ಮಹಾಪ್ರಬಂಧಕರೊಂದಿಗೆ ಸಂಸದ ಜೋಶಿ ಚರ್ಚೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ.14
ನೈಋತ್ಯ ರೇಲ್ವೆ ಮಹಾಪ್ರಬಂಧಕರಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ಪ್ರದೀಪ ಸಕ್ಸೆನಾ ಅವರನ್ನು ಈಚೆಗೆ ಸಂಸದ ಪ್ರಹ್ಲಾದ ಜೋಶಿ ಭೇಟಿ ಮಾಡಿ ರಾಜ್ಯದ ಮತ್ತು ಈ ಭಾಗದ ರೇಲ್ವೆ ಯೋಜನೆಗಳ ಕುರಿತು ಚರ್ಚಿಸಿದರು.
ಹುಬ್ಬಳ್ಳಿ ರೇಲ್ವೆ ನಿಲ್ದಾಣದ ಸುಧಾರಣಾ ಕಾಮಗಾರಿಗಳು ಪೂರ್ಣಗೊಂಡಿದ್ದರೂ ಹೊಸ ನಿಲ್ದಾಣದಲ್ಲಿ ಸ್ವಯಂಚಾಲಿತ ಮೆಟ್ಟಿಲುಗಳ ಕಾಮಗಾರಿ ಆರಂಭವಾಗಿಲ್ಲ.
ಅದೇ ರೀತಿ ಹುಬ್ಬಳ್ಳಿ-ಅಂಕೋಲಾ ಹೊಸಮಾರ್ಗದ ಪ್ರಗತಿ ಮತ್ತು ರಾಜ್ಯದ ಇತರ ಹೊಸಮಾರ್ಗಗಳ ಬಗ್ಗೆ ಸಂಸದ ಜೋಶಿ ಮತ್ತು ಪಿ.ಜೆ. ಸಕ್ಸೆನಾ ಮಧ್ಯೆ ವಿವರವಾದ ಚರ್ಚೆ ನಡೆಯಿತು. ಹುಬ್ಬಳ್ಳಿ-ಲೋಕಮಾನ್ಯ ತಿಲಕ (ಮುಂಬೈ) ಸಾಪ್ತಾಹಿಕ ರೈಲು ನಿತ್ಯ ಸಂಚರಿಸಬೇಕು. ಹುಬ್ಬಳ್ಳಿ-ಸಿಕಂದರಾಬಾದ್ ರೈಲು ನಿತ್ಯ ಸಂಚರಿಸಬೇಕು. ಹುಬ್ಬಳ್ಳಿ-ಮುಂಬೈ ರೈಲಿಗೆ ಅಳ್ನ್ನಾವರದಲ್ಲಿ ನಿಲುಗಡೆ ಕಲ್ಪಿಸಬೇಕು. ಧಾರವಾಡ-ಮೈಸೂರು ರೈಲಿಗೆ ಯಲವಿಗಿ ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಲಾಗಿದ್ದು ಈ ಸೌಲಭ್ಯ ಮುಂದುವರಿಸಬೇಕು. ಸಂಶಿ ಗ್ರಾಮದಲ್ಲಿನ ರೇಲ್ವೆ ಬ್ರಿಜ್ ಸಮಸ್ಯೆ, ಧಾರವಾಡ ತಾಲೂಕಿನ ಕೂಗಲಗೇರಿ ಕಾಶಿನಟ್ಟಿ ಹಾಗೂ ಪುರ ಗ್ರಾಮಗಳ ಹತ್ತಿರದ ರೇಲ್ವೆಗೇಟ್ ಸಮಸ್ಯೆಗಳು ಸೇರಿದಂತೆ ಇತರ ವಿಷಯಗಳ ಬಗ್ಗೆ ವಿವರವಾದ ಚರ್ಚೆ ನಡೆಯಿತು. ಹುಬ್ಬಳ್ಳಿ-ಅಂಕೋಲಾ ಹೊಸ ಮಾರ್ಗಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ತಾಲೂಕಿನ ಮಾವನೂರ ಗ್ರಾಮದ ಭೂಸ್ವಾಧೀನ ಕುರಿತು ಚರ್ಚಿಸಲಾಗಿದೆ. ಈ ಸಂದರ್ಭದಲ್ಲಿ ಸಂಶಿ ಗ್ರಾಮಪಂಚಾಯತಿ ಸದಸ್ಯರಾದ ಪ್ರಕಾಶ ಪಾಟೀಲ, ಶಿವಣ್ಣ ಸೊರಟಿ, ಎ.ಬಿ. ಉಪ್ಪಿನ, ಆರ್.ಜಿ. ಪಾಟೀಲ, ಸಿ.ವಿ. ಕೋರಿ, ಸಿ.ವಿ. ಬೆಳ್ಳಟ್ಟಿ, ಬಸಣ್ಣ ಉಣಕಲ್, ಎಲ್ಲಪ್ಪಗೌಡ ಬಳಗಾನೂರ, ಉಮೇಶಗೌಡ ಪಾಟೀಲ ಇದ್ದರು.