ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನೀರಿನಿಂದಲೂ ಸಮಾಜ ಇಬ್ಭಾಗ: ಎಚ್ಕೆ ವಿಷಾದ

Lingaraj Badiger
Updated On : 13 Jan 2014, 12:41 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 12
ಜನರು ಕುಡಿಯುವ ನೀರು ಕೂಡ ಇಂದು ಸಮಾಜವನ್ನು ಇಬ್ಭಾಗವಾಗಿಸಿದೆ. ಸಮಾಜದ ಒಂದು ಸಿಮೀತ ವರ್ಗ ಶುದ್ಧ ನೀರು ಪಡೆಯುತ್ತಿದ್ದರೆ, ಗ್ರಾಮೀಣ ಸೇರಿದಂತೆ ಕೆಳವರ್ಗದವರಿಗೆ ಅಶುದ್ಧ, ಕಲ್ಮಷ ನೀರನ್ನು ಅವಲಂಬಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್. ಕೆ. ಪಾಟೀಲ ಹೇಳಿದರು.
ಭಾನುವಾರ, ಭಾರತೀಯ ಜೈನ ಸಂಘಟನೆ ಆಯೋಜಿಸಿದ್ದ ವಿಶಾಲ ಜೈನ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ದೇಶದ ಒಂದು ಸೀಮಿತ ವರ್ಗ ಇಂದು ಶುದ್ಧ ಕುಡಿಯುವ ನೀರು ಪಡೆಯುವುದಕ್ಕೆ ಆರ್ಥಿಕವಾಗಿ ಸಮರ್ಥವಾಗಿದ್ದರೆ, ಇನ್ನೊಂದು ವರ್ಗ ಶುದ್ಧ ಹೋಗಲಿ ಕನಿಷ್ಠ ಕುಡಿವ ನೀರು ಪಡೆಯುವುದಕ್ಕೂ ಪರದಾಡಬೇಕಾದಂತಹ ಪರಿಸ್ಥಿತಿ ಇದೆ. ಫ್ಲೋರೈಡ್‌ಯುಕ್ತ ನೀರನ್ನು ಪಡೆಯುತ್ತಿರುವ ಗ್ರಾಮೀಣ ಭಾರತಕ್ಕೆ ಭಾರತೀಯ ಜೈನ ಸಂಘಟನೆ ಶುದ್ಧ ಕುಡಿಯುವ ನೀರು ಪೂರೈಸುವಂತಹ ಸಮಾಜಮುಖಿ ಕಾರ್ಯಗಳ ಮುಖಾಂತರ ಗ್ರಾಮೀಣ ಜನರ ಆರೋಗ್ಯ ಸುಧಾರಣೆಗೆ ಶ್ರಮಿಸಬೇಕು.
ಕಾಯಿಲೆ ಉಚಿತ ತಪಾಸಣಾ ಶಿಬಿರ, ಬಡ ರೋಗಿಗಳಿಗೆ ಆರ್ಥಿಕವಾಗಿ ನೆರವಾಗುವಂತಹ ಸಮಾಜ ಸೇವಾ ಚಟುವಟಿಕೆ ಜತೆಗೆ ಕಾಯಿಲೆ ಬಾರದಂತೆ ತಡೆಯುವ ಸಮಾಜಮುಖಿ ಕೆಲಸಗಳನ್ನು ಕೈಗೆತ್ತಿಕೊಂಡರೆ ಸಮೃದ್ಧ ಭಾರತ ನಿರ್ಮಾಣದಲ್ಲಿ ಜೈನ ಸಮಾಜ ತನ್ನ ಪಾತ್ರ ನಿರ್ವಹಿಸದಂತಾಗುತ್ತದೆ ಎಂದು ಹೇಳಿದರು.
ಬಹುತೇಕ ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ದಿಗಂಬರ ಜೈನ ಸಮಾಜ ತನ್ನ ಸಾಮರ್ಥ್ಯ ಅರಿತುಕೊಂಡು ಉದ್ಯಮ ಸ್ಥಾಪನೆಗಳ ಮುಖಾಂತರ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು. ದೇಶದ ಅರ್ಥ ವ್ಯವಸ್ಥೆ ಇನ್ನಷ್ಟು ಬಲವಾಗುವುದರ ಜತೆಗೆ ಸಾವಿರಾರು ಕೈಗಳಿಗೆ ಉದ್ಯೋಗ ನೀಡಬಹುದು ಎಂದು ತಿಳಿಸಿದರು.
ಭಾರತೀಯ ಜೈನ ಸಂಘಟನೆ ರೂಪಿಸಿರುವ ಶೈಕ್ಷಣಿಕ ಪಠ್ಯಕ್ರಮ ಮಾದರಿಯನ್ನು ಗೋವಾ ಸರ್ಕಾರ  ಅಳವಡಿಸಿಕೊಳ್ಳಲು ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಮೊದಲು ಪ್ರಾಥಮಿಕ ಶಿಕ್ಷಣ ಸಚಿವರೊಂದಿಗೆ ಸಭೆ ನಡೆಸಿ ಅಲ್ಲಿ ತೆಗೆದುಕೊಳ್ಳುವ ತೀರ್ಮಾನದ ಆಧಾರದ ಮೇಲೆ ಮುಖ್ಯಮಂತ್ರಿಯೊಂದಿಗೆ ಶೈಕ್ಷಣಿಕ ಪಠ್ಯಕ್ರಮ ಮಾದರಿ ಅಳವಡಿಸಿಕೊಳ್ಳುವ ಕುರಿತು ಚಿಂತನೆ ಮಾಡಲಾಗುವುದು ಎಂದು ಹೇಳಿದರು.
ವಿಶಾಲ ಜೈನ ಸಮ್ಮೇಳನ ಉದ್ಘಾಟಿಸಿದ ಭಾರತೀಯ ಜೈನ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಶಾಂತಿಲಾಲ್ ಮುಥಾ, ಜನಸಂಖ್ಯೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವ ಜೈನರು ತಮ್ಮ ವ್ಯವಹಾರಿಕ ಕೌಶಲ್ಯ ಮತ್ತು ವ್ಯಾಪಾರಿ ಮನೋಭಾವದಿಂದಾಗಿ ಇಡೀ ರಾಷ್ಟ್ರದುದ್ದಕ್ಕೂ ಸಿಗುತ್ತಾರೆ.
ಅಹಿಂಸಾ ಪರಮೋಧರ್ಮ, ಅಪರಿನಿಗ್ರಹ ಸೇರಿದಂತೆ ನಾಲ್ಕು ತತ್ವಗಳನ್ನು ಜೀವನದಲ್ಲಿ ಚಾಚೂ ತಪ್ಪದೇ ಅಳವಡಿಸಿಕೊಂಡಿರುವ ಜೈನರು ಕಳೆದ 150 ವರ್ಷಗಳಲ್ಲಿ ದೇಶಾದ್ಯಂತ 1800ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಬರಗಾಲ ಸಮಯದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಗೋಶಾಲೆಗಳನ್ನು ತೆರೆದು ಗೋವುಗಳ ಸಂರಕ್ಷಣೆ ಮಾಡಿದ್ದಾರೆ. 1993ರ ಲಾತೂರ್ ಭೂಕಂಪದಲ್ಲಿ 1200 ಅನಾಥ ಮಕ್ಕಳನ್ನು ಭಾರತೀಯ ಜೈನ ಸಂಘಟನೆ ದತ್ತು ಪಡೆದು ಶಿಕ್ಷಣ ನೀಡಿದೆ. ಗುಜರಾತ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ನಾಶವಾಗಿದ್ದ 368 ಪ್ರಾಥಮಿಕ ಶಾಲೆಗಳನ್ನು ಕೇವಲ ಮೂರು ತಿಂಗಳ ಅವಧಿಯಲ್ಲಿ ನಿರ್ಮಿಸಿ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಅದೇ ರೀತಿ ಸುನಾಮಿ ದುರಂತದ ನಂತರ ತಮಿಳುನಾಡು, ಆಂಧ್ರಪ್ರದೇಶ ಮತ್ತು ಅಂಡಮಾನ್ ನಿಕೋಬಾರ್‌ನ 37 ದ್ವೀಪಗಳಲ್ಲಿ ಪರಿಹಾರ ಕಾರ್ಯಾಚರಣೆ ಜೊತೆಗೆ ಶಾಲೆಗಳನ್ನು ನಿರ್ಮಿಸಿ ಅಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಮ್ಮುಖದಲ್ಲಿ ಹಸ್ತಾಂತರಿಸಲಾಗಿತ್ತು.
ಸ್ವಾತಂತ್ರ್ಯ ಕಾಲದಿಂದಲೂ ಬದಲಾಗದ ಪ್ರಾಥಮಿಕ ಶೈಕ್ಷಣಿಕ ವ್ಯವಸ್ಥೆಯ ಬದಲಾವಣೆಗೆ ಭಾರತೀಯ ಜೈನ ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು, ಭಾರತೀಯ ಜೈನ ಸಂಘಟನೆ ಸಿದ್ಧಪಡಿಸಿರುವ ಪ್ರಾಥಮಿಕ ಶೈಕ್ಷಣಿಕ ಪಠ್ಯಕ್ರಮ ಮಾದರಿಯನ್ನು ಗೋವಾ ಸರ್ಕಾರ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ಮಾಡಿದೆ. ಒಂದು ವೇಳೆ ರಾಜ್ಯ ಸರ್ಕಾರ ಕೂಡ ಆಸಕ್ತಿ ತೋರಿದಲ್ಲಿ ರಾಜ್ಯದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಸುಧಾರಣೆ ಸಂಘಟನೆ ನೆರವು ನೀಡಲಿದೆ ಎಂದು ಹೇಳಿದರು.
ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವ ಅಭಯಚಂದ್ರ ಜೈನ್, ನಾಡಿನ ಸಾಹಿತ್ಯಿಕ ಜಗತ್ತಿನ ಶ್ರೀಮಂತಿಕೆ ಕಾರಣರಾದ ರನ್ನ, ಪಂಪ, ರತ್ನಾಕರವರ್ಣಿ ವಾರಸುದಾರರು ಜೈನ ಸಮುದಾಯ ಎಂದು ಹೇಳಿದ ಅವರು, ರಾಜ್ಯದ ಔದ್ಯಮಿಕ ಕ್ಷೇತ್ರಕ್ಕೆ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸ್ಥಾಪಿಸಿರುವ ವಾಲಚಂದ್, ಹೀರಾಚಂದ್ ಅವರು ಮುಂದೆ ಮುಂಬೈನಲ್ಲಿ ಫಿಯೇಟ್ ಕಾರು ಉತ್ಪಾದನಾ ಘಟಕ ಸ್ಥಾಪಿಸಿ ಜೈನ ಸಮಾಜದ ಉದ್ಯಮಶೀಲತೆಯನ್ನು ಎತ್ತಿ ಹಿಡಿದಿದ್ದಾರೆ. ಆದರೆ ಇಂದಿನ ದಿನಗಳಲ್ಲಿ ಈ ಸಮಾಜ ಕೇವಲ ವ್ಯಾಪಾರ ಕ್ಷೇತ್ರಕ್ಕೆ ಸಿಮೀತವಾಗಿಸಿಕೊಂಡಿದೆ ಎಂದು ಹೇಳಿದರು.
ಭಾರತೀಯ ಜೈನ ಸಂಘಟನೆ ರಾಜ್ಯ ಉಸ್ತುವಾರಿ ರಾಜೇಂದ್ರ ಲುಂಕರ್, ರಾಜ್ಯ ಘಟಕದ ಅಧ್ಯಕ್ಷ ಗೌತಮ ಬಾಪ್ನಾ, ಸುರೇಶ ಜೇರೆವಾಲಾ, ಹಿರಿಯ ಪತ್ರಕರ್ತ ಗುಲಾಬಚಂದ ಕೋಠಾರಿ ಮುಂತಾದವರು ಮಾತನಾಡಿದರು.
ವೇದಿಕೆಯಲ್ಲಿ  ಬಿಜೆಎಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಪ್ರಫುಲ್ಲ ಪಾರೇಖ್, ಮಹೇಂದ್ರ ಸಿಂಘಿ, ರಮೇಶ ಬಾಪಣಾ, ಓಂಪ್ರಕಾಶ ಲುನಾವತ್, ದಿಲೀಪ ಸುರಾನಾ, ಎಸ್‌ಡಿಎಂ ಸೊಸೈಟಿ ಉಪಾಧ್ಯಕ್ಷ ಪ್ರೊ. ಎನ್. ವಜ್ರಕುಮಾರ, ಶಾಸಕ ಸಂಜಯ ಪಾಟೀಲ, ಅಜೀತ ಪ್ರಸಾದ ಮತ್ತು ಕಮಲಕುಮಾರ ಜೈನ ಸೇರಿದಂತೆ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement