ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಿರುಕುಳಕ್ಕೆ ಬೇಸತ್ತ ಕಿಟೆಲ್ ಕಾಲೇಜು ಸಿಬ್ಬಂದಿ

Lingaraj Badiger
Updated On : 13 Jan 2014, 12:42 pm

ಕನ್ನಡಪ್ರಭ ವಾರ್ತೆ, ಧಾರವಾಡ, ಜ. 12
ಇಲ್ಲಿನ ಕಿಟೆಲ್ ವಿಜ್ಞಾನ ಮಹಾವಿದ್ಯಾಲಯದ ಆಡಳಿತ ಮಂಡಳಿ ಬಾಸೆಲ್ ಮಿಷನ್ ಉಚ್ಚ ಶಿಕ್ಷಣ ಸಂಸ್ಥೆಯ ದ್ವಂದ್ವ ನೀತಿಯಿಂದಾಗಿ ಇನ್ನೊಂದು ಅನುದಾನಿತ ಸಂಸ್ಥೆಗೆ ಹೋಗಲು ನಿರಾಕ್ಷೇಪಣಾ ಪತ್ರ ನೀಡುವಂತೆ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.
ಕಾಲೇಜಿನ ಅಹಿತಕರ ವಾತಾವರಣವಿದ್ದು  ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ. ಆದ್ದರಿಂದ ತಮ್ಮನ್ನು ಬೇರೆ ಅನುದಾನಿತ ಶಿಕ್ಷಣ ಸಂಸ್ಥೆಗೆ ಹೋಗಲು ಅನುಮತಿ ನೀಡಬೇಕು ಎಂದು ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಒಟ್ಟು 27 ಸಿಬ್ಬಂದಿ ಆಡಳಿತ ಮಂಡಳಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
12 ಪ್ರಾಧ್ಯಾಪಕರು, ಮೂವರು ಸಹಾಯಕ ಪ್ರಾಧ್ಯಾಪಕರು, ಓರ್ವ ಗ್ರಂಥಪಾಲಕ, ಓರ್ವ ದ್ವಿತೀಯ ದರ್ಜೆ ಸಹಾಯಕ ಹಾಗೂ 10 ಜವಾನರು ನಿರಾಕ್ಷೇಪಣಾ ಪತ್ರ ನೀಡುವಂತೆ ಒತ್ತಾಯಿಸಿದ್ದಾರೆ.
ಪ್ರಾಚಾರ್ಯರ ಕಿರುಕುಳ: ಕಳೆದ 20-27 ವರ್ಷಗಳಿಂದ ಕಾಲೇಜಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೆ, 2011ರಿಂದ ಮಹಾವಿದ್ಯಾಲಯದಲ್ಲಿ ನಡೆಯತ್ತಿರುವ ಅಹಿತಕರ ವಾತಾವರಣ ಮತ್ತು ಶೋಷಣೆಯಿಂದ ನೊಂದಿರುವ ಸಿಬ್ಬಂದಿ ಈ ಕುರಿತು ಆಡಳಿತ ಮಂಡಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಅಲ್ಲದೆ, ಪ್ರಾಚಾರ್ಯ ಸುಶಾಂತಿ ಪ್ರಸನ್ನಕುಮಾರ ವರ್ತನೆ ಮತ್ತು ಕಿರುಕುಳದಿಂದ ಬೇಸತ್ತಿದ್ದಾರೆ. ಸದ್ಯ ಸುಶಾಂತಿ ಪ್ರಸನ್ನಕುಮಾರ ಅವರನ್ನು ಮತ್ತೆ ಕಾಲೇಜಿನ ಪ್ರಾಚಾರ್ಯರನ್ನಾಗಿ ನೇಮಿಸುವ ಮೂಲಕ ತಮಗೆ ನೀಡಿದ ಭರವಸೆ ಹುಸಿಗೊಳಿಸಲಾಗಿದೆ. ಆದ್ದರಿಂದ ಬೇರೆ ಸಂಸ್ಥೆಗೆ ಹೋಗಲು ಅನುಮತಿ ನೀಡಬೇಕು ಎಂದು ಸಿಬ್ಬಂದಿ ಮನವಿ ಮಾಡಿದ್ದಾರೆ.
ಕಿಟೆಲ್ ವಿಜ್ಞಾನ ಕಾಲೇಜಿನಲ್ಲಿ ಸುಶಾಂತಿ ಪ್ರಸನ್ನಕುಮಾರ ಪ್ರಾಚಾರ್ಯರಾದ ಮೇಲೆ ಉದ್ಭವಿಸಿರುವ ಸಮಸ್ಯೆಗಳಿಂದ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಆಡಳಿತ ಮಂಡಳಿಯ ಪಕ್ಷಪಾತದಿಂದ ಹಲವಾರು ವರ್ಷಗಳಿಂದ ದುಡಿದಿರುವ ಪ್ರಾಧ್ಯಾಪಕರಿಗೆ ಬಡ್ತಿ, ವೇತನ, ನಿವೃತ್ತಿ ಸೌಲಭ್ಯ, ಬರಬೇಕಾದ ಮೊತ್ತ ಕೂಡ ನೀಡಿಲ್ಲ. ಈ ಕುರಿತು ಕಾಲೇಜು ಶಿಕ್ಷಣ ಇಲಾಖೆಯ ಗಮನಕ್ಕೂ ತರಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಕಾಲೇಜಿನಲ್ಲಿ ಕಳೆದ ಹಲವು ದಿನಗಳಿಂದ ಉದ್ಭವಿಸಿರುವ ಸಮಸ್ಯೆಗಳು ತಾರ್ಕಿಕ ಅಂತ್ಯ ಕಾಣದೇ ಮುಂದುವರಿದ್ದು, ಸುಗಮವಾಗಿ ಕಾಲೇಜು ನಡೆಸಿಕೊಂಡು ಹೊಗುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement