ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹುಬ್ಬಳ್ಳಿ: ನೇತ್ರ ತಪಾಸಣೆ ಶಿಬಿರ ಇಂದು

Lingaraj Badiger
Updated On : 17 Jan 2014, 10:50 am

ಹುಬ್ಬಳ್ಳಿ: ಉಣಕಲ್ ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆಯಲ್ಲಿ ಜ. 17ರಂದು 14 ವರ್ಷದವರೆಗಿನ ಮಕ್ಕಳಿಗೆ ವಿಶೇಷ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿದೆ.  ಬೆಂಗಳೂರಿನಿಂದ ಆಗಮಿಸುವ ಚಿಕ್ಕಮಕ್ಕಳ ಖ್ಯಾತ ನೇತ್ರ ತಜ್ಞರ ತಂಡ ತಪಾಸಣೆ ನಡೆಸಲಿದೆ. ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆಯ ಪ್ರಥಮ ವಾರ್ಷಿಕೋತ್ಸವದ ನಿಮಿತ್ತ ವಿಶೇಷ ರಿಯಾಯಿತಿ ಸವಲತ್ತುಗಳನ್ನು ಕೊಡಲಾಗುವುದು. ಚಿಕ್ಕ ಮಕ್ಕಳ ಕಣ್ಣಿನ ತೊಂದರೆಗಳಿಗೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕಗಳ ಮೇಲೆ ರಿಯಾಯಿತಿ ನೀಡಲಾಗುವುದು ಎಂದು ಡಾ. ಶ್ರೀಧರ ಅಮೀನ್ ತಿಳಿಸಿದ್ದಾರೆ.
ಇಂದು ಪೂರ್ವಭಾವಿ ಸಭೆ
ಕಲಘಟಗಿ: ಪಟ್ಟಣದ ಗ್ರಾಮದೇವಿ ಜಾತ್ರೆ ಪೂರ್ವಭಾವಿ ಸಭೆ ಜ. 17ರ ಬೆಳಗ್ಗೆ 11ಕ್ಕೆ ಗ್ರಾಮದೇವಿ ದೇವಸ್ಥಾನದಲ್ಲಿ ಕರೆಯಲಾಗಿದೆ. ಸಭೆಗೆ ಭಕ್ತರು ಆಗಮಿಸಿ ಸಲಹೆ ಸೂಚನೆ ನೀಡುವಂತೆದೇವಸ್ಥಾನ ಸಮಿತಿ ತಿಳಿಸಿದೆ.
ಇಂದು ಗೀತ ಗಾಯನ
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಸಾಹಿತ್ಯ ಮಂಟಪದಿಂದ ಜ. 17ರಂದು ಸಂಜೆ 6ಕ್ಕೆ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಹಿರಿಯ ಕವಯಿತ್ರಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರ ಕವಿತೆಗಳ ಗೀತ ಗಾಯನ ಕಾರ್ಯಕ್ರಮ ಆಯೋಜಿಸಿದೆ. ಸಂಗೀತ ಸಂಯೋಜಕರಾಗಿ ಸುಗಮ ಸಂಗೀತ ಗಾಯಕ ಶ್ರೀಕಾಂತ ಕುಲಕರ್ಣಿ ಆಗಮಿಸಲಿದ್ದಾರೆ.  ವಾದ್ಯಮೇಳದಲ್ಲಿ ವಯೋಲಿನ್, ವಾದಿರಾಜ ನಿಂಬರಗಿ, ಕೀ ಬೋರ್ಡ್, ಜಾಕೋಬ ದೇವರಾಜ ಹಾಗೂ ತಬಲಾದಲ್ಲಿ ಅನಿಲ ಮೇತ್ರಿ ಸಾಥ್ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಯಂತ ಕಾಯ್ಕಿಣಿ ಆಗಮಿಸುವರು.  ಡಾ. ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸುತ್ತಾರೆಂದು ಸಂಚಾಲಕ ಮೋಹನ ನಾಗಮ್ಮನವರ ತಿಳಿಸಿದ್ದಾರೆ.
ಚಂದನದಲ್ಲಿ 21ರಂದು ಶಿಕ್ಷಕರ ಕುಂದುಕೊರತೆ
ಧಾರವಾಡ: ಚಂದನ ಟಿವಿಯಲ್ಲಿ ಜ. 21ರಂದು ಬೆಳಗ್ಗೆ 8ರಿಂದ 9ರ ವರೆಗೆ ಪ್ರಸಾರಗೊಳ್ಳಲಿರುವ 'ಹಲೋ ಗೆಳೆಯರೆ' ಫೋನ್ ಇನ್ ಕಾರ್ಯಕ್ರಮದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ ಪ್ರಾಥಮಿಕ ಶಾಲಾ ಶಿಕ್ಷಕರ ಕುಂದುಕೊರತೆ ಕುರಿತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಸಮಸ್ಯೆಗಳ ಕುರಿತು ಮಾತನಾಡಲು ಬಯಸುವವರು ದೂ. 08023542599 ಅಥವಾ 23542699 ಸಂಪರ್ಕಿಸಿ.
ಈದ್ ಮಿಲಾದ್ ಆಚರಣೆ
ಕಲಘಟಗಿ: ಪಟ್ಟಣದಲ್ಲಿ  ಈದ್ ಮಿಲಾದ್ ಹಬ್ಬವನ್ನ್ನು  ಸಂಭ್ರಮದಿಂದ ಆಚರಿಸಲಾಯಿತು. ಅಂಜುಮನ್ ಇಸ್ಲಾಂ ಸಂಸ್ಥೆಯ ಅಹಮದಖಾನ್ ಜಹಾಗೀರದಾರ್, ಅಬ್ದುಲ್ ಕರಿಂ, ಟಿನ್ಮೆಕರ್, ರಫೀಕ್ ಸುಂಕದ್, ನಿಸಾರ ಅಹ್ಮದ್ ನದಾಫ್, ಶಫಿ ಜಾಗೀರದಾರ, ಅಬ್ದುಲ್ ಸತ್ತರ್ ಮಿಶ್ರಿಕೋಟಿ, ಬಾಗವಾನ ಕರಿಗಾರ, ಮುಸ್ತಾಕ ಅಹ್ಮದ್, ತಡಸ್ ಭವ್ಯ ಮೆರವಣಿಗೆಯೊಂದಿಗೆ ಪಟ್ಟಣದ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಕಾಯಕಯೋಗಿ ಸಿದ್ಧರಾಮೇಶ್ವರ ಶ್ರೀಗಳು: ಜಿಲ್ಲಾಧಿಕಾರಿ ಸಮೀರ ಶುಕ್ಲಾ
ಧಾರವಾಡ: ಇಂದಿಗೂ ಪ್ರಸ್ತುತವಾಗಿರುವ ಕಾಯಕಯೋಗಿ ಸಿದ್ಧರಾಮೇಶ್ವರರ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಹೇಳಿದರು.
ಗುರುವಾರ ಸಿದ್ಧರಾಮೇಶ್ವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಸಮಾಜದ ಒಳಿತಿಗೆ ಕೆರೆ, ಬಾವಿ, ದೇವಾಲಯಗಳನ್ನು ಕಟ್ಟಿಸಿ ಪ್ರೋತ್ಸಾಹಿಸಿದ ಅವರ ಬದುಕು, ಬರಹ ಎಲ್ಲರಿಗೂ ಮಾದರಿ ಎಂದರು.
ಉಪನ್ಯಾಸ ನೀಡಿದ ಪ್ರಾಧ್ಯಾಪಕ ಜಿ.ಎಂ. ಹೆಗಡೆ, ಸುಮಾರು 834 ವರ್ಷಗಳ ಹಿಂದೆ ಕಪಿಲ ಸಿದ್ಧ ಮಲ್ಲಿಕಾರ್ಜುನ ಅಂಕಿತದೊಂದಿಗೆ 1338 ವಚನಗಳನ್ನು ರಚಿಸಿದರು. ಜೊತೆಗೆ ಸಾಮಾಜಿಕ ಸಿದ್ಧಾಂತ ಹಾಗೂ ಶಿವಯೋಗದ ಸಾಧನೆಗಳನ್ನು ಮಾಡಿದವರು. ಅವರು ಜನಿಸಿದ ಗ್ರಾಮ ಇಂದು ಮಹಾರಾಷ್ಟ್ರದ ಸೋಲ್ಲಾಪುರ ಪಟ್ಟಣವಾಗಿ ಬೆಳೆದಿದೆ ಎಂದರು.
ಭೋವಿ ಸಮಾಜದ ಅಧ್ಯಕ್ಷ ಭೀಮಣ್ಣ ಫಕ್ಕಿರಪ್ಪ ನೇಮಿಕಲ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶಕುಮಾರ, ಜಿಪಂ ಸಿಇಒ ಪಿ.ಎ. ಮೇಘಣ್ಣವರ, ಪಾಲಿಕೆ ಸದಸ್ಯರಾದ ಬಸವರಾಜ ಮುತ್ತಳ್ಳಿ, ರಂಗಾಯಣದ ಆಡಳಿತಾಧಿಕಾರಿ ಕೆ.ಎಚ್. ಚೆನ್ನೂರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement