ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡದಲ್ಲಿ ಸಂಕ್ರಾಂತಿ ಸಂಭ್ರಮ

Lingaraj Badiger
Updated On : 16 Jan 2014, 10:53 am

ಧಾರವಾಡ: ಎಳ್ಳು- ಬೆಲ್ಲ- ಕುಸರೆಳ್ಳು- ಸಕ್ಕರೆ ಅಚ್ಚನ್ನು ಸಂಬಂಧಿಕರಿಗೆ ಸುತ್ತಲಿನ ಮನೆಯವರಿಗೆ ಹಂಚಿ ಶುಭ ಕೋರುವ ಹಬ್ಬ ಸಂಕ್ರಮಣ. ಇದಕ್ಕಿಂತ ಹೆಚ್ಚಾಗಿ ಸೂರ್ಯ ತನ್ನ ಪಥ ಬದಲಿಸುವ ಈ ದಿನದ ಹಬ್ಬವನ್ನು ಧಾರವಾಡದಲ್ಲಿ ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಎಳ್ಳಿನ ಜತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಕೊಡುವ ಸಂಪ್ರದಾಯವಿದೆ. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ ಎಳ್ಳು ತಯಾರಿಸಿ ಹಂಚಲಾಯಿತು. ಬೆಳಗ್ಗೆ ಬೇಗ ಎದ್ದು ಅಳ್ಳು, ಅರಿಷಿನ ಹಚ್ಚಿಕೊಂಡು ಸ್ನಾನ ಮಾಡುವ ಮೂಲಕ ಹಬ್ಬದ ಆರಂಭವಾಗಿ ಸಂಜೆ ಎಳ್ಳು-ಬೆಲ್ಲ ಕೊಡುವ ಮೂಲಕ ಹಬ್ಬಕ್ಕೆ ಕೊನೆ ಹಾಡಿದರು. ಈ ಮಧ್ಯೆ ಮಧ್ಯಾಹ್ನ ತರಹೇವಾರಿ ತಿನಿಸುಗಳನ್ನು ಸಿದ್ಧಪಡಿಸಿ ಊಟ, ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆಯೂ ಸಾಮಾನ್ಯವಾಗಿತ್ತು.
ಒಂದೆಡೆ ಹಬ್ಬಗಳು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರೆ, ಇನ್ನೊಂದೆಡೆ ಬದಲಾಗುವ ವಾತಾವರಣಕ್ಕೆ ಅನುಗುಣವಾಗಿ ಆಹಾರ ಪದ್ಧತಿಯಲ್ಲೂ ಬದಲಾವಣೆ ಬರಬೇಕು ಎನ್ನುವ ಆಶಯ ಹೊಂದಿವೆ. ಈ ಹಿನ್ನೆಲೆಯಲ್ಲಿ ಜನ ಹಬ್ಬದ ಸಂದರ್ಭದಲ್ಲಿಯೇ ಆ ಸಂದರ್ಭಕ್ಕೆ ಅನುಗುಣವಾದ ವಿಶೇಷ ಭಕ್ಷ್ಯಗಳನ್ನು ತಯಾರಿಸಲಾಗಿತ್ತು. ಸಂಕ್ರಾಂತಿಯ ಸಂದರ್ಭದಲ್ಲಿ ಸಜ್ಜಿ, ಜೋಳದ ರೊಟ್ಟಿ, ಬದ್ನೆಕಾಯಿ ಪಲ್ಯೆ, ವಿವಿಧ ಚಟ್ನಿ, ಶೇಂಗಾ ಹೋಳಿಗೆ ಇಲ್ಲಿನ ಪದ್ಧತಿ. ಹೀಗೆ ತಯಾರಿಸಿದ ವಿವಿಧ ಭಕ್ಷ್ಯಗಳನ್ನು ತಯಾರಿಸಿ, ಹೊಲ, ಪ್ರಾಕೃತಿಕ ಸೌಂದರ್ಯ ಹೊಂದಿರುವ ಪ್ರದೇಶಗಳಿಗೆ ಕುಟುಂಬ, ಹಿತೈಷಿಗಳ ಸಮೇತ ಹೋಗಿ ಸಹಭೋಜನ ಮಾಡುವುದು ಈ ಹಬ್ಬದ ವಿಶೇಷತೆ. ಅಂತೆಯೇ ನಗರ ಹಾಗೂ ಗ್ರಾಮೀಣ ಪ್ರದೇಶದ ಜನತೆ ಸೋಮವಾರ ಭರ್ಜರಿ ಊಟ ಸವಿದರು. ವಿಶೇಷವಾಗಿ ಸಾಧನಕೇರಿಯ ಬಾರೋ ಸಾಧನಕೇರಿ ಉದ್ಯಾನವನ, ಕಿತ್ತೂರು ಚೆನ್ನಮ್ಮ ಪಾರ್ಕ್ ಕೆಲಗೇರಿ ಕೆರೆ ಆವರಣ, ಸೋಮೇಶ್ವರ ದೇವಸ್ಥಾನ ಹಾಗೂ ನೀರಸಾಗರದಲ್ಲೂ ಸಹಭೋಜನದ ದೃಶ್ಯ ಎದ್ದು ಕಾಣುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement