ಅಳ್ನಾವರ ಕ್ರೀಡಾಂಗಣಕ್ಕೆ ಬಾಲಗ್ರಹ
ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 17
ಮೂರು ವರ್ಷಗಳ ಹಿಂದೆಯೇ ಧಾರವಾಡ ತಾಲೂಕಿನ ಅಳ್ನಾವರ ಪಟ್ಟಣದಲ್ಲಿ ರು. 75 ಲಕ್ಷ ವೆಚ್ಚದಲ್ಲಿ ಶುರುವಾದ ತಾಲೂಕು ಮಟ್ಟದ ಕ್ರೀಡಾಂಗಣದ ಕಾಮಗಾರಿ ಇನ್ನೂ ಮುಗಿದಿಲ್ಲ.
ಆರಂಭದಲ್ಲಿಯೇ ಕ್ರೀಡಾಂಗಣಕ್ಕೆ ರು. 50 ಲಕ್ಷ ಬಿಡುಗಡೆಯಾಗಿದ್ದು, ಆಡಳಿತದ ವಿಳಂಬ ನೀತಿ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಕ್ರೀಡಾಂಗಣದ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಇದು ಅಳ್ನಾವರದ ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾಸಕ್ತರಿಗೆ ತೀವ್ರ ನಿರಾಸೆ ತಂದಿದೆ. ಕ್ರೀಡಾ ಚಟುವಟಿಕೆಗೆ ದೂರದ ಧಾರವಾಡ ಅಥವಾ ದಾಂಡೇಲಿಗೆ ಹೋಗಬೇಕಿದ್ದ ಇಲ್ಲಿನ ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾಭಿಮಾನಿಗಳಿಗೆ ತಮ್ಮೂರಲ್ಲಿ ಕ್ರೀಡಾಂಗಣವಾಗುತ್ತದೆ ಎಂಬ ಸುದ್ದಿ ಮೊದಲು ಸಂತಸ ತಂದಿತ್ತು. ಕೆಲವೇ ತಿಂಗಳುಗಳಲ್ಲಿ ಕ್ರೀಡಾಂಗಣ ಸಿದ್ಧವಾಗಲಿದೆ ಎಂದು ಅಂದುಕೊಂಡವರಿಗೆ ಈಗ ಕ್ರೀಡಾಂಗಣದ ಕನಸು ನನಸಾಗುವುದೇ ಎಂಬ ಸಂಶಯ ಮೂಡತೊಡಗಿದೆ. ಬಿಜೆಪಿ ಸರ್ಕಾರದ ಸಂದರ್ಭದಲ್ಲಿಯೇ ಇದು ಲೋಕಾರ್ಪಣೆಯಾಗಬೇಕಿತ್ತು. ಮೊದಲ ಕಂತು ರು. 50 ಲಕ್ಷದಲ್ಲಿ ಅಳ್ನಾವರಿಂದ ಹಳಿಯಾಳಕ್ಕೆ ಹೋಗುವ ಮುಖ್ಯರಸ್ತೆಯ ಬಲಬದಿಯಲ್ಲಿ ಎಂಟು ಎಕರೆ ಜಾಗ ಗುರುತಿಸಿ ಈಗ ಜಾಗದ ಸಮತಟ್ಟು ಮಾತ್ರ ಮಾಡಲಾಗಿದ್ದು, ಕ್ರೀಡಾಂಗಣದ ಕಚೇರಿ ಮತ್ತಿತರೆ ಕ್ರೀಡಾ ಕಟ್ಟಡಗಳು ಅರ್ಧಕ್ಕೆ ನಿಂತಿವೆ. ಕ್ರೀಡಾಭಿಮಾನಿಗಳು ಕೂರಲು ಗ್ಯಾಲರಿ ಮಾತ್ರ ನಿರ್ಮಾಣ ಮಾಡಿರುವುದನ್ನು ಹೊರತುಪಡಿಸಿ ಮತ್ಯಾವ ಕೆಲಸಗಳಾಗಿಲ್ಲ.
ಏನೇನಾಗಬೇಕಿತ್ತು?: ತಾಲೂಕು ಮಟ್ಟದ ಸೌಲಭ್ಯಗಳನ್ನು ಈ ಕ್ರೀಡಾಂಗಣ ಒಳಗೊಳ್ಳಲಿದ್ದು, ಪೆವಿಲಿಯನ್ ಕಟ್ಟಡವು ಹಲವು ಉದ್ದೇಶಕ್ಕೆ ಉಪಯೋಗಿಸಲು ಬರುವ ಕ್ರೀಡಾಕೊಠಡಿ, ಜಿಮ್ನಾಸ್ಟಿಕ್, ಟೇಬಲ್ ಟೆನ್ನಿಸ್ ಮತ್ತಿತರರ ಒಳಾಂಗಣ ಕ್ರೀಡೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಿದೆ. ಸ್ನಾನಗೃಹ, ಮೂತ್ರಾಲಯದ ವ್ಯವಸ್ಥೆ ಆಗಬೇಕು. ಅಲ್ಲದೇ, ಮೈದಾನದಲ್ಲಿ 400 ಮೀಟರ್ ರನ್ನಿಂಗ್ ಟ್ರ್ಯಾಕ್, ಫುಟ್ಬಾಲ್, ಹಾಕಿ ಆಡುವ ನಿಗದಿತ ಮೈದಾನ, ಬಾಸ್ಕೆಟ್ ಬಾಲ್, ಖೋಖೋ, ಕಬಡ್ಡಿ, ವಾಲಿಬಾಲ್ ಆಡಲು ಮತ್ತು ಸ್ಪರ್ಧೆಗಳನ್ನು ಏರ್ಪಡಿಸಲು ವ್ಯವಸ್ಥೆ ಬೇಕು. ಕ್ರೀಡಾಂಗಣದ ಸುರಕ್ಷತೆಗಾಗಿ ಸುತ್ತಲು ಚೈನ್ ಲಿಂಕ್ ಬೇಲಿ ಸಹ ಹಾಕಲು ಆಗ ಯೋಜನೆ ನಿರ್ಮಿಸಲಾಗಿತ್ತು. ಅಳ್ನಾವರ ಕ್ರೀಡಾಂಗಣಕ್ಕೆ ಆರಂಭದಲ್ಲಿ ರು. 50 ಲಕ್ಷ ಒದಗಿಸಲಾಗಿದ್ದು, ಈ ಹಣದಲ್ಲಿ ಕ್ರೀಡಾಂಗಣಕ್ಕೆ ಹೆಚ್ಚುವಾರಿಯಾಗಿ ಬೇಕಿದ್ದ ಭೂಸ್ವಾಧೀನ ಮಾಡಿದ್ದು, ಶೇ. 50ರಷ್ಟು ಕಾಮಗಾರಿಯಾಗಿದೆ. ಕಳೆದ ಜುಲೈ ತಿಂಗಳಲ್ಲಿ ಮತ್ತೆ ರು. 20 ಲಕ್ಷ ಅನುದಾನವನ್ನು ಲ್ಯಾಂಡ್ ಆರ್ಮಿಗೆ ಬಿಡುಗಡೆ ಮಾಡಿದೆ. ಆದರೆ, ಮರಳು ಸಮಸ್ಯೆಯಿಂದ ಸದ್ಯ ಕಾಮಗಾರಿ ನಿಂತಿದ್ದು, ಬರುವ ಮೇ ತಿಂಗಳೊಳಗೆ ಕ್ರೀಡಾಂಗಣ ಸಾರ್ವಜನಿಕರಿಗೆ ಮುಕ್ತ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ. ಶ್ರೀನಿವಾಸ 'ಕನ್ನಡಪ್ರಭ'ಕ್ಕೆ ತಿಳಿಸಿದರು. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಆರಂಭವಾದ ಈ ಕ್ರೀಡಾಂಗಣ ನಿರ್ಮಾಣ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಆರೇಳು ತಿಂಗಳು ಕಳೆದರೂ ಹಲವು ಕಾರಣಗಳಿಂದ ಮುಗಿಯುತ್ತಿಲ್ಲ. ಸಂತೋಷ ಲಾಡ್ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಈ ಬಗ್ಗೆ ಪ್ರಶ್ನಿಸಿದಾಗ ಆದಷ್ಟು ಶೀಘ್ರ ಕ್ರೀಡಾಂಗಣದ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದ್ದರು. ಆದರೆ, ಕ್ರೀಡಾಂಗಣದ ಕಾಮಗಾರಿ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದ್ದು, ಯಾವಾಗ ಕ್ರೀಡಾಂಗಣ ಸಾರ್ವಜನಿಕರಿಗೆ ಮುಕ್ತವಾಗುವುದೋ ಕಾದು ನೋಡಬೇಕಿದೆ.