ಧಾರವಾಡ ಘರ್ಷಣೆ: ಮೂವರ ಸೆರೆ
ಧಾರವಾಡ: ಇಲ್ಲಿನ ಕಮಲಾಪುರದದಲ್ಲಿ ನಡೆದ ಎರಡು ಕೋಮಿನ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬುಧವಾರ ಸಹ ಈ ಪ್ರದೇಶದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿ ಇತ್ತು.
ಘಟನೆ ಸಂಬಂಧಿಸಿದಂತೆ ಮಂಗಳವಾರ ತಡರಾತ್ರಿ ಒಂದು ಕೋಮಿನ ಬಸವರಾಜ ಮಹಾದೇವಪ್ಪ ರಾಮಜೀ, ಗೋಪಾಲ ಸಂಕೋಜಿ ಹಾಗೂ ಮಂಜುನಾಥ ಬಸಲಿಂಗಪ್ಪ ಕಮತಿ ಎಂಬುವರನ್ನು ಉಪ ನಗರ ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಬಂಧಿತ ಕೋಮಿನ ಕೆಲವರಿಂದ ತೀವ್ರ ವಿರೋಧ ಉಂಟಾಗಿದ್ದು, ಇನ್ನೊಂದು ಕೋಮಿನ ಜನರನ್ನು ಬಂಧಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಬಂಧಿತರು ಇನ್ನೊಂದು ಕೋಮಿನ ಮುಖಂಡ ಸೇರಿದಂತೆ 200 ಜನರ ಮೇಲೆ ಪ್ರತಿದೂರು ಸಹ ಸಲ್ಲಿಸಿದ್ದಾರೆ. ದೂರಿನ ಅನ್ವಯ ಪೊಲೀಸರು ಇನ್ನೊಂದು ಕೋಮಿನ ಜನರನ್ನು ಬಂಧಿಸುವ ಸಾಧ್ಯತೆಗಳು ದಟ್ಟವಾಗಿವೆ.
ಸೂಕ್ತ ಬಂದೋಬಸ್ತ್: ಮಂಗಳವಾರ ರಾತ್ರಿ ಮತ್ತೆ ಗಲಾಟೆಯಾಗುವ ಸಂಭವದಿಂದ 100ಕ್ಕೂ ಹೆಚ್ಚು ಪೊಲೀಸರು ಬುಧವಾರ ಬೆಳಗ್ಗೆವರೆಗೂ ಇಡೀ ಕಮಲಾಪುರ ಸುತ್ತ ಬಂದೋಬಸ್ತ್ ಮಾಡಿದರು. ಮುನ್ನೆಚ್ಚರಿಕೆಯಿಂದ ಬುಧವಾರ ಪೂರ್ತಿ ದಿನವೂ ಪೊಲೀಸರ ಕಣ್ಗಾವಲು ಅಲ್ಲಿ ಮುಂದುವರಿದಿತ್ತು. ಅಲ್ಲದೇ, ಎರಡು ಕೋಮಿನ ಮುಖಂಡರ ಜೊತೆಗೆ ಪೊಲೀಸ್ ಅಧಿಕಾರಿಗಳು ಶಾಂತತೆ ಕಾಪಾಡಲು ಮನವಿ ಮಾಡಿದ್ದೂ ಆಗಿದೆ. ಇಷ್ಟಾದರೂ ಸಹ ಬುಧವಾರ ಸಂಜೆ ವರೆಗೂ ಕಮಲಾಪುರದ ಓಣಿ ಓಣಿಗಳಲ್ಲಿ ಜನ ಗುಂಪು -ಗುಂಪಾಗಿ ನಿಂತು ಚರ್ಚೆ ನಡೆಸುವುದು ಮಾತ್ರ ನಿಂತಿರಲಿಲ್ಲ. ಕಮಲಾಪುರದ ಪರಿಸ್ಥಿತಿ ಗಮನಿಸಿದರೆ ಇನ್ನೂ ಒಂದೆರಡು ದಿನ ಈ ಪ್ರದೇಶದಲ್ಲಿ ಪೊಲೀಸರು ಬಂದೋಬಸ್ತ್ ನೀಡುವ ಸಾಧ್ಯತೆಗಳಿವೆ.