ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ದೇಶದ ಏಕೈಕ ಇಸ್ಲಾಂ ಮಹಿಳಾ ಜಾತ್ರೆ

Mainashree
Updated On : 15 Jan 2014, 11:45 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 14
ಇಸ್ಲಾಂ ಧರ್ಮೀಯರಲ್ಲಿ ಮಹಿಳೆಯರ ಧಾರ್ಮಿಕ ಆಚರಣೆ ಏನಿದ್ದರೂ ನಾಲ್ಕು ಗೋಡೆಗಳ ಮಧ್ಯೆ. ಮಹಿಳೆಯರಿಗೆ ದರ್ಗಾಗಳಲ್ಲಿ ಪ್ರವೇಶವೂ ನಿಷಿದ್ಧ. ಏತನ್ಮಧ್ಯೆ ಇಸ್ಲಾಂ ಮಹಿಳೆಯರಿಗಾಗಿಯೇ ಮೀಸಲಾಗಿ ದೇಶದ ಏಕೈಕ ಮಹಿಳಾ ಜಾತ್ರೆ ಹುಬ್ಬಳ್ಳಿಯಲ್ಲಿ ನಡೆಯುತ್ತದೆ.
ಇಂಥ ವಿಶಿಷ್ಟ ಸಂಪ್ರದಾಯವುಳ್ಳ ಜಾತ್ರೆಗೆ ಹುಬ್ಬಳ್ಳಿಯ ಆಸಾರ್ ಮೊಹಲ್ಲಾ ದರ್ಗಾ ಸಿದ್ಧವಾಗಿದೆ. ಈದ್-ಮಿಲಾದ್ ಮಾರನೇ ದಿನ ಅಂದರೆ ಜ. 15ರಂದು ಜಾತ್ರೆ ನಡೆಯಲಿದೆ. ಈ ಜಾತ್ರೆಯಲ್ಲಿ ಪಾಲ್ಗೊಂಡು ಅಲ್ಲಾನ ಕೃಪೆಗೆ ಪಾತ್ರರಾಗಲು ರಾಜ್ಯ, ಹೊರ ರಾಜ್ಯಗಳಿಂದ ಸಾವಿರಾರು ಮಹಿಳೆಯರು ಹುಬ್ಬಳ್ಳಿಗೆ ಬರುತ್ತಾರೆ. ಏಕೆಂದರೆ ಇಂಥ ಅವಕಾಶ ದೇಶದ ಯಾವ ಮೂಲೆಯಲ್ಲಿಯೂ ಇಸ್ಲಾಂ ಪರಂಪರೆಯಲ್ಲಿ ಮಹಿಳೆಯರಿಗೆ ಅಲಭ್ಯ.
ನಾಲ್ಕು ಶತಮಾನ: ಅಂದ ಹಾಗೆ, ಸುಮಾರು ನಾಲ್ಕುನೂರು ವರ್ಷಗಳ ಹಿಂದೆ ಈ ಪರಂಪರೆ ಆರಂಭವಾಗಿತ್ತು. ಮಹಿಳೆಯರಿಗೂ ಧಾರ್ಮಿಕವಾಗಿ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ ಈ ಜಾತ್ರೆ ಆರಂಭವಾಯಿತು ಎಂದು ಹಿರಿಯರು ಹೇಳುತ್ತಾರೆ. ಆದರೆ, ಅಸಲಿಯಾಗಿ ಯಾವ ಕಾರಣಕ್ಕಾಗಿ ಈ ಸಂಪ್ರದಾಯ ಆರಂಭವಾಯಿತು ಎನ್ನುವ ಸ್ಪಷ್ಟ ಮಾಹಿತಿಯಾಗಲಿ, ಉಲ್ಲೇಖವಾಗಲಿ ಎಲ್ಲಿಯೂ ಇಲ್ಲ. ಕೆಲವರ ಪ್ರಕಾರ ಮದುವೆಯಾದ ಹೊಸ ಜೋಡಿ ಪರಸ್ಪರ ಬೆರೆಯಲಿ ಎನ್ನುವ ಉದ್ದೇಶ ಈ ಜಾತ್ರೆ ಹೊಂದಿದೆ. ಮೊದ ಮೊದಲು ಈ ಮಹಿಳಾ ಜಾತ್ರೆಯ ಬಗ್ಗೆ ಇಸ್ಲಾಂ ಧರ್ಮೀಯರಲ್ಲಿಯೇ ಯಾರಿಗೂ ಮಾಹಿತಿ ಇರಲಿಲ್ಲ.
ಇತ್ತೀಚಿನ ದಿನಗಳಲ್ಲಿ ಈ ವಿಶಿಷ್ಟ ಸಂಪ್ರದಾಯದ ಬಗ್ಗೆ ಪ್ರಚಾರ ಸಿಕ್ಕ ಪರಿಣಾಮ ದೇಶದ ಮೂಲೆ ಮೂಲೆಯಿಂದ ಮಹಿಳೆಯರು ದರ್ಶನಕ್ಕೆ ಆಗಮಿಸುತ್ತಾರೆ.
ದರ್ಗಾ ಪ್ರವೇಶ: ಈದ್ ಮಿಲಾದ್ ಹಬ್ಬದ ಮಾರನೇ ದಿನ ನಡೆಯುವ ಈ ಜಾತ್ರೆಯಂದು ಮಹಿಳೆಯರು ಕಡ್ಡಾಯವಾಗಿ ಬುರ್ಖಾ ಧರಿಸಿಕೊಂಡೇ ಮಸೀದಿಯೊಳಕ್ಕೆ ಪ್ರವೇಶಿಸಬೇಕು. ಮಹಿಳೆಯರೊಂದಿಗೆ ಮಕ್ಕಳು ದರ್ಗಾಕ್ಕೆ ಹೋಗಬಹುದು. ಆದರೆ, ಈ ಜಾತ್ರೆ ಆರಂಭವಾದ ಬಳಿಕ ಯಾವುದೇ ಕಾರಣಕ್ಕೂ ಪುರುಷರು ದರ್ಗಾ ಪ್ರವೇಶಿಸುವಂತಿಲ್ಲ. ತಡ ರಾತ್ರಿಯವರೆಗೂ ಜಾತ್ರೆ ಮುಂದುವರಿದಿರುತ್ತದೆ. ದರ್ಗಾದಲ್ಲಿರುವ 'ಪವಿತ್ರ ಕೇಶ'ದ ದರ್ಶನ ಪಡೆಯುವ ಮಹಿಳೆಯರು ಸುಖ ಸಮೃದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ.
ಅವಿಸ್ಮರಣೀಯ ದಿನ: ದೇಶದ ಯಾವುದೇ ಮೂಲೆಯಲ್ಲಿ ದರ್ಗಾಗಳಲ್ಲಿ ಪ್ರವೇಶಕ್ಕೆ ಅವಕಾಶ ಸಿಗುವುದಿಲ್ಲ. ಅಂತಹುದರಲ್ಲಿ ಮಹಿಳೆಯರಿಗೆ ದರ್ಗಾ ಪ್ರವೇಶದ ಜತೆಗೆ ವಿಶೇಷ ಜಾತ್ರೆಯೂ ಆಸಾರ್ ಮೊಹಲ್ಲಾದಲ್ಲಿ ನಡೆಯುವುದರಿಂದ ಮಹಿಳೆಯರ ಪಾಲಿಗೆ ಇದು ಅವಿಸ್ಮರಣೀಯ ದಿನವೆಂದು ಹೇಳುತ್ತಾರೆ ಬೆಂಗೇರಿಯ ನಿವಾಸಿ ಮಾಹೇಜಬೀನ ದೊಡ್ಡಮನಿ.
ಇಸ್ಲಾಂ ಮಹಿಳೆಯರು ಸಂತಸ, ಸಂಭ್ರಮದಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಇಂಥ ದಿನ ಇದೀಗ ಮತ್ತೆ ಬಂದಿದ್ದು ಜಾತ್ರೆಯಲ್ಲಿ ಪಾಲ್ಗೊಳ್ಳಲು ಮಹಿಳೆಯರು ತುದಿಗಾಲಲ್ಲಿ ನಿಂತಿದ್ದಾರೆ.

 ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement