19ರಿಂದ ಡೆವಲಪ್ಮೆಂಟ್ ಡೈಲಾಗ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 16
ದೇಶಪಾಂಡೆ ಫೌಂಡೇಶನ್ ವತಿಯಿಂದ ಆಯೋಜಿಸಿರುವ ನಾಲ್ಕು ದಿನಗಳ 'ಡೆವಲಪ್ಮೆಂಟ್ ಡೈಲಾಗ್-2014' ಸಮ್ಮೇಳನ ಜ. 19ರಿಂದ ನಗರದಲ್ಲಿ ನಡೆಯಲಿದೆ.
ಬಿವಿಬಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿರುವ ದೇಶಪಾಂಡೆ ಫೌಂಡೇಶನ್ನಲ್ಲಿ ಜ. 19ರಂದು ಬೆಳಗ್ಗೆ 11.30ಕ್ಕೆ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಸಮ್ಮೇಳನ ಉದ್ಘಾಟಿಸುವರು ಎಂದು ಫೌಂಡೇಶನ್ ಸಂಸ್ಥಾಪಕ ಡಾ. ಗುರುರಾಜ ದೇಶಪಾಂಡೆ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉದ್ಘಾಟನೆ ಬಳಿಕ ಸಚಿವ ಆರ್.ವಿ. ದೇಶಪಾಂಡೆ ಅವರು ಐದು ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಚರ್ಚಿಸುವರು. ರಾಜ್ಯದ 11 ಜಿಲ್ಲೆಗಳ ವಿದ್ಯಾರ್ಥಿಗಳು, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದ ಸೇರಿದಂತೆ ವಿವಿಧ ರಾಜ್ಯಗಳ ಹಾಗೂ ವಿದೇಶದ ವಿದ್ಯಾರ್ಥಿಗಳು ಸೇರಿದಂತೆ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ತಾಂತ್ರಿಕ ಹಾಗೂ ತಾಂತ್ರಿಕೇತರ ಸಮಸ್ಯೆಗಳ ಪರಿಹಾರವನ್ನು ವಿದ್ಯಾರ್ಥಿಗಳು ಈ ಸಮ್ಮೇಳನದ ಮೂಲಕ ಕಂಡುಕೊಳ್ಳಲಿದ್ದಾರೆ.
ಈ ಸಮ್ಮೇಳನದ ಉದ್ದೇಶ ಸಂಪನ್ಮೂಲ ವ್ಯಕ್ತಿಗಳು ಕೇವಲ ಭಾಷಣ ಮಾಡಿ ಹೋಗುವುದಲ್ಲ. ಬದಲಾಗಿ ಸಮ್ಮೇಳನದಿಂದ ಸಮಾಜಕ್ಕೆ ಹಲವಾರು ಬಗೆಯ ಪ್ರಯೋಜನವಾಗುವಂತೆ ನೋಡಿಕೊಳ್ಳಲಾಗುವುದು. ಈ ಬಾರಿ ಫೌಂಡೇಶನ್ ಆಯೋಜಿಸುತ್ತಿರುವುದು 7ನೇ ಸಮ್ಮೇಳನ. ಈ ಮೊದಲಿನ ಆರು ಸಮ್ಮೇಳನದಿಂದ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.
ಶಿಕ್ಷಣ, ಕೃಷಿ, ಆರೋಗ್ಯ, ಉದ್ಯಮ ಕ್ಷೇತ್ರಗಳಲ್ಲಿ ಬದಲಾವಣೆಗಳು ಕಂಡುಬರುತ್ತಿವೆ. ಈ ಬಾರಿಯ ಸಮ್ಮೇಳನದಲ್ಲಿ ಈ ನಾಲ್ಕು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಕೇಂದ್ರ ಸಚಿವ ಜಯರಾಮ್ ರಮೇಶ ಜ. 20ರಂದು ಬೆಳಗ್ಗೆ ಸಮ್ಮೇಳನಕ್ಕೆ ಆಗಮಿಸುವರು ಎಂದು ಡಾ. ದೇಶಪಾಂಡೆ ತಿಳಿಸಿದರು. ಜಯಶ್ರೀ ದೇಶಪಾಂಡೆ, ನವೀನ ಝಾ ಇದ್ದರು.
--
ಧಾರವಾಡ ಗುಂಪು ಘರ್ಷಣೆ: 6 ಸೆರೆ
ಧಾರವಾಡ: ಇಲ್ಲಿನ ಕಮಲಾಪುರದಲ್ಲಿ ಎರಡು ಕೋಮಿನ ಮಧ್ಯದ ಗುಂಪು-ಘರ್ಷಣೆಗೆ ಸಂಬಂಧಿಸಿದಂತೆ ಒಂದು ಕೋಮಿಗೆ ಸೇರಿದ ಮೂವರನ್ನು ಬಂಧಿಸಿದ ಬೆನ್ನಲ್ಲೆ ಗುರುವಾರ ಇನ್ನೊಂದು ಕೋಮಿಗೆ ಸೇರಿದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕಮಲಾಪುರ ನಿವಾಸಿಗಳಾದ ಬಾಷಾಸಾಬ ಕಾಶೀಂಸಾಬ ಬಾರಿಗಿಡದ, ಜೈಲಾನಿ ರಹಿಮಾನಸಾಬ ಬೆಟಗೇರಿ, ಮಹ್ಮದಲಿ ರಹಿಮಾನಸಾಬ ಬೆಟಗೇರಿ, ನಜೀರಸಾಬ ಲಾಲಸಾಬ ಪೀರಜಾದೆ, ಹಾಶಿಂಮೌಶಿಂ ಚಾಂದಸಾಬ ಪೀರಜಾದೆ, ಹಾವೇರಿಪೇಟ ಕಂಠಿ ಓಣಿಯ ಅಬ್ದುಲ್ಸತ್ತಾರ ಸೈಯದಸಾಬ್ ಗೋಲಂದಾಜ ಎನ್ನುವವರನ್ನು ಬಂಧಿಸಲಾಗಿದೆ.
ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ, ಡಿಸಿಪಿ ಸುಭಾಷ ಗುಡಿಮನಿ, ಎಸಿಪಿ ಎಸ್.ಎಚ್. ಕೇರಿ ಮಾರ್ಗದರ್ಶನದಲ್ಲಿ ಉಪನಗರ ಠಾಣಾ ಸಿಪಿಐ ರಾಮನಗೌಡ ಹಟ್ಟಿ, ವಿಶೇಷ ಕರ್ತವ್ಯದ ಮೇಲೆ ನಿಯೋಜನೆಗೊಂಡ ಪಿಎಎಸ್ಐ ಎಂ.ಆರ್. ಚನ್ನಣ್ಣವರ ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆ ಇದೆ.