ಪ್ರಾದೇಶಿಕ ವ್ಯವಸ್ಥಾಪಕರಾಗಿ ಎಸ್.ಎ. ನೀರಲಗಿ ನಿಯುಕ್ತಿ
ಧಾರವಾಡ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಧಾರವಾಡ ವಲಯದ ನೂತನ ಪ್ರಾದೇಶಿಕ ವ್ಯವಸ್ಥಾಪಕರಾಗಿ ಎಸ್.ಎ. ನೀರಲಗಿ ನಿಯುಕ್ತಿಗೊಂಡಿದ್ದಾರೆ. 57 ವರ್ಷದ ನೀರಲಗಿ ಮೂಲತಃ ಬಿಜಾಪುರ ಜಿಲ್ಲೆಯವರು. ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ 30 ವರ್ಷಗಳ ಅನುಭವ ಹೊಂದಿದ್ದಾರೆ. 1984ರಲ್ಲಿ ಆಗಿನ ಬಿಜಾಪುರ ಗ್ರಾಮೀಣ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಸೇವೆ ಆರಂಭಿಸಿದ ಅವರು 25 ವರ್ಷಗಳಿಗೂ ಹೆಚ್ಚು ಕಾಲ ಶಾಖಾ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಈ ಮುಂಚೆ ಬ್ಯಾಂಕಿನ ಬಾಗಲಕೋಟೆ ವಲಯದ ಪ್ರಾದೇಶಿಕ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಧಾರವಾಡ ಪ್ರಾದೇಶಿಕ ಕಾರ್ಯಾಲಯ 60 ಶಾಖೆಗಳನ್ನು ಹೊಂದಿದ್ದು 2,356 ಕೋಟಿ ವಹಿವಾಟು ಹೊಂದಿದೆ. ಈ ಹಿಂದಿನ ಪ್ರಾದೇಶಿಕ ವ್ಯವಸ್ಥಾಪಕ ಬಿ. ವಾಸುದೇವ ಬ್ಯಾಂಕಿನ ಪ್ರಧಾನ ಕಚೇರಿಯ ಕಟ್ಟಡ ನಿರ್ವಹಣೆ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ತ್ಯಾಗ ಬಾಳಿನ ಉಸಿರಾಗಲಿ
ಹುಬ್ಬಳ್ಳಿ: ತ್ಯಾಗ ನಮ್ಮ ಜೀವನದ ಉಸಿರಾಗಬೇಕು. ಬಾಹ್ಯ ಶ್ರೀಮಂತಿಕೆಗಿಂತ ಭಾವ ಶ್ರೀಮಂತಿಕೆ ದೊಡ್ಡದು ಎಂದು ಜಗದ್ಗುರು ಗುರುಸಿದ್ಧೇಶ್ವರ ಶಿಕ್ಷಣ ಸಂಸ್ಥೆ ಪ್ರಾಚಾರ್ಯ ಬಿ.ಬಿ. ನಾಯ್ಕ ಹೇಳಿದರು. ಕೆಎಲ್ಇ ಸಂಸ್ಥೆಯ ಎಚ್.ಎಫ್. ಕಟ್ಟಿಮನಿ ಕನ್ನಡ ಪ್ರಾಥಮಿಕ ಶಾಲೆ ಮತ್ತು ಜಗದ್ಗುರು ಗುರುಸಿದ್ದೇಶ್ವರ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಶಿರಸಂಗಿ ಲಿಂಗರಾಜರ 153ನೇ ಜಯಂತಿಯಲ್ಲಿ ಅವರು ಮಾತನಾಡಿದರು. ಎನ್.ಎಂ. ಅಂಗಡಿ ಸ್ವಾಗತಿಸಿದರು. ಆರ್.ಆರ್. ಶಿರೂರ ವಂದಿಸಿದರು. ಬಿ.ಎ. ದೇವರ ನಿರೂಪಿಸಿದರು.
ಕ್ವಿಜ್ನಲ್ಲಿ ಪ್ರಥಮ
ಹುಬ್ಬಳ್ಳಿ: ಧಾರವಾಡ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ವಿಜ್ ಸ್ಪರ್ಧೆಯಲ್ಲಿ ಆನಂದನಗರದ ಅಭಿನವ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಅಮೃತಾ ಮಲಗಾನವರ ಪ್ರಥಮ ಸ್ಥಾನ ಪಡೆದಿದ್ದಾಳೆ. ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಕ್ವಿಜ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಅಮೃತಾಳನ್ನು ಶಾಲಾ ಆಡಳಿತ ಮತ್ತು ಬೋಧಕ ಸಿಬ್ಬಂದಿ ಅಭಿನಂದಿಸಿದೆ.
ನಾಳೆ ಪಿಂಚಣಿ ಅದಾಲತ್
ಕಲಘಟಗಿ: ಕಲಘಟಗಿ ವಲಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿನ ಪಿಂಚಣಿ ಅದಾಲತ್ ಜ. 13 ರಂದು ಮಧ್ಯಾಹ್ನ 3ಕ್ಕೆ ಇಲ್ಲಿನ ತಹಸೀಲ್ದಾರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರರ ಉಪಸ್ಥಿತಿಯಲ್ಲಿ ನಡೆಯುವ ಅದಾಲತ್ನಲ್ಲಿ ಸಂಧ್ಯಾ ಸುರಕ್ಷಾ, ವೃದ್ಧಾಪ್ಯವೇತನ, ರಾಷ್ಟ್ರೀಯ ಕೌಟುಂಬಿಕ ಯೋಜನೆ ಸೇರಿದಂತೆ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಫಲಾನುಭವಿಗಳು ಇದರ ಪ್ರಯೋಜನ ಪಡೆಯುವಂತೆ ತಹಸೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ.