ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಜಂಟಿ ನಿರ್ದೇಶಕರ ಕಚೇರಿ ಆರಂಭಕ್ಕೆ ಆಗ್ರಹ

Lingaraj Badiger
Updated On : 16 Jan 2014, 10:48 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 15
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿಭಾಗೀಯ ಹಂತದ ಕಚೇರಿಯನ್ನು ಜಂಟಿ ನಿರ್ದೇಶಕರ ಹುದ್ದೆ ಹಾಗೂ ಪೂರಕ ಸಿಬ್ಬಂದಿಯೊಂದಿಗೆ ಆರಂಭಿಸಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಆಗ್ರಹಿಸಿದ್ದಾರೆ.
ಈ ಕುರಿತಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರಿಗೆ ಪತ್ರ ಬರೆದಿರುವ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಹಂತದಲ್ಲಿ ಪಿಯುಸಿ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ರಾಜ್ಯದಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಸುಮಾರು 11 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಎಂದಿದ್ದಾರೆ.
ಈ ಪೈಕಿ ಬೆಳಗಾವಿ ವಿಭಾಗ ಮತ್ತು ಗುಲ್ಬರ್ಗಾ ವಿಭಾಗದಲ್ಲಿ ಸುಮಾರು 6 ಲಕ್ಷ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ರಾಜ್ಯದ 4200 ಕಾಲೇಜ್‌ಗಳಲ್ಲಿ ಸುಮಾರು 2500 ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಾಲೇಜ್‌ಗಳಿವೆ. ಸುಮಾರು 15,000 ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ವಿಷಯಗಳ ಕಾರ್ಯಾಗಾರ ಗುಣಮಟ್ಟದ ಶಿಕ್ಷಣ ನೀಡಲು ಶೈಕ್ಷಣಿಕ ಚಟುವಟಿಕೆ ಹೆಚ್ಚು ನಡೆಸುವುದು ಅವಶ್ಯಕವಾಗಿದೆ. ವಿದ್ಯಾರ್ಥಿಗಳು, ಪಾಲಕರು ಹಾಗೂ ಇಲಾಖೆಯ ಸಿಬ್ಬಂದಿಗಳು ಕೆಲಸ ಕಾರ್ಯಗಳಿಗೆ ಜಿಲ್ಲೆಯ ಉಪನಿರ್ದೇಶಕರ ಕಚೇರಿ ಹೊರತುಪಡಿಸಿದರೆ ಎಲ್ಲ ಕೆಲಸಗಳಿಗೆ ದೂರದ ಬೆಂಗಳೂರಿನ ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ ಎಂದು ಲಿಂಬಿಕಾಯಿ ವಿವರಿಸಿದ್ದಾರೆ.
ವಿಶೇಷವಾಗಿ 6 ಲಕ್ಷ ವಿದ್ಯಾರ್ಥಿಗಳು ಕಾಲೇಜ್ ಬದಲಾವಣೆ, ದ್ವಿಪ್ರತಿ ಅಂಕಪಟ್ಟಿ, ಸಂಯೋಜನ ಬದಲಾವಣೆ ಇನ್ನಿತರ ಕಾರ್ಯಗಳಿಗೆ ಈ ಭಾಗದ ವಿದ್ಯಾರ್ಥಿಗಳಿಗೆ ತೀರಾ ತೊಂದರೆಯಾಗುತ್ತಿದೆ. ಆದ್ದರಿಂದ ಬೆಳಗಾವಿಯಲ್ಲಿ ವಿಭಾಗಮಟ್ಟದ ನೂತನ ಕಚೇರಿಯನ್ನು ಜಂಟಿ ನಿರ್ದೇಶಕರ ಹುದ್ದೆ ಹಾಗೂ ಪೂರಕ ಸಿಬ್ಬಂದಿಯನ್ನು ನಿಯೋಜನೆ ಅಥವಾ ಸ್ಥಳಾಂತರಿಸಿ ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅನುಕೂಲವಾಗುವಂತೆ ತಕ್ಷಣ ಕ್ರಮಕೈಗೊಳ್ಳಬೇಕೆಂದು ಸಚಿವರನ್ನು ಪತ್ರದ ಮೂಲಕ ಲಿಂಬಿಕಾಯಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement