ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕವಿಯೊಂದಿಗೆ ಈ ಸಂಜೆಯಲ್ಲಿ ಭಟ್ಟರು

Rashmi Kasaragodu
Updated On : 18 Jan 2014, 1:22 am

ಧಾರವಾಡ: ಬಹಳ ಒಳ್ಳೇ ನಮ್ಮಿಸ್ಸು...ಏನ್ ಹೇಳಿದ್ರು ಎಸ್ಸೆಸ್ಸು..ನಗ್ತಾ ನಗ್ತಾ ಮಾತಾಡ್ತಾರೆ..ಸ್ಕೂಲಿಗೆಲ್ಲಾ ಫೇಮಸ್ಸು... ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ರಚಿಸಿದ ಈ ಕವಿತೆ ಯಾರು ಕೇಳಿಲ್ಲ ಹೇಳಿ  ಚಿನ್ನಾರಿಮುತ್ತ ಕನ್ನಡ ಚಲನ ಚಿತ್ರಕ್ಕೆ ಸಾಹಿತ್ಯ ರಚಿಸಿ, ಹಲವಾರು ಕಾವ್ಯಗಳನ್ನು ರಚಿಸಿರುವ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರೊಂದಿಗೆ ಸಂಜೆಯ ರಸಗಳಿಗೆ ಕಳೆಯುವ ಅವಕಾಶ ರೂಪಿಸಿದ್ದು ಧಾರವಾಡ ಸಾಹಿತ್ಯ ಸಂಭ್ರಮ. ಕವಿಯೊಂದಿಗೆ ಈ ಸಂಜೆ ಎಂಬ ಸಾಹಿತ್ಯ ಸಂಭ್ರಮದ ಕಾರ್ಯಕ್ರಮದಲ್ಲಿ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ತಮ್ಮ ಜೀವನದ  ಹಲವಾರು ಮೈಲುಗಲ್ಲುಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು. ವಿಧವೆ ತಾಯಿ, ಕಿತ್ತು ತಿನ್ನುವ ಬಡತನ, ಅದರಲ್ಲೂ ಓದಬೇಕೆಂಬ ಉತ್ಕಟ ಬಯಕೆ, ವಾರಾನ್ನಕ್ಕೆ ಪರಿತಪಿಸಿದ ದಿನಗಳು ಸೇರಿದಂತೆ ಹಲವಾರು ಮಜಲುಗಳನ್ನು ಕವಿ ಲಕ್ಷ್ಮೀನಾರಾಯಣ ಭಟ್ಟರು ಲ್ಲಿ ನಿರ್ಮಿಸಿದ ಸಂಜೆಯ ಗೋಷ್ಠಿಯಲ್ಲಿ ತೆರೆದಿಟ್ಟರು. ತಮ್ಮ ಬಾಲ್ಯ ಜೀವನ ಸ್ಮರಿಸಿಕೊಂಡ ಭಟ್ಟರು, ಮನೆ ಸಮೀಪ ತಿಂಗಳುಗಟ್ಟಲೇ ನಡೆಯುತ್ತಿದ್ದ ಗಮಕ ವಾಚನ, ಸಂಗೀತಕ್ಕೆ ತಪ್ಪದೇ ಹೋಗುತ್ತಿದ್ದರಂತೆ. ದೇವರಿಗೆ ನಮಸ್ಕರಿಸುವಾಗ ಮಂತ್ರಗಳನ್ನು ಪಠಿಸದೇ, ಆ ವಯಸ್ಸಿನಲ್ಲಿಯೇ ಕುಮಾರವ್ಯಾಸ ಪದ್ಯಗಳನ್ನು ದೇವರೆದುರು ಹೇಳುತ್ತಿದ್ದರಂತೆ. ಅದೇ ಕಾರಣಕ್ಕೋ ಏನೋ ದೇವರು ತಮ್ಮನ್ನು ಕವಿಯನ್ನಾಗಿ ರೂಪಿಸಿದನೆಂಬ ಅಭಿಪ್ರಾಯ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರದ್ದು. ಕುಮಾರವ್ಯಾಸ ಭಾರತದ ಹಲವಾರು ಪದ್ಯಗಳು ಲಕ್ಷ್ಮೀನಾರಾಯಣರ ಒಳಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರಿದ್ದವು. ಚಿಕ್ಕವನಿದ್ದಾಗಲೇ ಲಯ ಜ್ಞಾನದ ಅರಿವಿದ್ದ ಭಟ್ಟರು, ಸಲೀಸಾಗಿ ಕಠಿಣ ಪದ್ಯಗಳನ್ನು ಓದುತ್ತಿದ್ದರು. ಶಾಲಾ ದಿನಗಳಲ್ಲಿ ಸಂಸ್ಕೃತದ ಅರಿವು ಅಷ್ಟಾಗಿರದಿದ್ದರೂ ಕುವೆಂಪು ಅವರ ಕಾವ್ಯಗಳನ್ನು ಲಯಬದ್ಧವಾಗಿ ಹಾಡುತ್ತಿದ್ದರೆಂಬುದನ್ನು ಗೋಷ್ಠಿಯಲ್ಲಿ ತಿಳಿಸಿದರು. ಇವರ ಮೊದಲ ಪದ್ಯ ಸೀಮಂತಿನಿಯಲ್ಲಿ ಬಡ ತಾಯಿ ಪಡುವ ಪರಿಪಾಟಲಿನ ಬಗ್ಗೆ ಬರೆದ ಸತ್ಯ ಬಹಿರಂಗ ಪಡಿಸಿದ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಬಡತನ ಅವಮಾನ ಅಲ್ಲ. ಆದರೆ ಬಡತನ ಎದುರಿಸದೇ ಇರುವುದು ಅವಮಾನ ಎಂದರು. ಬಸವರಾಜ ಸಾದರ ಗೋಷ್ಠಿ ನಿರ್ದೇಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement