ಮಗುವಿನ ಬೆಳವಣಿಗೆಯಲ್ಲಿ ತಾಯಿ ಪಾತ್ರ ಪ್ರಮುಖ
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 14
ಮಗುವಿನ ಎಲ್ಲ ಹಂತದ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಮಹತ್ವದ್ದು ಎಂದು ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಹುಡೇದ ಹೇಳಿದರು.
ಚಿಲಿಪಿಲಿ ಹಾಗೂ ಗುಬ್ಬಚ್ಚಿ ಗೂಡು ಶಾಲಾ ಮಕ್ಕಳ ವಾರ್ಷಿಕೋತ್ಸವದ ಚಟುವಟಿಕೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಮನೆಯಲ್ಲಿ ಶಿಕ್ಷಣದ ವಾತಾವರಣ ಇರುವಂತೆ ಪಾಲಕರು ನೋಡಿಕೊಳ್ಳಬೇಕು. ಹಾಗೆಯೇ ದೃಶ್ಯ ಮಾಧ್ಯಮವನ್ನು ಮಕ್ಕಳು ದುರುಪಯೋಗ ಪಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಅತಿಥಿಯಾಗಿದ್ದ ಧನುಶ್ರೀ ಹಿರೇಮಠ ಮಾತನಾಡಿ, ಮಕ್ಕಳನ್ನು ಬೆಳೆಸುವುದು ಒಂದು ಸವಾಲು. ಮಕ್ಕಳಲ್ಲಿರುವ ಸಮಸ್ಯೆಗಳನ್ನು ಅರಿಯುವಂಥ ಪ್ರಯತ್ನ ಪಾಲಕರಿಂದ ನಡೆಯಬೇಕು ಎಂದರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಹೆಚ್ಚು ಕ್ರಿಯಾಶೀಲರಾಗುತ್ತಾರೆ ಎಂದು ಶಿಕ್ಷಕಿ ವಿ.ಎನ್. ಕೀರ್ತಿವತಿ ಹೇಳಿದರು. ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ಲಿಂಗರಾಜ ರಾಮಾಪುರ, ವಿಜಯಲಕ್ಷ್ಮಿ ಸುಭಾಂಜಿ, ಗಿರಿಜಾ ಹೊಟ್ಟಿ, ಭಾರತಿ, ಪ್ರಗತಿ, ಶಕುಂತಲಾ ಮತ್ತಿತರರು ಹಾಜರಿದ್ದರು. ವಿದ್ಯಾ ವಗ್ಗನಗೇರಿ ನಿರೂಪಿಸಿದರು.