ಕ್ರಿಕೆಟ್ ಪಟುಗಳ ಭತ್ಯೆ ಹಣ ಗುಳುಂ
ಶಿಕ್ಷಣ ಇಲಾಖೆ ಆಯೋಜಿಸುವ ವಿಭಾಗ ಮಟ್ಟ, ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಕಳೆದ ಮೂರು ವರ್ಷಗಳಿಂದ ಪ್ರಯಾಣ ಹಾಗೂ ದಿನಭತ್ಯೆ ತಲುಪಿಲ್ಲ.
ಕಳೆದ ಹಲವಾರು ವರ್ಷಗಳಿಂದ ಆಯ್ಕೆ ಸಮಿತಿ ಸದಸ್ಯರೂ ಬದಲಾವಣೆಯಾಗಿಲ್ಲ, ಉತ್ತಮ ಪ್ರದರ್ಶನ ತೋರಿದರೂ ತಮ್ಮ ಮಕ್ಕಳ ಆಯ್ಕೆಯಲ್ಲಿ ತಾರತಮ್ಯ ಮಾಡಲಾಗಿದೆ. ಇದೀಗ ಜಿಲ್ಲಾ ಮತ್ತು ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಭತ್ಯೆ ನೀಡಿಲ್ಲ ಎಂದು ವಿದ್ಯಾರ್ಥಿಗಳ ಪಾಲಕರು ಆಕ್ರೋಶ ವ್ಯಕ್ತಪಡಿಸಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.
ಎಷ್ಟೆಷ್ಟು ಬಂದಿತ್ತು?: 2011-12ರಲ್ಲಿ ಬಿಜಾಪುರದಲ್ಲಿ ನಡೆದ ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ 24 ವಿದ್ಯಾರ್ಥಿಗಳು ಭಾಗವಹಿಸಿದ್ದು ರು. 10,620 ವಿವಿಧ ಭತ್ಯೆಗಳನ್ನು ಚೆಕ್ ಮೂಲಕ ತಂಡದ ವ್ಯವಸ್ಥಾಪಕ ರಂಜನ್ ಅವರಿಗೆ ಪಾವತಿಸಲಾಗಿದೆ. ಹಾಗೆಯೇ 2012-13ನೇ ಸಾಲಿನಲ್ಲಿ ಕಾರವಾರದಲ್ಲಿ ನಡೆದ ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿ 16 ಕ್ರೀಡಾಪಟುಗಳಿಗೆ ರು. 7,476 ಭತ್ಯೆ ಹಣವನ್ನು ತಂಡದ ವ್ಯವಸ್ಥಾಪಕ ಸುನೀಲ ಅವರಿಗೆ ಚೆಕ್ ಮೂಲಕ ನೀಡಲಾಗಿದೆ. ಅದೇ ವರ್ಷ ಕಾರವಾರದಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಕ್ರಿಕೆಟ್ ಪಟುಗಳ ಭತ್ಯೆ ರು. 2,910ನ್ನು ವ್ಯವಸ್ಥಾಪಕ ರಂಜನ್ ಮತ್ತು ವಿ.ಎಸ್. ಪಾಟೀಲ ಅವರಿಗೆ ನೀಡಲಾಗಿದೆ ಎಂದು ಚೆಕ್ ನಂಬರ್ ಸಹಿತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ನರಸಪ್ಪ ಮಾಹಿತಿ ನೀಡಿದ್ದಾರೆ.
ಆದರೆ, ತಂಡವನ್ನು ಪ್ರತಿನಿಧಿಸುವುದಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋದ ವ್ಯವಸ್ಥಾಪಕರು ಭಾಗವಹಿಸಿದ ವಿದ್ಯಾರ್ಥಿಗಳಿಗೆ ದಿನಕ್ಕೆ ರು. 60 ದಿನಭತ್ಯೆ ಹಾಗೂ ವಾಸ್ತವಿಕ ಬಸ್ ದರ ನೀಡಬೇಕಿತ್ತು. ಕಳೆದ ಮೂರು ವರ್ಷಗಳಿಂದ ಚೆಕ್ ಮೂಲಕ ತಮ್ಮ ಕೈ ಸೇರಿದ ಹಣವನ್ನು ವ್ಯವಸ್ಥಾಪಕರು ವಿದ್ಯಾರ್ಥಿಗಳಿಗೆ ನೀಡಿಲ್ಲ. ವಿದ್ಯಾರ್ಥಿಗಳಿಗೆ ಬರಬೇಕಿದ್ದ ಭತ್ಯೆ ಹಣವನ್ನು ತಂಡದ ವ್ಯವಸ್ಥಾಪಕರು ನುಂಗಿ ಹಾಕಿದ್ದಾರೆ ಎಂದು ವಿದ್ಯಾರ್ಥಿಗಳ ಪಾಲಕರು ಆರೋಪಿಸುತ್ತಾರೆ.
ಪ್ರತಿ ವರ್ಷ ಆಯ್ಕೆ ಸಮಿತಿಯಲ್ಲಿರುವ ಬಾಸೆಲ್ ಮಿಶನ್ ಇಂಗ್ಲಿಷ್ ಮಾಧ್ಯಮ ಶಾಲೆಯ ತರಬೇತುದಾರ ರಂಜನ್ ಹಾಗೂ ಹುಬ್ಬಳ್ಳಿ ಲ್ಯಾಮಿಂಗ್ಟನ್ ಶಾಲೆಯ ವಿ.ಎಸ್. ಪಾಟೀಲ ಅವರನ್ನು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳು ಕೈಬಿಡಬೇಕು. ಇದಕ್ಕಿಂತ ಹೆಚ್ಚಾಗಿ ಅತ್ಯುತ್ತಮ ಪ್ರದರ್ಶನ ತೋರುವ ವಿದ್ಯಾರ್ಥಿಗಳನ್ನು ತಂಡಕ್ಕೆ ಆಯ್ಕೆ ಮಾಡಬೇಕು. ಅಲ್ಲದೇ, ವಿದ್ಯಾರ್ಥಿಗಳು ಪ್ರದರ್ಶನ ತೋರಲು ಉತ್ತಮ ಮೈದಾನದ ಅಗತ್ಯವಿದೆ ಎಂದು ವಿದ್ಯಾರ್ಥಿಗಳ ಪಾಲಕರು ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಒತ್ತಾಯಿಸಿದ್ದಾರೆ.
ಸೂಚಿಸಿ ಕ್ರಮಕ್ಕೆ ಬದ್ಧ: ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಉಪ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್, ವಿಭಾಗ ಮತ್ತು ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಭತ್ಯೆ ತಲುಪಿಲ್ಲ ಎಂದು ವಿದ್ಯಾರ್ಥಿಗಳ ಪಾಲಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳು ಈ ಕುರಿತು ವರದಿ ನೀಡಿದ್ದಾರೆ. ಇಲಾಖೆಯಿಂದ ಆಯಾ ತಂಡಗಳ ವ್ಯವಸ್ಥಾಪಕರಿಗೆ ಚೆಕ್ ಮೂಲಕ ಹಣ ಪಾವತಿಸಲಾಗಿದೆ. ಆದರೆ, ಹಣ ವಿದ್ಯಾರ್ಥಿಗಳ ಕೈ ತಲುಪದಿರುವುದಕ್ಕೆ ವ್ಯವಸ್ಥಾಪಕರೇ ಹೊಣೆ. ಈ ಹಿನ್ನೆಲೆಯಲ್ಲಿ ವ್ಯವಸ್ಥಾಪಕರ ಶಾಲೆಗಳ ಆಡಳಿತ ಮಂಡಳಿಗೆ ಪತ್ರ ಬರೆದಿದ್ದು, ಕೂಡಲೇ ಕ್ರೀಡಾಪಟುಗಳಿಗೆ ಭತ್ಯೆ ಹಣ ನೀಡುವಂತೆ ಸೂಚಿಸಿದ್ದೇನೆ. ಅಲ್ಲದೇ, ಮುಂದಿನ ಆಯ್ಕೆ ಸಂದರ್ಭದಲ್ಲಿ ಈ ಅಕ್ರಮದಲ್ಲಿ ಭಾಗಿಯಾದ ದೈಹಿಕ ಶಿಕ್ಷಕರನ್ನು ಕೈ ಬಿಡುವಂತೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗೆ ಸೂಚನೆ ನೀಡಲಾಗಿದೆ. ಭವಿಷ್ಯದ ದಿನಗಳಲ್ಲಿ ಇಂತಹ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.