ಆತ್ಮಕಥೆಯಲ್ಲಿ ಸತ್ಯ ಮುಚ್ಚಿಡಲು ಸಾಧ್ಯವಿಲ್ಲ
ಧಾರವಾಡ: ಯಾವುದೇ ಭಾಷೆಯ ಕಥೆ, ಕಾದಂಬರಿಗಳಲ್ಲಿ ಒಬ್ಬ ಲೇಖಕ ಸತ್ಯವನ್ನು ಮರೆಮಾಚಿ ಸುಳ್ಳನ್ನು ಹೇಳಲು ಸಾಕಷ್ಟು ಅವಕಾಶಗಳಿವೆ ಮತ್ತು ಅನೇಕರು ಅದನ್ನೆ ಮಾಡುತ್ತಾರೆ. ಆದರೆ ಆತ್ಮಕಥೆಯಲ್ಲಿ ಲೇಖಕನ ಸತ್ಯದ ಅನಾವರಣವಾಗುತ್ತದೆ. ಅಲ್ಲಿ ಯಾವುದೇ ಕಾರಣಕ್ಕೂ ಸತ್ಯವನ್ನು ಮುಚ್ಚಿಟ್ಟು ಸುಳ್ಳನ್ನು ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು. ಶುಕ್ರವಾರದಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆರಂಭವಾಗಿರುವ ಧಾರವಾಡ ಸಾಹಿತ್ಯ ಸಂಭ್ರಮ-2014ರಲ್ಲಿ ನಡೆದ 'ನಾನು ಮೆಚ್ಚಿದ ಇತ್ತೀಚಿನ ಕನ್ನಡ ಪುಸ್ತಕಗಳು' ಕುರಿತ ಎರಡನೇ ಗೋಷ್ಠಿಯಲ್ಲಿ ತಮಗೆ ಮೆಚ್ಚುಗೆಯಾದ ಪ್ರೊ. ಸಿ.ಎನ್. ರಾಮಚಂದ್ರನ್ ಅವರ 'ನೆರಳುಗಳ ಬೆನ್ನುಹತ್ತಿ' ಆತ್ಮಕಥೆ ಕುರಿತು ಅವರು ಮಾತನಾಡಿದರು. ಎಲ್ಲ ಸಾಹಿತಿಗಳ, ಲೇಖಕರ ಆತ್ಮಕಥೆಗಳಂತೆ ಸಿ.ಎನ್.ಆರ್ ಅವರ ಜೀವನದ ಬಾಲ್ಯದಲ್ಲೂ ಗಮನಾರ್ಹ ಸಂಗತಿಗಳು, ವಿಶೇಷ ಸಂದರ್ಭಗಳು ಹಾದು ಹೋಗುತ್ತವೆ. ಅಂತೆಯೇ ರಾಮಚಂದ್ರನ್ ಅವರು ತಮ್ಮ ಆತ್ಮಕಥೆಯಲ್ಲಿ ತಮ್ಮ ಬಾಲ್ಯದ ಕಷ್ಟದ ಪ್ರಸಂಗಗಳನ್ನು ಉತ್ತಮವಾಗಿ ಚಿತ್ರಿಸಿದ್ದಾರೆ. ಆತ್ಮಕಥೆ ಓದುವಾಗ ಕುತೂಹಲ ಕೆರಳುತ್ತದೆ. ನಮ್ಮ ಜೀವನದಲ್ಲೂ ಅಂತಹ ಪ್ರಸಂಗಗಳು ಆಗಿರುವ ಕುರಿತು ನೆನಪುಗಳು ನಮ್ಮ ಪಟಲದಲ್ಲಿ ಬರುತ್ತವೆ. ಹೀಗಾಗಿ ನೆರಳುಗಳ ಬೆನ್ನುಹತ್ತಿ ಆತ್ಮಕಥೆ ನನಗೆ ತುಂಬ ಹಿಡಿಸಿತು ಎಂದು ತಿಳಿಸಿದರು. ರಾಮಚಂದ್ರನ್ ಅವರು ಊರಿಂದ ಊರಿಗೆ ವಲಸೆ ಹೋಗುತ್ತ, ಅನುಭವಿಸಿದ ಕಷ್ಟಗಳು, ಸವಾಲುಗಳು ಅನೇಕ. ಮೈಸೂರು, ಪುಣೆ, ನಿಪ್ಪಾಣಿ, ಅಮೆರಿಕ, ಸೋಮಾಲಿಯಾ ದೇಶಗಳಲ್ಲಿನ ಜೀವನದ ಪ್ರಸಂಗಗಳು ಮತ್ತು ಅವುಗಳು ಕಲಿಸಿದ ಪಾಠವನ್ನು ಯಥಾವತ್ತಾಗಿ ಆತ್ಮಕಥೆಯಲ್ಲಿ ಬಿಚ್ಚಿಟ್ಟಿದ್ದಾರೆ. ಹಸಿವು, ಬಡತನ, ಕಷ್ಟ, ತಾಯಿಗೆ ಔಷಧಿ ತರಲು ಹಣವಿಲ್ಲದಾಗ ಅನುಭವಿಸಿದ ಯಾತನೆ, ಅದರಿಂದಾದ ತಾಯಿಯ ಮರಣ, ಸಹೋದರಿ ಸಾವು ರಾಮಚಂದ್ರನ್ ಅವರ ಜೀವನದ ಕಷ್ಟಕೋಟೆಗಳನ್ನು ಸಾರುತ್ತವೆ. ಆ ಪುಸ್ತಕ ಓದುತ್ತ ಹೋದಂತೆ ನಮ್ಮ ಜೀವನವೇ ಕಣ್ಣುಮುಂದೆ ಕಟ್ಟಿದಂತಾಗುತ್ತದೆ ಎಂದು ಹೇಳಿದರು. ರಜನಿ ನರಹಳ್ಳಿ ಅವರು ಬರೆದ ':ನನ್ನ ಅಜ್ಜಿಯ ಜಗತ್ತು' ಜೀವನ ಚರಿತ್ರೆ ಕುರಿತು ಮಾತನಾಡಿದ ಲೇಖಕಿ ಎಲ್.ಸಿ. ಸುಮಿತ್ರಾ ಅವರು, ಸಾಂಸ್ಕೃತಿಕ ಜಗತ್ತಿನ ಚಿತ್ರಣ, ಮಾನವೀಯ ಸಂಬಂಧಗಳ ಅನಾವರಣ, ಕೌಟುಂಬಿಕ ಜೀವನದ ಚಿತ್ರಣವನ್ನು ನಾವುಗಳು ಅತೀ ಹತ್ತಿರ ಮತ್ತು ಸರಳವಾಗಿ ತಿಳಿದುಕೊಳ್ಳಲು ಈ ಜೀವನ ಚರಿತ್ರೆ ಸಹಾಯಕವಾಗುತ್ತದೆ. ಕಾವೇರಿ ನದಿ ತೀರದ ಹಳ್ಳಿಯಾದ ಕಣವಿಯಲ್ಲಿ ತನ್ನ ಅಜ್ಜಿ 10 ಮೊಮ್ಮಕ್ಕಳನ್ನು ಬೆಳೆಸಿದ ರೀತಿ, ಆಕೆ ಅನುಭವಿಸಿದ ಕಷ್ಟ, ಸವಾಲುಗಳು ಎಲ್ಲರಿಗೂ ಪಠ್ಯವಾಗುತ್ತದೆ. ಬಾಲ್ಯದಿಂದ ಆಕೆಯ ಸಂಧ್ಯಾ ಕಾಲದವರೆಗೂ ಕೈಗೊಂಡ ಕೆಲಸಗಳು ಇಲ್ಲಿ ಚಿತ್ರಿತವಾಗಿವೆ. ಇದು ಸ್ಮೃತಿ ಚಿತ್ರಗಳ ಗುಂಪಿಗೆ ಸೇರುವ ಪುಸ್ತಕ. ಆ ರೀತಿ ಲೇಖಕಿ ರಜನಿ ಜೀವನ ಚರಿತ್ರೆ ಬರೆಯುತ್ತಾ ಹೋಗಿದ್ದಾರೆ ಎಂದರು.
ಪತ್ನಿಯ ಪರವಾನಗಿ...
ರಾಮಚಂದ್ರನ್ ಆತ್ಮಕಥೆಯಲ್ಲಿ ತಮ್ಮ ಪತ್ನಿಯು ಅನುಭವಿಸಿದ ಯಾತನೆಗಳನ್ನು ಅವರು ಗೌಣವಾಗಿಸಿದ್ದಾರೆಯೆ ಎಂಬ ಡಾ. ಬಸವರಾಜ ಸಾದರ ಅವರ ಪ್ರಶ್ನೆಗೆ ಹಾಸ್ಯ ಭರಿತ ಉತ್ತರ ನೀಡಿದ ಲೇಖಕ ರಾಮಚಂದ್ರನ್, ನನ್ನ ಪತ್ನಿಯ ಪರವಾನಗಿ ಇಲ್ಲದೆ ಆಕೆಯ ಬಗ್ಗೆ ಬರೆಯಲು ಮುಂದಾಗಲಿಲ್ಲ, ಆ ಧೈರ್ಯವೂ ನನ್ನಲ್ಲಿ ಇರಲಿಲ್ಲ. ಆದರೆ ಆಕೆಯೂ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾಳೆ ಎಂದರು. ಆತ್ಮಕಥೆ ಬರೆಯುವವರು ಕೆಲ ಸತ್ಯಗಳನ್ನು ಮುಚ್ಚಿಡುತ್ತಾರೆ. ಆದರೆ ಅವುಗಳನ್ನೂ ಸಹ ಕುಲ್ಲಂಕುಲ್ಲ ಬರೆಯಬೇಕಾಗಿತ್ತು ಎಂದು ಡಾ. ಚಂಪಾ ಅವರು ಹೇಳಿದರು, ಆಗ ಮಾತನಾಡಿದ ಭುವನೇಶ್ವರಿ ಹೆಗಡೆ 'ಚಂಪಾ ಅವರಿಂದಲೇ ಕುಲ್ಲಂಕುಲ್ಲ ಆತ್ಮಕಥೆ' ಬಯಸುತ್ತೇವೆ ಎಂದು ಆಶಯ ವ್ಯಕ್ತಪಡಿಸಿದರು. ಯಾರಾದರೂ ಕುಲ್ಲಂಕುಲ್ಲ ವಿಷಯಗಳನ್ನು ನನಗೆ ಕೊಟ್ಟರೆ ಆ ಆತ್ಮಕಥೆ ಬರೆಯುವುದಾಗಿ ಹೇಳಿದಾಗ ಎಲ್ಲರೂ ನಗೆಗಡಲಲ್ಲಿ ತೇಲಿದರು.