ರಾಷ್ಟ್ರ ಮಟ್ಟದ ಅಥ್ಲೆಟಿಕ್‌ನಲ್ಲಿ ಸಾಧನೆ
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 15
ರಾಷ್ಟ್ರ ಮಟ್ಟದ ಅಥ್ಲೆಟಿಕ್ ಮತ್ತು ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಗಳ ಟೆಕ್ವಾಂಡೊ ಕ್ರೀಡಾಕೂಟದಲ್ಲಿ ಸಾಧನೆಗೈದ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯಿ) ಕ್ರೀಡಾಪಟುಗಳನ್ನು ನಗರದಲ್ಲಿ ಬುಧವಾರ ಸ್ವಾಗತಿಸಲಾಯಿತು.
ಜಾರ್ಖಂಡ ರಾಜ್ಯದ ರಾಂಚಿಯಲ್ಲಿ ಜ. 8ರಿಂದ ನಡೆದ ರಾಷ್ಟ್ರ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದ 19 ವರ್ಷದೊಳಗಿನ ವಯೋವುತಿಯ ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ರಾಹುಲ ನಾಗಪ್ಪ ಅಷ್ಟಗಿ ಐದು ಕಿ.ಮೀ. ಅಂತರವನ್ನು 22.36 ನಿಮಿಷದಲ್ಲಿ ಕ್ರಮಿಸಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ವಿಜೇತನಾಗಿದ್ದಾನೆ. ಇನ್ನೋರ್ವ ವಿದ್ಯಾರ್ಥಿ ಕಿರಣ ದೇಸಾಯಿ ಚೆನ್ನೈನ ಸತ್ಯಭಾಮಾ ವಿಶ್ವವಿದ್ಯಾಲಯದಲ್ಲಿ ಜರುಗಿದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ 63 ಕೆ.ಜಿ. ತೂಕದ ವಿಭಾಗದ ಟೆಕ್ವಾಂಡೊನಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಪಡೆದಿದ್ದಾನೆ.
ಬುಧವಾರ ಬೆಳಗ್ಗೆ ನಗರದ ಸಿವಿಲ್ ನ್ಯಾಯಾಲಯದ ಎದುರು ಇಬ್ಬರೂ ಕ್ರೀಡಾಪಟುಗಳನ್ನು ಭಾರತೀಯ ಕ್ರೀಡಾ ಪ್ರಾಧಿಕಾರದ ವತಿಯಿಂದ ಹಾರ ಹಾಕಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಶಿವು ಹಿರೇಮಠ, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ, ಜಿಪಂ ಸದಸ್ಯ ಕಸ್ತೂರಿ ಅಷ್ಟಗಿ, ಮಾಜಿ ಜಿಪಂ ಸದಸ್ಯ ತವನಪ್ಪ ಅಷ್ಟಗಿ, ಅಡಿವೆಪ್ಪ ಹೊನ್ನಪ್ಪನವರ, ನಾಗಪ್ಪ ಅಷ್ಟಗಿ, ವೀರಶೈವ ಸಮಾಜದ ಮುಖಂಡ ಶಿವಾನಂದ ಕವಳಿ, ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಗಣೇಶ ವಾಡಕರ, ತರಬೇತುದಾರರಾದ ಜಿ. ಬೆನಕಪ್ರಸಾದ, ಬಿ. ಶಂಕರಪ್ಪ, ಕೆ. ಸಮನಕುಮಾರ, ಅಶೋಕ ಮೋಟೆಬೆನ್ನೂರ, ರಾಮಚಂದ್ರ ಶಿಲಾರೆ, ಶ್ರೀನಿವಾಸ ಕೆ.ಎಸ್., ಈಶ್ವರ ಅಂಗಡಿ, ಆರ್.ಎಸ್. ಮೊಕಾಶಿ ಇದ್ದರು.