಸಿ ಗ್ರೂಪ್ ಮತ್ತು ಡಿ ಗ್ರೂಪ್ ನೌಕರರೆಂದು ಕಾಯಂಗೊಳಿಸಿ ಎಲ್ಲ ಸೌಲಭ್ಯ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ತಿಂಗಳಿಗೆ ರು. 12,500 ಸಾವಿರ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸೇವಾ ಅವಧಿಯ ಆಧಾರದಲ್ಲಿ ಹೆಚ್ಚುವರಿಯಾಗಿ ವರ್ಷಕ್ಕೆ ರು. 200 ನೀಡುವುದು ಇತ್ಯಾದಿ ಬೇಡಿಕೆ ಈಡೇರಿಸಲು ಆಗ್ರಹಿಸಿದರು.
ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಫೆಡರೇಶನ್‌ನ ನವಲಗುಂದ ತಾಲೂಕಾಧ್ಯಕ್ಷರಾದ ಲತೀಫಾ ಬಾಗಲಕೋಟೆ, ಸಾವಕ್ಕ ಕಮ್ಮಾರ, ವೀರಮ್ಮ ತುರಕಾಣಿ, ಶಂಕ್ರಮ್ಮ ಹಿರೇಮಠ, ಸಂಧ್ಯಾ ಕುಲಕರ್ಣಿ, ಶಶಿಕಲಾ ಜಾಲಗಾರ ಮತ್ತಿತರರು ಇದ್ದರು.