ಅಣ್ಣಿಗೇರಿ: 20ರಂದು ಮಕ್ಕಳ ಹಬ್ಬ ಕಾರ್ಯಕ್ರಮ
ಅಣ್ಣಿಗೇರಿ: ಅಣ್ಣಿಗೇರಿಯ ಎನ್.ಎಸ್. ಹೂಗಾರ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿದಂತೆ ಇನ್ನಿತರ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಜ. 20ರಂದು ಬೆಳಗ್ಗೆ 10ಕ್ಕೆ ಮಕ್ಕಳ ಹಬ್ಬ ಕಾರ್ಯಕ್ರಮ ನಡೆಯಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಮಾಯಾಚಾರಿ, ಡಾ. ಎ.ಸಿ. ವಾಲಿ ಮಕ್ಕಳ ಹಬ್ಬ ಉದ್ಘಾಟಿಸುವರು. ಅತಿಥಿಗಳಾಗಿ ಎಂ.ಎಸ್. ಪೂಜಾರ, ಟಿ.ಟಿ. ದಾಸರ, ಅಗಸ್ತ್ಯ ವಿಜ್ಞಾನ ಕೇಂದ್ರ ವಲಯ ಮುಖ್ಯಸ್ಥ ವೀರೇಶ ಹಂಚಿನಾಳ ಆಗಮಿಸುವರು. ಎಂ.ಬಿ. ಸುರಕೋಡ ಅಧ್ಯಕ್ಷತೆ ವಹಿಸುವರು. 21ರಂದು ಸಂಜೆ 4ಕ್ಕೆ ಮಕ್ಕಳ ಹಬ್ಬ ಸಮಾರೋಪ ನಡೆಯಲಿದೆ. ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಆಗಮಿಸುವರು. ಪ್ರೊ. ಎಸ್.ಎಸ್.ಹರ್ಲಾಪುರ ಅಧ್ಯಕ್ಷತೆ ವಹಿಸುವರು. ಚಿದಂಬರ ಕುಲಕರ್ಣಿ ನಿರ್ದೇಶನದಲ್ಲಿ ಡಾ. ಚಂದ್ರಶೇಖರ ಕಂಬಾರರ ನೃತ್ಯ ರೂಪಕ, ಸಾವಿರದ ಶರಣು, ಶಿವಸ್ತುತಿ, ಬೆಪ್ಪುತಕ್ಕಡಿ, ಬೋಳೆ ಶಂಕರ ಪ್ರದರ್ಶನಗೊಳ್ಳಲಿವೆ.
ನಾಳೆಯಿಂದ ಹುಬ್ಬಳ್ಳಿ ಕಲಾ ಹಬ್ಬ-2014
ಹುಬ್ಬಳ್ಳಿ: ಲಲಿತಕಲಾ ವಿಶ್ವ ವಿದ್ಯಾಲಯ ಕಲಾ ಸಂರಕ್ಷಣೆ ಹಾಗೂ ಅಭಿವೃದ್ಧಿ ಕ್ರಿಯಾ ಸಮಿತಿ ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಲ್ಲಿ ಜ. 18 ಹಾಗೂ 19ರಂದು 'ಹುಬ್ಬಳ್ಳಿ ಕಲಾ ಹಬ್ಬ-2014' ಕಾರ್ಯಕ್ರಮವನ್ನು ಆಯೋಜಿಸಿದೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಿತಿ ಅಧ್ಯಕ್ಷ ಜಿ.ಎಸ್. ಮಹಾಗಾಂವಕರ, ಜ. 18ರಂದು ಬೆಳಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ ನೆರವೇರಲಿದೆ. ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅರವಿಂದ ಕುಬಸದ ಅಧ್ಯಕ್ಷತೆ ವಹಿಸುವರು. ಎಸಿಸಿಇ ಅಧ್ಯಕ್ಷ ಸುರೇಶ ಕಿರೇಸೂರ ಪಾಲ್ಗೊಳ್ಳುವರು. ಇದೇ ವೇಳೆ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಚಿತ್ರ ರಚನಾ ಸ್ಪರ್ಧೆ ನಡೆಯಲಿದೆ. 11 ಗಂಟೆಗೆ ಡಾ. ವಿ. ಬಿ. ನಿಟಾಲಿ ಪೌರಪ್ರಜ್ಞೆ ಹಾಗೂ ಆರೋಗ್ಯ ಕುರಿತು ಉಪನ್ಯಾಸ ನೀಡುವರು. 12ಕ್ಕೆ ಖ್ಯಾತ ಕಲಾವಿದ ಲಿಯೋನಾರ್ಡೊ ಡಾ. ವಿನ್ಸಿ ಸಾಕ್ಷಚಿತ್ರ ಪ್ರದರ್ಶನ ನಡೆಯಲಿದೆ. ಜತೆಗೆ ರೆಂಬ್ರಾತ್, ವಿನ್ಸೇಂಟ್ ವ್ಯಾನ್ ಗೋಫ್ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಲಿದೆ. 19ರಂದು ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಂಡರಗಿ ಡಾ. ಅನ್ನದಾನೀಶ್ವರ ಸ್ವಾಮೀಜಿ, ಹನುಮಂತ ಶಿಗ್ಗಾಂವ, ವಿಠ್ಠಲ ಪವಾರ್ ಪಾಲ್ಗೊಳ್ಳುವರು ಎಂದು ತಿಳಿಸಿದರು. ಮಕ್ಕಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡಲು ಹುಬ್ಬಳ್ಳಿ ಕಲಾ ಹಬ್ಬ ಆಯೋಜಿಸಲಾಗಿದೆ ಎಂದು ಮಹಾಗಾಂವಕರ ತಿಳಿಸಿದರು. ಡಾ. ಎಂ. ಬಿ. ಬೆಳವಟಿಗಿ, ಎಂ. ಜೆ. ಬಂಗ್ಲೆವಾಲೆ, ಎಸ್. ಎನ್. ಕಬಾಡಿ ಮತ್ತಿತರರಿದ್ದರು.
--