ಸಂಭ್ರಮದ ಮಕರ ಸಂಕ್ರಾಂತಿ ಆಚರಣೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 15
ಮಕರ ಸಂಕ್ರಾಂತಿ ಹಬ್ಬವನ್ನು ಹುಬ್ಬಳ್ಳಿಯಲ್ಲಿ ಸಂತಸ ಸಂಭ್ರಮದಿಂದ ಆಚರಿಸಲಾಯಿತು. ಸಂಕ್ರಮಣದ ಅಂಗವಾಗಿ ಮನೆಯಲ್ಲಿ, ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಲಾಯಿತು.
ಸಂಕ್ರಮಣದಂಗವಾಗಿ ಸಣ್ಣ ಬೆಲ್ಲದ ಚೂರು, ಹುರಿಗಡಲೆ, ಒಣಕೊಬ್ಬರಿ, ಶೇಂಗಾ, ಹುರಿದ ಎಳ್ಳನ್ನು ಸೇರಿಸಿ ಎಳ್ಳು ಬೆಲ್ಲ ತಯಾರಿಸಲಾಗಿತ್ತು. ದೇವರಿಗೆ ವಿಶೇಷ ಪೂಜೆ ಮಾಡುವ ಮೂಲಕ ಎಳ್ಳು-ಬೆಲ್ಲ ನೈವೇದ್ಯ ಮಾಡಿ, ಹಿರಿಯರು ಹಾಗೂ ಕಿರಿಯರು ಪರಸ್ಪರ ಎಳ್ಳು ಬೆಲ್ಲ ಹಂಚಿ ಹಬ್ಬಕ್ಕೆ ಶುಭ ಕೋರಿದರು. ಜತೆಗೆ ಎಳ್ಳು-ಬೆಲ್ಲ ತಿಂದು ಒಳ್ಳೆಯದನ್ನು ಮಾತಾಡೋಣ ಎಂದು ಹೇಳುವ ಮೂಲಕ ಸಹಬಾಳ್ವೆಯ ಕರೆ ನೀಡಿ, ಮನ ತುಂಬ ಹಾರೈಸುವುದು ಸಂಪ್ರದಾಯ.
ಮಹಿಳೆಯರು ಸಂಜೆ ಹೊತ್ತಿಗಾಗಲೇ ಮನೆ ಮನೆಗೆ ತೆರಳಿ ಎಳ್ಳಿನ ಜತೆಗೆ ಸಿಹಿ, ಹಣ್ಣು, ಸಕ್ಕರೆ ಅಚ್ಚನ್ನೂ ಹಂಚಿದರು. ಸಂಕ್ರಾಂತಿ ಹಬ್ಬವಂತೂ ಮಕ್ಕಳ ಪಾಲಿಗೆ ಸಂಭ್ರಮ ತಂದಿತ್ತು. ಹೊಸ ಬಟ್ಟೆಯಲ್ಲಿ ಸಂಭ್ರಮಿಸುತ್ತಾ ಎಳ್ಳು-ಬೆಲ್ಲ ಹಂಚುತ್ತಾ, ಮೆಲ್ಲುತ್ತಾ ಖುಷಿ ಖುಷಿಯಾಗಿ ಹಬ್ಬ ಆಚರಿಸಿದರು. ಮತ್ತೆ ಕೆಲವರು ಮಧ್ಯಾಹ್ನದ ಹೊತ್ತಿಗಾಗಲೇ ಬಂಧು ಮಿತ್ರರೊಡಗೂಡಿ ಇಲ್ಲಿ ಉಣಕಲ್ ಕೆರೆ, ಇಂದಿರಾ ಗಾಜಿನ ಮನೆ, ನೃಪತುಂಗ ಬೆಟ್ಟಕ್ಕೆ ತೆರಳಿ ಭೂರಿ ಭೋಜನ ಸವಿದರು. ಒಟ್ಟಾರೆ ಸಂಕ್ರಾತಿ ಹಬ್ಬ ಮನ-ಮನೆಯಲ್ಲಿ ಸಂಭ್ರಮ ತಂದಿತ್ತು.