ಶಿಂಗಟಾಲೂರಿನಲ್ಲಿ ಸಂಭ್ರಮದ ಮಕರ ಸಂಕ್ರಮಣ
ಮುಂಡರಗಿ: ತಾಲೂಕಿನ ಶಿಂಗಟಾಲೂರು ವೀರಭದ್ರೇಶ್ವರ ಕ್ಷೇತ್ರದಲ್ಲಿ ಮಂಗಳವಾರ ಹಾಗೂ ಬುಧವಾರ 2 ದಿನಗಳ ಕಾಲ ಸಂಭ್ರಮದಿಂದ ಸಂಕ್ರಾತಿಯನ್ನು ಆಚರಿಸಲಾಯಿತು.
ಬೆಳಗ್ಗೆಯಿಂದ ಸ್ಥಳೀಯ ಹಾಗೂ ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಭಕ್ತರು, ಪ್ರವಾಸಿಗರು ಇಲ್ಲಿಗೆ ಆಗಮಿಸುವ ಮೂಲಕ ಪುಣ್ಯಸ್ನಾನ ಮಾಡಿ ಬರದ ವಾತಾವರಣವಿದ್ದರೂ ಪ್ರತಿವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜನತೆ ಸಂಕ್ರಾತಿ ಹಬ್ಬವನ್ನು ಸಡಗರದ ಆಚರಣೆಯಲ್ಲಿ ತೊಡಗಿರುವುದು ಕಂಡು ಬಂದಿತು.
ಶಿಂಗಟಾಲೂರ ಕ್ಷೇತ್ರಕ್ಕೆ ಬೆಳಗ್ಗೆಯಿಂದಲೇ ಸಾರ್ವಜನಿಕರು ಟ್ರ್ಯಾಕ್ಟರ್, ಚಕ್ಕಡಿ, ಟಂಟಂ, ಕಾರು, ಜೀಪ್ ಹಾಗೂ ಮೋಟಾರ ಬೈಕ್ಗಳ ಮೂಲಕ ತಂಡೋಪತಂಡವಾಗಿ ಹರಿದು ಬಂದರು. ಸಾರಿಗೆ ಇಲಾಖೆಯಿಂದಲೂ ಕ್ಷೇತ್ರಕ್ಕೆ ವಿಶೇಷ ಬಸ್ಗಳನ್ನು ಓಡಿಸಲು ವ್ಯವಸ್ಥೆ ಮಾಡಲಾಗಿತ್ತು. ಆಗಮಿಸಿದ್ದ ಜನತೆ ಇಲ್ಲಿನ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ನಂತರ ನದಿಯ ದಂಡೆಯಲ್ಲಿ ಉಸುಕಿನಿಂದ ಈಶ್ವರ ಲಿಂಗವನ್ನು ತಯಾರಿಸಿ ಅದಕ್ಕೆ ಪೂಜೆ ಸಲ್ಲಿಸಿ, ಮನೆಯಿಂದ ತಂದಿದ್ದ ವಿವಿಧ ರೀತಿಯ ಹೋಳಿಗೆಗಳು ಹಾಗೂ ಇತರೆ ಸಿಹಿ ತಿನಿಸನ್ನು ಎಡೆ ಮಾಡಿ, ಒಬ್ಬರಿಗೊಬ್ಬರು ಎಳ್ಳು-ಬೆಲ್ಲ ವಿನಿಮಯ ಮಾಡಿಕೊಂಡರು. ನಂತರ ಗುಡ್ಡದ ಮೇಲಿರುವ ಶಿಂಗಟಾಲೂರ ವೀರಭದ್ರೇಶ್ವರ ದೇವರ ದರ್ಶನ ಮಾಡಿಕೊಂಡು, ಬಳಿಕ ಹೊಳೆಯ ದಂಡೆ ಮೇಲೆ ಹಾಗೂ ಪಕ್ಕದಲ್ಲಿಯೇ ಇರುವ ಉದ್ಯಾನವನದಲ್ಲಿ ಕುಳಿತುಕೊಂಡು ಊಟ ಮಾಡುವುದು ಕಂಡು ಬಂದಿತು. ಶಿಂಗಟಾಲೂರ ಕ್ಷೇತ್ರಕ್ಕೆ ಗದಗ ಜಿಲ್ಲೆ ಸೇರಿದಂತೆ ಪಕ್ಕದ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದರು.
ಹಮ್ಮಿಗಿ, ಕೊರ್ಲಹಳ್ಳಿ ಹತ್ತಿರವೂ ಪುಣ್ಯಸ್ನಾನ: ಕೆಲವು ಜನರು ತಾಲೂಕಿನ ಹಮ್ಮಿಗಿ ಹತ್ತಿರವಿರುವ ಶಿಂಗಟಾಲೂರು ಏತನೀರಾವರಿ ಸೇತುವೆ ಬಳಿ ತೆರಳಿದರೆ, ಇನ್ನು ಕೆಲವರು ಕೊರ್ಲಹಳ್ಳಿ ಹತ್ತಿರವಿರುವ ತುಂಗಭದ್ರಾ ನದಿಗೆ ತೆರೆಳಿ ಅಲ್ಲಿಯೇ ಪುಣ್ಯಸ್ನಾನ ಮಾಡಿದರು. ನದಿಯ ಆಚೆಯ ದಂಡೆಯಲ್ಲಿರುವ ಬಳ್ಳಾರಿ ಜಿಲ್ಲೆಯ ಮದಲಗಟ್ಟಿ ಹನುಮಂತ ದೇವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು.
ನಾವು ಚಿಕ್ಕಂದಿನಿಂದಲೂ ಇಲ್ಲಿನ ಸಂಕ್ರಮಣ ನೋಡುತ್ತಾ ಬಂದಿದ್ದು, ಬೇರೆಡೆ ಜರುಗುವ ಸಂಕ್ರಾಂತಿಗೆ ಹೋಲಿಸಿದರೆ ಶಿಂಗಟಾಲೂರು ಕ್ಷೇತ್ರದಲ್ಲಿ ಯಾವುದೇ ಗಲಾಟೆಗಳು ಜರುಗುವುದಿಲ್ಲ ಹಾಗೂ ಸ್ವಚ್ಛತೆ ದೃಷ್ಟಿಯಿಂದಲೂ ಒಳ್ಳೆಯದು. ಅದೆಲ್ಲಕ್ಕಿಂತ ಇಲ್ಲಿಯೇ ವೀರಭದ್ರೇಶ್ವರ ದೇವಸ್ಥಾನವಿರುವುದರಿಂದ ಭಕ್ತರು ಸಂಕ್ರಮಣದ ಜತೆಗೆ ದೇವರ ದರ್ಶನವನ್ನೂ ಮಾಡುವ ಉದ್ದೇಶದಿಂದ ಕುಟುಂಬ ಸಮೇತರಾಗಿ ಆಗಮಿಸುತ್ತಾರೆ ಎಂದು ಶಿಂಗಟಾಲೂರು ಗ್ರಾಮದ ಬಸವರಾಜ ಬಿಳಿಮಗ್ಗದ ಹಾಗೂ ಶೀರನಹಳ್ಳಿ ಗ್ರಾಮದ ಹೂವಿನ ವ್ಯಾಪಾರಿ ಹನುಮಂತ ಪೂಜಾರ ತಿಳಿಸಿದರು.