ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸುದ್ದಿ ಸಂಕ್ಷೇಪ

Mainashree
Updated On : 11 Jan 2014, 11:23 am

ಆಕಸ್ಮಿಕ ಬೆಂಕಿ: ಬೆಳೆ ಹಾನಿ
ಕಲಘಟಗಿ: ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ಕಬ್ಬಿನ ಬೆಳೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರು.ಗಳ ಬೆಳೆ ಸುಟ್ಟು ಕರಕಲಾಗಿದೆ. ಗ್ರಾಮದ ನಾಗೇಶ ಇಟಗಿ ಹಾಗೂ ಶಂಕ್ರವ್ವ ಇಟಗಿ ಎಂಬುವರಿಗೆ ಸೇರಿದ 5 ಎಕರೆ ಜಮೀನನಲ್ಲಿ ಈ ಬೆಂಕಿ ಆಕಸ್ಮಿಕ ಸಂಭವಿಸಿದೆ. ಬೆಂಕಿ ಹತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಕಬ್ಬಿನ ಬೆಳೆಗೆ ಬೆಂಕಿ ಹತ್ತಿಕೊಂಡಿದ್ದನ್ನು ನೋಡಿದ ಗ್ರಾಮಸ್ಥರು, ಬೆಂಕಿ ನಂದಿಸಲು ಸಾಕಷ್ಟು ಪ್ರಯತ್ನಿಸಿದರಾದರೂ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ. ಘಟನೆ ಬಗ್ಗೆ ತಹಸೀಲ್ದಾರ್, ಸಕ್ಕರೆ ಕಾರ್ಖಾನೆಯವರಿಗೆ ಮಾಹಿತಿ ನೀಡಿದ ಭೂಮಿ ಮಾಲೀಕರು, ರು. 4 ಲಕ್ಷ ಪರಿಹಾರ ನೀಡುವಂತೆ ವಿನಂತಿಸಿದ್ದಾರೆ.
ಸಾಮಗ್ರಿ ತಯಾರಿಕೆ ಶಿಬಿರ
ಧಾರವಾಡ: ಅಡಕೆ ಹಾಳೆಯಿಂದ ಊಟದ ತಟ್ಟೆ, ಕಪ್ಪು ಮುಂತಾದವುಗಳ ತಯಾರಿಕೆ ವಿಧಾನದ ಬಗ್ಗೆ ಸಣ್ಣ ಕೈಗಾರಿಕಾ ಅಭಿವೃದ್ಧಿ ಕೇಂದ್ರದಿಂದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜ. 27ರಿಂದ ಐದು ದಿನ ನಡೆಯುವ ಈ ತರಬೇತಿಗೆ ಎಸ್‌ಎಸ್‌ಎಲ್‌ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 080-23151581 ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.
ನಾಳೆ ರಾಜ್ಯ ಮಟ್ಟದ ರಡ್ಡಿ ವಧು-ವರರ ಸಮಾವೇಶ
ಹುಬ್ಬಳ್ಳಿ: ಧಾರವಾಡದ ವೆಂಕಟಗಿರಿಯ ಸಮಸ್ತ ರಡ್ಡಿ ಸಮಾಜದ ವಧು-ವರರ ವೇದಿಕೆ ವತಿಯಿಂದ ಸಮಸ್ತ ರಡ್ಡಿ ಸಮಾಜದ ವಧು-ವರರ/ ಪಾಲಕರ ರಾಜ್ಯ ಮಟ್ಟದ ಉಚಿತ ಸಮಾವೇಶವನ್ನು ಧಾರವಾಡದ ವೆಂಕಟಗಿರಿಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಜ. 12ರಂದು ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ. ಆಸಕ್ತರು ಈ ಸಮಾವೇಶದಲ್ಲಿ ಭಾಗವಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 2747053ಕ್ಕೆ ಸಂಪರ್ಕಿಸಲು ಸಂಚಾಲಕರಾದ ಆರ್.ವಿ. ಪಾಟೀಲ ಅವರು ಕೋರಿದ್ದಾರೆ.

ಹುಬ್ಬಳ್ಳಿ: 25ಕ್ಕೆ ಕೃಷ್ಣ, ಬಲರಾಮ ರಥಯಾತ್ರೆ
ಹುಬ್ಬಳ್ಳಿ: ರಾಯಾಪುರದ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞೆ ಸಂಸ್ಥೆ (ಇಸ್ಕಾನ್‌ನಿಂದ ಜ. 25ರಂದು ಹುಬ್ಬಳ್ಳಿಯಲ್ಲಿ ಮತ್ತು ಫೆಬ್ರವರಿ 1ರಂದು ಧಾರವಾಡದಲ್ಲಿ 12ನೇ ವರ್ಷದ ಕೃಷ್ಣ, ಬಲರಾಮ ರಥಯಾತ್ರೆ ನಡೆಯಲಿದೆ. ಜ. 25ರಂದು ಸಂಜೆ 4ಕ್ಕೆ ದುರ್ಗದಬೈಲ್‌ನಲ್ಲಿ ರಥಯಾತ್ರೆಗೆ ಚಾಲನೆ ನೀಡಲಾಗುವುದು. ಹುಬ್ಬಳ್ಳಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ಸಂಜೆ 7:30ಕ್ಕೆ ಗುಜರಾತ್ ಭವನಕ್ಕೆ ಆಗಮಿಸಿ ರಥಯಾತ್ರೆ ಅಂತ್ಯಗೊಳ್ಳಲಿದೆ.  ಅನಂತರ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಫೆ. 25ರಂದು ಸಂಜೆ 4ಕ್ಕೆ ಧಾರವಾಡದ ಲಿಂಗಾಯತ ಟೌನ್‌ಹಾಲ್ ರಥಯಾತ್ರೆಗೆ ಚಾಲನೆ ನೀಡಲಾಗುವುದು. ರಾತ್ರಿ 7:30ಕ್ಕೆ ಲಿಂಗಾಯತ್ ಟೌನ್ ಹಾಲ್ ಬಳಿ ರಥಯಾತ್ರೆ ಅಂತ್ಯಗೊಳ್ಳಲಿದ್ದು, ಅನಂತರ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯ: ಹನುಮವ್ವ ಬಿಂಗಿ
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 10
ಗ್ರಾಮೀಣ ಜನರಲ್ಲಿ ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳ ಕುರಿತು ಇರುವ ತಪ್ಪು ತಿಳಿವಳಿಕೆ ಹೋಗಲಾಡಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಅಗತ್ಯ ಎಂದು ಎಂದು ಜಿಪಂ ಸದಸ್ಯ ಹನುಮವ್ವ ಬಿಂಗಿ ಹೇಳಿದರು.
ತಾಲೂಕಿನ ನಿಗದಿಯಲ್ಲಿ ಶುಕ್ರವಾರ ಭಾರತೀಯ ಕುಟುಂಬ ಕಲ್ಯಾಣ ಯೋಜನೆ, ಕರ್ನಾಟಕ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗ ಹಾಗೂ ಯಶೋಧಾ ವೆಲ್ಫೇರ್ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ಕುರಿತು ಜನ ಜಾಗೃತಿ ಮತ್ತು ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತೀಯ ಕುಟುಂಬ ಯೋಜನೆಯಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗ್ರಾಮೀಣರ ಆರೋಗ್ಯ ಕಾಪಾಡಲು ಶ್ರಮಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಕವಿವಿ ಸಮಾಜ ಕಾರ್ಯ ವಿಭಾಗ ಮುಖ್ಯಸ್ಥೆ ಡಾ. ಶೋಭಾದೇವಿ ಪಾಟೀಲ ಮಾತನಾಡಿ, ಕುಟುಂಬದ ಬೆನ್ನೆಲುಬಾಗಿರುವ ಮಹಿಳೆಯ ಆರೋಗ್ಯದಲ್ಲಿ ಏರುಪೇರಾದರೆ ಇಡೀ ಕುಟುಂಬದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಹಾಗಾಗಿ ಮಹಿಳೆಯರು ಆರೋಗ್ಯ ನಿರ್ಲಕ್ಷಿಸಬಾರದು ಎಂದರು.
ಸ್ತ್ರೀ ರೋಗ ತಜ್ಞೆ ಡಾ. ಜಯಶ್ರೀ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಶೆಟ್ಟವ್ವ ಹರಿಜನ, ಬೋಜುಬಾಯಿ, ಸುವರ್ಣ ಪಾಟೀಲ, ಡಾ.ಸಂಗೀತ ಮಾನೆ, ಡಾ.ಎಸ್.ವೈ. ಸ್ವಾದಿ, ಡಾ. ರವೀಂದ್ರ, ಡಾ. ನಜರೀನ್ ಹೊನ್ನಳ್ಳಿ, ಯಶೋಧಾ ಟ್ರಸ್ಟ್‌ನ ಆನಂದ ಅಗ್ನಿಹೋತ್ರಿ, ಸುಜಾತ ಅನಿಶೆಟ್ಟರ, ನಿಂಗಪ್ಪ ಮಡಿವಾಳರ, ಎಸ್.ವಿ. ಕುಲಕರ್ಣಿ, ಸೌಮ್ಯ  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement