ಸುದ್ದಿ ಸಂಕ್ಷೇಪ
ಮಹಾಶರಣ ಹರಳಯ್ಯ ಚಿತ್ರ ಬೆಂಬಲಿಸಿ ರ್ಯಾಲಿ
ಹುಬ್ಬಳ್ಳಿ: ಮಹಾಶರಣ ಹರಳಯ್ಯ ಚಲನ ಚಿತ್ರ ಬೆಂಬಲಿಸಿ ಶುಕ್ರವಾರ ಹರಳಯ್ಯ ಸಮಗಾರ ಸಮಾಜ ಅಭಿವೃದ್ಧಿ ಮಹಾಮಂಡಳದ ವತಿಯಿಂದ ಲಿಡ್ಕರ್ ಕಾಲೋನಿಯಿಂದ ರೂಪಂ ಸಿನಿಮಾ ಥಿಯೇಟರ್ವರೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಮಹಾಶರಣ ಹರಳಯ್ಯ ಚಿತ್ರ ಬೆಂಬಲಿಸಿ ಹಮ್ಮಿಕೊಂಡ ಹರಳಯ್ಯ ಸಮಗಾರ ಸಮಾಜದ ಬೈಕ್ ರ್ಯಾಲಿಗೆ ಸಂಚಾರಿ ವಿಭಾಗದ ಎಸಿಪಿ ಎ. ಆರ್. ಬಡಿಗೇರ, ಕಾಂಗ್ರೆಸ್ ಯುವ ಮುಖಂಡ ಸದಾನಂದ ಡಂಗನವರ ಮತ್ತು ಪ್ರಭುಗೌಡ ಪಾಟೀಲ ಚಾಲನೆ ನೀಡಿದರು. ಮಹಾಮಂಡಳದ ಪರಶುರಾಮ ಅರಕೇರಿ, ಗುರುನಾಥಛ ಉಳ್ಳಿಕಾಶಿ ಬೈಕ್ ರ್ಯಾಲಿ ನೇತೃತ್ವ ವಹಿಸಿದ್ದರು. ಮೆರವಣಿಗೆಯಲ್ಲಿ ಯಲ್ಲಪ್ಪ ಬಾಗಲಕೋಟೆ, ಭೀಮಣ್ಣ ತೇರದಾಳ, ಮಂಜುನಾಥ ಸಣ್ಣಕ್ಕಿ, ಧರ್ಮರಾಜ ಸಾಮೋಜಿ, ಲೋಹಿತ ಗಾಮನಗಟ್ಟಿ, ಗೋಪಾಲ ಹೊಸಮನಿ, ಸಿದ್ಧಪ್ಪ ಗಾಮನಗಟ್ಟಿ, ಸದಾನಂದ ತೇರದಾಳ, ಬಸವರಾಜ ತೇರದಾಳ ಇದ್ದರು.
ಸಿದ್ಧರಾಮೇಶ್ವರ ಜಯಂತಿ
ಧಾರವಾಡ: ಜಿಲ್ಲಾಧಿಕಾರಿ ಸಭಾಭವನದಲ್ಲಿ ಜ. 13ರಂದು ಬೆಳಗ್ಗೆ 10ಕ್ಕೆ ಶಿವಯೋಗಿ ಸಿದ್ಧರಾಮೇಶ್ವರರ ಜಯಂತ್ಯುತ್ಸವ ಆಚರಿಸಲಾಗುವುದು. ಜಿಲ್ಲಾಧಿಕಾರಿ ಸಮೀರ್ ಅವರು ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸುವರು. ಈ ಸಮಾರಂಭದಲ್ಲಿ ಜಿಲ್ಲಾ ಕೇಂದ್ರದ ಎಲ್ಲ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ಭಾಗವಹಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಉಪನ್ಯಾಸ
ಧಾರವಾಡ: ಇಲ್ಲಿನ ವೀರಶೈವ ಜಂಗಮ ಸಂಸ್ಥೆಯ ಆಶ್ರಯದಲ್ಲಿ ಸಿದ್ಧಾಂತ ಶಿಖಾಮಣಿ ಕುರಿತ 106ನೇ ಉಪನ್ಯಾಸ ಮಾಲೆ ಜ. 12ರಂದು ಸಂಜೆ 5ಕ್ಕೆ ಪಿಬಿ ರಸ್ತೆಯಲ್ಲಿನ ತತ್ವಾನ್ವೇಷಣ ಮಂದಿರದಲ್ಲಿ ನಡೆಯಲಿದೆ. ಬಾಗಲಕೋಟೆ ಜಿಲ್ಲೆಯ ಸೀಮಿಕೇರಿ ಸರ್ಕಾರಿ ಪ್ರೌಢಶಾಲೆಯ ಅಧ್ಯಾಪಕಿ ಡಾ. ಪರಮೇಶ್ವರಿ ಹಿರೇಮಠ ಅವರು ಸಿದ್ಧಾಂತ ಶಿಖಾಮಣಿ ಬಗ್ಗೆ ಉಪನ್ಯಾಸ ನೀಡುವರು. ವೀರಶೈವ ಜಂಗಮ ಸಂಸ್ಥೆ ಅಧ್ಯಕ್ಷ ಜಿ.ಆರ್. ಹಿರೇಮಠ ಅಧ್ಯಕ್ಷತೆ ವಹಿಸುವರು ಎಂದು ಸಂಯೋಜಕ ಶಿವಯೋಗಿ ಹೊಸಮಠ ತಿಳಿಸಿದ್ದಾರೆ.
17ಕ್ಕೆ ಪೂರ್ವಭಾವಿ ಸಭೆ
ಧಾರವಾಡ: ಗಣರಾಜ್ಯೋತ್ಸವ ಹಾಗೂ ಜ. 21ರಂದು ಜರುಗುವ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕುರಿತು ಜ. 17ರಂದು ಜಿಲ್ಲಾಧಿಕಾರಿ ಸಭಾಭವನದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ಸಂಬಂಧಿಸಿದ ಅಧಿಕಾರಿಗಳು, ಸಮುದಾಯದ ಹಿರಿಯರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಗೆ ಹಾಜರಾಗಲು ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪಸೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಸಿದ, ನಕಲಿ ರಾಷ್ಟ್ರಧ್ವಜ ಬಳಕೆ ಅಪರಾಧ
ಹುಬ್ಬಳ್ಳಿ: ಹರಿದ, ಮಾಸಿದ, ತೊಳೆದ, ನಕಲಿ ರಾಷ್ಟ್ರಧ್ವಜ ಬಳಕೆ ಶಿಕ್ಷಾರ್ಹ ಅಪರಾಧವಾಗಿದ್ದು ಬಿಐಎಸ್ ಗುರುತಿನ ರಾಷ್ಟ್ರಧ್ವಜ ಖರೀದಿಸಲು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಜನರಲ್ಲಿ ವಿನಂತಿಸಿ ದೆ. ನಕಲಿ ರಾಷ್ಟ್ರಧ್ವಜ ಬಳಸದಂತೆ ಜಾಗೃತಿ ಮೂಡಿಸಲಾಗಿದೆ. ಆದಾಗ್ಯೂ ಮಾರುಕಟ್ಟೆಯಲ್ಲಿ ಬಿಐಎಸ್ (ಭಾರತೀಯ ಮಾನಕ ಸಂಸ್ಥೆ) ಮಾರ್ಕ್ ಇಲ್ಲದ ರಾಷ್ಟ್ರಧ್ವಜ ಮಾರಾಟ ಮತ್ತು ಖರೀದಿಯಾಗುತ್ತಿರುವುದು ಕಂಡು ಬಂದಿದೆ. ಈ ಕುರಿತು ಪತ್ರಿಕೆಗಳೂ ವರದಿ ತಯಾರಿಸಿವೆ. ಇದು ರಾಷ್ಟ್ರಧ್ವಜ ನೀತಿಯನ್ವಯ ಶಿಕ್ಷಾರ್ಹ ಅಪರಾಧ ಎಂದು ರಾಷ್ಟ್ರಧ್ವಜ ತಯಾರಿಸುವ ಸಂಸ್ಥೆಯೂ ಆಗಿರುವ ಗ್ರಾಮೋದ್ಯೋಗ ಸಂಘದ ಕಾರ್ಯದರ್ಶಿ ಎಚ್. ಎನ್. ಅಂಟಿನ ತಿಳಿಸಿದ್ದಾರೆ. ಸದ್ಯ ಗ್ರಾಮೋದ್ಯೋಗ ಸಂಘದಲ್ಲಿ ಗ್ರಾಮ ಪಂಚಾಯ್ತಿಯಿಂದ ರಾಷ್ಟ್ರಪತಿ ಭವನದವರೆಗೆ ಹಾರಿಸುವ ಎಲ್ಲ ಗಾತ್ರದ ರಾಷ್ಟ್ರಧ್ವಜಗಳು ಲಭ್ಯವಿದ್ದು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಬಿಐಎಸ್ ಗುರುತಿನ ರಾಷ್ಟ್ರಧ್ವಜ ಖರೀದಿಲು ಅಂಟಿನ ಕೋರಿದ್ದಾರೆ.