ಶ್ರೀಶೈಲ ಸಾವು: ಸಿಬಿಐ ತನಿಖೆಯಾಗಲಿ
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 11
2005ರಲ್ಲಿ ಕುಂದಾಪುರದ ಶಶಿಧರ ಲಾಡ್ಜ್ನಲ್ಲಿ ಸಂಭವಿಸಿದ ನನ್ನ ಮಗ ಶ್ರೀಶೈಲ ಚಿಕ್ಕೇರಿ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಧಾರವಾಡ ಗಾಂಧಿನಗರದ ನಿವಾಸಿ ಮಲ್ಲೇಶಪ್ಪ ಚಿಕ್ಕೇರಿ ಆಗ್ರಹಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವು ನಡೆದ ಸ್ಥಳ, ಅಲ್ಲಿನ ಸಂದರ್ಭಗಳನ್ನು ಅವಲೋಕಿಸಿದಾಗ ಅದು ಸಹಜ ಸಾವಲ್ಲ, ಕೊಲೆ ಎಂದು ಸಾಮಾನ್ಯರಿಗೂ ತಿಳಿಯುತ್ತದೆ. ಆದರೆ, ಪೊಲೀಸರು ಹಾಗೂ ಈ ಪ್ರಕರಣ ತನಿಖೆ ನಡೆಸಿದ ಸಿಓಡಿ ಅಧಿಕಾರಿಗಳು ಸಹಜ ಸಾವು ಎಂದು ಹೇಳುವ ಮೂಲಕ ಆರೋಪಿಗಳನ್ನು ರಕ್ಷಿಸಿದ್ದಾರೆ.
ಕಳೆದ ಎಂಟು ವರ್ಷಗಳಿಂದ ನ್ಯಾಯದ ಬೆನ್ನು ಹತ್ತಿದ್ದೇನೆ. ನ್ಯಾಯ ಸಿಗದೆ ಅಲೆದಾಡುತ್ತಿದ್ದು ಸಿಬಿಐ ಅಧಿಕಾರಿಗಳಿಂದಾದರೂ ನ್ಯಾಯ ದೊರಕಬಹುದು ಎಂಬ ಭರವಸೆಯಲ್ಲಿದ್ದೇನೆ. ಧಾರವಾಡಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೇನೆ ಎಂದರು.
ಹಿನ್ನೆಲೆ: ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ನನ್ನ ಮಗ ಶ್ರೀಶೈಲ ತನ್ನ ಸ್ನೇಹಿತರಾದ ಕುಂದಾಪುರದ ಆದರ್ಶ ಮತ್ತು ಅಭಿವೃದ್ಧ, ರಿತೀನ ಶೆಟ್ಟಿ, ಚಂದ್ರಶೇಖರ ವಿಜಯ ಎನ್ನುವವರೊಂದಿಗೆ 2005ರಲ್ಲಿ ಆದರ್ಶನ ಸಹೋದರಿಯ ಮದುವೆಗೆ ಹೋಗಿದ್ದ.
ಮದುವೆ ಅನಂತರ ಶಶಿಧರ ಲಾಡ್ಜ್ನಲ್ಲಿ ಉಳಿದುಕೊಂಡಿದ್ದ ಪರಸ್ಪರ ಜಗಳವಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಇನ್ನುಳಿದ ಸ್ನೇಹಿತರು ಶ್ರೀಶೈಲನನ್ನು ಥಳಿಸಿ ಲಾಡ್ಜ್ನಿಂದ ಕೆಳಗೆ ಎಸೆದು ಕೊಲೆ ಮಾಡಿದ್ದಾರೆ.
ಕೊಲೆಗೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷಿಗಳು ಇದ್ದರೂ ಕುಂದಾಪುರ ಪೊಲೀಸರು ಮತ್ತು ಸಿಓಡಿ ಪೊಲೀಸರು ಸರಿಯಾದ ತನಿಖೆ ಮಾಡದೆ ಸಹಜ ಸಾವು ಎಂದು ವರದಿ ನೀಡಿ ಆರೋಪಿಗಳನ್ನು ರಕ್ಷಿಸಿದ್ದಾರೆಂದು ಆರೋಪಿಸಿದರು.
ಒಂದು ವೇಳೆ ಶ್ರೀಶೈಲ ಸಹಜವಾಗಿ ಕೆಳಗೆ ಬಿದ್ದು ಸಾವನ್ನಪ್ಪಿದ್ದರೆ, ಲಾಡ್ಜ್ ಕೊಣೆಯ ಟ್ಯೂಬ್ಲೈಟ್ ಏಕೆ ಒಡೆಯುತ್ತಿತ್ತು. ಬೆಡ್ ಶೀಟ್, ಗಾದಿ ಹಾಗೂ ಗೋಡೆಗಳ ಮೇಲೆ ರಕ್ತದ ಕಲೆಗಳೇಕಿವೆ ಎಂದು ಪ್ರಶ್ನಿಸಿದರು.
ಕುಂದಾಪುರ ಪೊಲೀಸರಿಂದ ಮಗನ ಸಾವಿನ ತನಿಖೆ ಆಗದ ನಂತರ ಸಿಓಡಿ ತನಿಖೆಯಾಯಿತು. ಆಗ ಡಿವೈಎಸ್ಪಿ ಇದ್ದ ಕೆ.ಎನ್. ಯೋಗಪ್ಪ ಸಹ ಆರೋಪಿಗಳಿಂದ ಹಣ ತಿಂದು, ಸಹಜ ಸಾವು ಎಂದು ವರದಿ ನೀಡಿದರು.
ಸಿಓಡಿ ವರದಿ ಪ್ರಶ್ನಿಸಿ ನ್ಯಾಯಾಲಯಕ್ಕೆ ಮುಂದೆ ಹೋಗಿದ್ದೇನೆ. ತೀರ್ಪು ನೀಡುವಲ್ಲಿ ವಿಳಂಬವಾಗುತ್ತಿದೆ. ನೊಂದವರು ನ್ಯಾಯ ಸಿಗದೇ ನೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಅನಿವಾರ್ಯವಾಗಿ ಸಿಬಿಐ ಮೊರೆ ಹೋಗಬೇಕಾಗಿದೆ. ನನ್ನ ಜೀವ ಇರುವವರೆಗೆ ಮಗನ ಸಾವಿನ ತನಿಖೆ ಪೂರ್ಣಗೊಳಿಸಿಯೇ ತೀರುತ್ತೇನೆ ಎಂದು ಛಲ ಪ್ರದರ್ಶಿಸಿದ್ದಾರೆ.