ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹಿಂದೂ ಪ್ರಮುಖರ ವಿರುದ್ಧ ಸುಳ್ಳು ಮೊಕದ್ದಮೆ: ಆಕ್ರೋಶ

Rashmi Kasaragodu
Updated On : 14 Jan 2014, 1:05 am

ಹುಬ್ಬಳ್ಳಿ: ಶಿವಾಜಿ ಜಯಂತಿಯಂಗವಾಗಿ ಹಳೆಹುಬ್ಬಳ್ಳಿಯಲ್ಲಿ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ 9 ಪ್ರಮುಖರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ವಾರಂಟ ಹೊರಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ನಿರೀಕ್ಷಣಾ ಜಾಮೀನು ಪಡೆದುಕೊಳ್ಳುವುದಿಲ್ಲ. ತಾಕತ್ತಿದ್ದರೆ ಪೊಲೀಸರು ನಮ್ಮನ್ನು ಬಂಧಿಸಲಿ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಅಶೋಕ ಅಣ್ವೇಕರ ಸವಾಲು ಹಾಕಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಎಚ್ಪಿ ಮುಖಂಡರಾದ ಗೊ.ಹ. ನರೇಗಲ್, ಗಣು ಜರತಾರಘರ, ಸುಭಾಷಸಿಂಗ್ ಜಮಾದಾರ್ ಸೇರಿದಂತೆ 9 ಜನರ ವಿರುದ್ಧ ಸುಳ್ಳು ಮೊಕದ್ದಮೆ ಹೂಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಘಟನೆ ನಡೆದ ದಿನ ಸುಭಾಷ ಸಿಂಗ್ ಜಮಾದಾರ್ ಪುಣೆಯಲ್ಲಿ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗೊ. ಹ. ನರೇಗಲ ಪರಸ್ಥಳದಲ್ಲಿದ್ದರು. ಈ ಬಗ್ಗೆ ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ ಅವರನ್ನು ಭೇಟಿ ಮಾಡಿ ದಾಖಲೆ ನೀಡಿದಾಗ, ಅವರು ಅಚ್ಚರಿ ವ್ಯಕ್ತಪಡಿಸಿದರು. ಜತೆಗೆ ತನಿಖಾಧಿಕಾರಿಗಳಿಂದಾದ ವೈಫಲ್ಯ ಒಪ್ಪಿಕೊಂಡರು. ಪರಿಸ್ಥಿತಿ ಕೈ ಮೀರಿದ್ದರಿಂದ ನ್ಯಾಯಾಲಯದಲ್ಲಿ ಪ್ರಕರಣ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದರು.
ಹಿಂದೂ ಶಕ್ತಿ ಹತ್ತಿಕ್ಕುವ ಏಕೈಕ ಉದ್ದೇಶದಿಂದ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಹಿಂದೂ ಸಂಘಟನೆ ಪ್ರಮುಖರನ್ನು ಗುರಿಯಾಗಿಸಿದ್ದಾರೆ. ಅಪರಾಧ ಎಸಗದೇ, ಘಟನೆಯ ಸ್ಥಳದಲ್ಲಿರದವರನ್ನೂ ಅನವಶ್ಯಕವಾಗಿ ಆರೋಪಿಯಾಗಿಸಲಾಗಿದೆ. ಇದನ್ನು ಪ್ರತಿಭಟಿಸಿ ಒಂಬತ್ತೂ ಜನರು ಬಂಧನಕ್ಕೊಳಗಾಗುವ ಮೂಲಕ ಪೊಲೀಸರ ಬಂಡವಾಳ ಸಮಾಜದ ಮುಂದೆ ಬಯಲು ಮಾಡುತ್ತೇವೆ ಎಂದರು.
ಬಂಧನವಾದ ಬಳಿಕ ಜಾಮೀನು ಪಡೆದುಕೊಂಡು ಹೈಕೋರ್ಟ್ನಲ್ಲಿ ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ರಿಟ್ ಪಿಟಿಶನ್ ಸಲ್ಲಿಸುತ್ತೇವೆ. ಕೋರ್ಟ್ಗೆ ಅಗತ್ಯ ಸಾಕ್ಷಾಧಾರಗಳನ್ನು ಹಾಜರು ಪಡಿಸುತ್ತೇವೆಂದ ಅಶೋಕ, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕಾನೂನು ದುರುಪಯೋಗಪಡಿಸಿಕೊಂಡ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಗೋ. ಹ. ನರೇಗಲ್, ಗಣು ಜರತಾರಘರ, ಸಂತೋಷ ಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement