ಶೋಷಿತರ ಧ್ವನಿಯಾದ ಪುಲೆ ದಂಪತಿ
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 14
ಮೇಲ್ವರ್ಗ ಮತ್ತು ಕೇಳವರ್ಗದ ಮಧ್ಯೆ ಸೃಷ್ಟಿಗೊಂಡ ಸಾಮಾಜಿಕ ಸ್ತರದಲ್ಲಿ ಕೆಳವರ್ಗ, ಶೋಷಿತರು ಮತ್ತು ಕಾರ್ಮಿಕರನ್ನು ಹೋರಾಟದ ಮುಂಚೂಣಿಯಲ್ಲಿ ಪುಲೆ ದಂಪತಿ, ಡಾ. ಅಂಬೇಡ್ಕರ್ ಪ್ರತಿನಿಧಿಸಿದರು ಎಂದು ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹೇಳಿದರು.
ಕಸಾಪ ಸಭಾಭವನದಲ್ಲಿ ಸಾವಿತ್ರಿಬಾಯಿ ಪುಲೆ ಕುರಿತು ಜರುಗಿದ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೇಶ್ವೆ ಕಾಲದಲ್ಲಿ ಮೇಲ್ವರ್ಗದವರಿಗೆ ದೊರೆತ ಪ್ರೋತ್ಸಾಹ, ಮೇಲ್ವರ್ಗ-ಕೆಳವರ್ಗದ ಮಧ್ಯೆ ಕಂದಕ ಸೃಷ್ಟಿಯಾಗುವಂತೆ ಮಾಡಿತು. ಇದರ ಪರಿಣಾಮವಾಗಿ ಆರಂಭವಾದ ಪ್ರತಿಭಟನೆಗಳಲ್ಲಿ ಶೋಷಿತರ ಪರವಾಗಿ ನಿಂತಿದ್ದು ಪುಲೆ. ಕೆಳವರ್ಗದವರಿಗೆ ಬ್ರಿಟಿಷರಿಗಿಂತ ಮೇಲ್ವರ್ಗ ಅಪಾಯಕಾರಿಯಾಗಿ ಕಾಣಿಸಿತು. ಬ್ರಿಟಿಷರಿಂದ ನಮಗೆ ಅನ್ಯಾಯಕ್ಕಿಂತ ನ್ಯಾಯವೇ ದೊರಕಿದೆ ಎಂದು ಮೇಲ್ವರ್ಗದವರ ವಿರುದ್ಧ ಸೆಟೆದು ನಿಂತರು.
ಈ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಸಾಮಾಜಿಕ ಚಳವಳಿಯಲ್ಲಿ ರಾಧಾಕೃಷ್ಣ ಗೋಖಲೆ, ಟಿಳಕ, ರಾನಡೆ ಒಂದು ವರ್ಗದಲ್ಲಿ ಕಾಣಿಸಿಕೊಂಡರೆ, ಷಾಹು ಮಹಾರಾಜ, ಅಂಬೇಡ್ಕರ್ ಮತ್ತು ಪುಲೆ ದಂಪತಿ ಇನ್ನೊಂದು ವರ್ಗವನ್ನು ಪ್ರತಿನಿಧಿಸಿದರು ಎಂದರು. ಶೋಷಿತರ, ಮಹಿಳೆಯರ, ನೊಂದವರ, ಬಡವರ, ಕೂಲಿ ಕಾರ್ಮಿಕರ ಧ್ವನಿಯಾಗಿ ಪುಲೆ ದಂಪತಿ ಕೆಲಸ ಮಾಡಿದರು ಎಂದು ಹೇಳಿದರು. ವಿಶೇಷ ಉಪನ್ಯಾಸ ನೀಡಿದ ಅಥಣಿ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ಜೆ.ಪಿ. ದೊಡಮನಿ ಶೋಷಿತರಿಗೆ, ಬಡವರಿಗೆ ಶಿಕ್ಷಣ ನೀಡುವ ಮೂಲಕ ಸಾವಿತ್ರಿಬಾಯಿ ಪುಲೆ ಅವರು ಶಿಕ್ಷಣದಲ್ಲಿ ಕ್ರಾಂತಿ ಮಾಡಿದ್ದಾರೆ ಎಂದರು.
ಈ ದೇಶದ ಮೂಲ ನಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಶಿಕ್ಷಣವೊಂದೇ ಬದಲಾವಣೆ ಅಸ್ತ್ರ ಎಂದ ನಂಬಿದ ಪುಲೆ, ಶೋಷಿತರಿಗೆ ಶಿಕ್ಷಣ ನೀಡುವುದಕ್ಕೆ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಅವರು ಶಾಲೆಗೆ ಹೋಗುವಾಗ ಅವರ ಮೇಲೆ ಕೊಳೆತ ಮೊಟ್ಟೆ ಹಾಗೂ ಸೆಗಣಿ ಎಸೆಯಲಾಗುತ್ತಿತ್ತು. ಇದೇ ಕಾರಣಕ್ಕೆ ಪುಲೆ ಅವರು ಯಾವತ್ತಿಗೂ ಚೀಲದಲ್ಲಿ ಇನ್ನೊಂದು ಜೊತೆ ಬಟ್ಟೆ ಒಯ್ಯುತ್ತಿದ್ದರು. ಶಾಲೆಗೆ ಹೋದ ನಂತರ ಗಲೀಜು ಬಟ್ಟೆಗಳನ್ನು ಬದಲಿಸಿದ ನಂತರ ಪಾಠ ಮಾಡುತ್ತಿದ್ದರು ಎಂದು ಹೇಳಿದರು. ಸಮಾಜದ ಎಲ್ಲ ವರ್ಗಗಳ ಹಿತ ಬಯಸಿ ಮಾನವೀಯತೆಯಿಂದ ಆತ್ಮಸಾಕ್ಷಿಯಾಗಿ ಸಮಾಜ ಸೇವೆ ಮಾಡಿದ್ದಾರೆ. ಆದರೆ, ಮೇಲ್ವರ್ಗದವರು ಇವರ ಚರಿತ್ರೆ ಮುಚ್ಚಿಡುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಡಾ. ಜೆ.ಪಿ. ದೊಡಮನಿ ವಿಷಾದಿಸಿದರು.
ಡಾ. ಶಿವಾನಂದ ಗಾಳಿ, ಡಾ. ಬಾಳಣ್ಣ ಶೀಗಿಹಳ್ಳಿ, ಬಿ. ಸುಕನ್ಯಾ, ಡಾ. ಎಂ.ಡಿ. ವಕ್ಕುಂದ, ಮೋಹನ ನಾಗಮ್ಮನವರ ಇದ್ದರು. ಅನಿಲ ದೇಸಾಯಿ ಸ್ವಾಗತಿಸಿದರು. ಡಾ. ವೈ.ಎಂ. ಭಜಂತ್ರಿ ನಿರೂಪಿಸಿದರು. ಚನ್ನಪ್ಪ ಅಂಗಡಿ ವಂದಿಸಿದರು.