ನಿಷೇಧಿತ ಪ್ಲಾಸ್ಟಿಕ್ ಮತ್ತೆ ಮಾರುಕಟ್ಟೆಗೆ
ನಿಷೇಧಿತ 40 ಮೈಕ್ರಾನ್ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳು ಅವಳಿ ನಗರಕ್ಕೆ ಮತ್ತೆ ಕಾಲಿಟ್ಟಿವೆ.
ಹುಬ್ಬಳ್ಳಿ-ಧಾರವಾಡದಲ್ಲಿ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳ ಮಾರಾಟದ ವಿರುದ್ಧ ಕಳೆದ ವರ್ಷವಷ್ಟೇ ಕಟ್ಟುನಿಟ್ಟಿನ ಕ್ರಮಕ್ಕೆ ಮಹಾನಗರ ಪಾಲಿಕೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿತ್ತು. ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳ ವಿರುದ್ಧ ಪಾಲಿಕೆ ಹಾಗೂ ಮಂಡಳಿ ಮೃಧು ಧೋರಣೆ ತಾಳುತ್ತಿದ್ದಂತೆಯೇ ನಿಷೇಧಿತ ಈ ಕ್ಯಾರಿಬ್ಯಾಗ್ಗಳು ಅವಳಿ ನಗರದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿವೆ.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ 40 ಮೈಕ್ರಾನ್ಗಿಂತ ಕಡಿಮೆ ಇರುವ ಕ್ಯಾರಿಬ್ಯಾಗ್ಗಳು ಉತ್ಪಾದನೆ ಹಾಗೂ ಮಾರಾಟವನ್ನು ನಿಷೇಧಿಸಿದ್ದರೂ ಈ ನಿಷೇಧ ಸಾಕಷ್ಟು ಪರಿಣಾಮ ಬೀರಿಲ್ಲವೆಂಬುದಕ್ಕೆ ಸಾಕ್ಷಿ ಮಾರುಕಟ್ಟೆಯಲ್ಲಿ ಕಾಣುತ್ತಿರುವ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳು.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ ಪರಿಸರ ಕಾಯ್ದೆ (ಸಂರಕ್ಷಣೆ) 1986ರ ಅನ್ವಯ ಪ್ಲಾಸ್ಟಿಕ್ ತ್ಯಾಜ್ಯ (ಮ್ಯಾನೇಜ್ಮೆಂಟ್ ಆ್ಯಂಡ್ ಹ್ಯಾಂಡ್ಲಿಂಗ್) ನಿಯಮಾವಳಿಗೆ ಮೇ 10, 2011ಕ್ಕೆ ತಿದ್ದುಪಡಿ ತಂದಿದೆ. ಅದರಂತೆ 40 ಮೈಕ್ರಾನ್ಗಿಂತ ಕಡಿಮೆ ಇರುವ ಕ್ಯಾರಿಬ್ಯಾಗ್ಗಳ ಉತ್ಪಾದನೆ ಮತ್ತು ಬಳಕೆ ನಿಷೇಧಿತಗೊಂಡಿವೆ.
ಈ ಹಿಂದೆ ಪ್ಲಾಸ್ಟಿಕ್ ಉತ್ಪಾದಕರ ಸಭೆ ಕರೆದಿದ್ದ ಮಹಾನಗರ ಪಾಲಿಕೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ನಿಷೇಧಿತ ಕ್ಯಾರಿಬ್ಯಾಗ್ಗಳನ್ನು ಉತ್ಪಾದಿಸಿದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದರು. ಆ ಸಂದರ್ಭದಲ್ಲಿ ಕೆಲ ತಿಂಗಳವರೆಗೆ 40 ಮೈಕ್ರಾನ್ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳು ಮಾರುಕಟ್ಟೆಯಿಂದ ಕಣ್ಮರೆಯಾಗಿದ್ದವು.
ಆದರೆ ಇತ್ತೀಚಿನ ಕೆಲ ತಿಂಗಳುಗಳಿಂದ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳು ಮತ್ತೆ ಮಾರುಕಟ್ಟೆಗೆ ಒಕ್ಕರಿಸಿವೆ. ಸಿದ್ಧ ಆಹಾರ ಪದಾರ್ಥ ಮಾರಾಟದ ಮಳಿಗೆ, ತರಕಾರಿ ಮಾರುಕಟ್ಟೆಗಳಲ್ಲಿ ಈ ಕ್ಯಾರಿಬ್ಯಾಗ್ಗಳು ಹೆಚ್ಚು ಕಾಣಿಸುತ್ತಿವೆ. ಕಡಿಮೆ ಬೆಲೆ ಎಂಬ ಒಂದೇ ಕಾರಣದಿಂದ ಈ ಕ್ಯಾರಿಬ್ಯಾಗ್ಗಳನ್ನು ಖರೀದಿಸುವ ಜನಸಾಮಾನ್ಯರು, ತಮಗೇ ಅರಿವಿಲ್ಲದಂತೆ ಹಲವಾರು ಕಾಯಿಲೆಗಳನ್ನು ಈ ಕ್ಯಾರಿಬ್ಯಾಗ್ಗಳ ಮೂಲಕ ಎಳೆದುಕೊಳ್ಳುತ್ತಿದ್ದಾರೆ.
ಅಪಾಯ: ಕಳಪೆಮಟ್ಟದ ಕ್ಯಾರಿಬ್ಯಾಗ್ನಲ್ಲಿ ಆಹಾರ ವಸ್ತುಗಳನ್ನು ಕೊಂಡೊಯ್ಯುವಾಗ ಪ್ಲಾಸ್ಟಿಕ್ನಲ್ಲಿರುವ ಅಪಾಯಕಾರಿ ವಸ್ತುಗಳು ಆಹಾರದಲ್ಲಿ ಬೆರೆತು ದೇಹ ಸೇರುವ ಅಪಾಯವಿದೆ. ಇದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬಣ್ಣಗಳು ಮೂತ್ರಕೋಶ, ಶ್ವಾಸಕೋಶಕ್ಕೆ ಅಪಾಯಕಾರಿ. ಅಧಿಕ ರಕ್ತದೊತ್ತಡ, ರಕ್ತನಾಳಗಳ ರೋಗಗಳು ಸಾಮಾನ್ಯ.
ಕೆಂಪು ಬಣ್ಣದ ಚೀಲಗಳಿಂದ ಮಕ್ಕಳ ಮೂಳೆ ವಿಕಲತೆ ಆಗುತ್ತದೆ. ಕಪ್ಪು ಬಣ್ಣದ ಚೀಲ ಇತರ ಎಲ್ಲ ಬಣ್ಣದ ಚೀಲಕ್ಕಿಂತ ಹೆಚ್ಚು ಅಪಾಯಕಾರಿ. ಕಪ್ಪು ಬಣ್ಣದಲ್ಲಿನ ಸೀಸ ಎಂಬ ವಸ್ತು ರಕ್ತಹೀನತೆ, ಮೆದುಳು ರೋಗಕ್ಕೆ ಕಾರಣ.
ಬಳಸಿದ ಚೀಲಗಳನ್ನು ಸುಡುವುದೂ ಅಪಾಯಕಾರಿ. ಸುಟ್ಟರೆ ಪೊಸಜೀನ್, ಕ್ಲೋರಿನ್, ಗಂಧಕ ಸಾರಜನಕಗಳಂತಹ ವಿಷ ಅನಿಲಗಳು ಉತ್ಪತ್ತಿ ಆಗಿ ಇವುಗಳಿಂದ ಬಂಜೆತನ, ಕ್ಯಾನ್ಸರ್, ಗರ್ಭಸ್ಥ ಶಿಶುವಿಗೆ ಮಾರಣಾಂತಿಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಕಾರ್ಬನ್ ಮೊನಾಕ್ಸೈಡ್ ಎಂಬ ಇನ್ನ್ನೊಂದು ಅನಿಲ ಬಸ್ ಹಾಗೂ ಲಾರಿಯಿಂದ ಹೊರಹೊಮ್ಮುವ ಹೊಗೆಗಿಂತ ಹೆಚ್ಚು ಅಪಾಯಕಾರಿ, ಸೂರ್ಯನ ನೇರ ಕಿರಣಗಳಿಂದ ನಮ್ಮನ್ನು ರಕ್ಷಿಸುವ ಪರಿಸರದಲ್ಲಿರುವ 'ಓ ಜೋನ್' ಪದರವನ್ನು ಈ ವಿಷಾನಿಲಗಳು ದುರ್ಬಲ ಮಾಡುವುದರಿಂದ ಸೂರ್ಯನ ಕಿರಣಗಳು ಅಪಾಯವಾಗುತ್ತವೆ.
ಬಳಸಿ ಉಳಿದ ಹಾಗೂ ಹಾಳಾದ ಆಹಾರವನ್ನು ಕ್ಯಾರಿಬ್ಯಾಗ್ನಲ್ಲಿ ತುಂಬಿ ತಿಪ್ಪೆಗೆ ಎಸೆಯುವುದು ಸಾಮಾನ್ಯ. ಆಹಾರಕ್ಕಾಗಿ ಜಾನುವಾರು ಈ ಚೀಲ್ನ ನುಂಗಿದಾಗ ಉಸಿರುಗಟ್ಟಿ ಸಾಯುತ್ತವೆ. ಇವು ಕರುಳು ಸೇರಿದಾಗ ಜೀರ್ಣವಾಗದೆ ದ್ರವರೂಪಕ್ಕೆ ಬದಲಾವಣೆ ಆಗದಿರುವುದರಿಂದ ಕರುಳಿನಲ್ಲಿ ಸಿಕ್ಕಿಕೊಂಡು, ತಡೆ ಆಗಿ ಮಾರಣಾಂತಿಕವಾಗಬಹುದು. ಒಂದು ಸಮೀಕ್ಷೆ ಪ್ರಕಾರ ದೊಡ್ಡ ನಗರಗಳಲ್ಲಿ ಶೇ. 60 ಜಾನುವಾರು ಕ್ಯಾರಿ ಬ್ಯಾಗ್ ತಿಂದು ಮೂರರಿಂದ ಆರು ತಿಂಗಳಲ್ಲಿ ಸಾಯುತ್ತವೆ.
ಸಮುದ್ರ ತೀರದಲ್ಲಿನ ಚೀಲಗಳು ಮಳೆಗಾಳಿಯಿಂದಾಗಿ ಸಮುದ್ರ ಸೇರುತ್ತದೆ. ಈ ಚೀಲ ನುಂಗಿದ ಮೀನು ಹಾಗೂ ಇತರೆ ಜಲಚರ ಸಂತತಿಗೂ ಅಪಾಯ. ಹೀಗೆಯೇ ಪ್ರಾಣಿ ಸಂಗ್ರಹಾಲಯದಲ್ಲಿನ ಪ್ರಾಣಿಗಳಿಗೂ ಅಪಾಯವಾಗಬಹುದು.
ಪರಿಸರ ಮಾಲಿನ್ಯ: ಪ್ಲಾಸ್ಟಿಕ್ ಕೊಳೆಯುವುದಿಲ್ಲವಾದ್ದರಿಂದ ಕ್ಯಾರಿ ಬ್ಯಾಗ್ಗಳು ಒಳಚರಂಡಿಯಲ್ಲಿ ಸಿಕ್ಕಿಹಾಕಿಕೊಂಡು ಕೊಳಕು ನೀರಿನ ಸುಲಭ ಚಲನೆಗೆ ತಡೆ ಮಾಡುತ್ತವೆ ಹಾಗೂ ಮಳೆಗಾಲದಲ್ಲಿ ಕೊಳಕು ನೀರಿನ ಸಂಗ್ರಹಕ್ಕೆ ಕಾರಣವಾಗುತ್ತವೆ. ಬಹಳ ದಿನ ಒಳಚರಂಡಿಯಲ್ಲಿ ಮಲಿನ ನೀರು ಚಲಿಸದೆ ನಿಂತರೆ ಈ ನೀರಿನಿಂದ 'ಮಿಥೇನ್' ಅನಿಲ ಉತ್ಪತ್ತಿಯಿಂದ ಒಳಚರಂಡಿಯ ಪೈಪು ಒಡೆಯುವ ಸಾಧ್ಯತೆ ಇದೆ.
ಪರಿಹಾರವೇನು?
- ಬಟ್ಟೆ ಚೀಲಗಳನ್ನು ಕಡ್ಡಾಯವಾಗಿ ಬಳಸಿ.
- ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಅನಿವಾರ್ಯವಾದರೆ ಇವು 40 ಮೈಕ್ರಾನ್ಗಿಂತ ದಪ್ಪವಾಗಿರಲಿ.
- ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳ ತಯಾರಕರ ವಿಳಾಸ, ತಯಾರಿಸಲು ಬಳಸಿದ ಕಚ್ಚಾವಸ್ತುಗಳು, ಅಪ್ಪಟ ಅಥವಾ ಮರು ಉತ್ಪಾದಿತ, ಪರಿಸರ ಇಲಾಖೆ ಪರವಾನಗಿ ವಿವರಗಳು ಚೀಲದ ಮೇಲಿರಬೇಕು.
- ಸಾಮಗ್ರಿ ಖರೀದಿಸಿದಾಗ ಅಂಗಡಿಗಳಲ್ಲಿ ನೀಡುವ ಉಚಿತ, ಕಡಿಮೆ ಗುಣಮಟ್ಟದ ಚೀಲ ಸ್ವೀಕರಿಸದಿರಿ. ಬದಲಾಗಿ ಗುಣಮಟ್ಟದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಅಥವಾ ಕಾಗದ ಕೈಚೀಲ ಖರೀದಿಸಿರಿ.
- ಕಾಗದ ಕೈ ಚೀಲಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲು ಚಿಂತನೆಯಾಗಬೇಕು.
-ಅಪಾಯವಿಲ್ಲದೆ ಪ್ಲಾಸ್ಟಿಕ್ ನಾಶಪಡಿಸುವ ತಂತ್ರಜ್ಞಾನದ ಸಂಶೋಧನೆ ಅಗತ್ಯ.