ಪಲ್ಸ್ ಪೋಲಿಯೋ ಟಾಸ್ಕ್ಪೋರ್ಸ್ ಸಭೆ
ಹುಬ್ಬಳ್ಳಿ: ಮಹಾನಗರ ಪಾಲಿಕೆ ಮುಖ್ಯ ಕಚೇರಿಯಲ್ಲಿ ಪ್ರಸಕ್ತ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಟಾಸ್ಕ್ಪೋರ್ಸ್ ಸಭೆ ನಡೆಯಿತು. ಸಭೆ ಅಧ್ಯಕ್ಷತೆ ವಹಿಸಿದ್ದ ಮಹಾನಗರ ಪಾಲಿಕೆಯ ಜಂಟಿ ಆಯುಕ್ತ ವೀರೇಂದ್ರ ಕುಂದಗೋಳ ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಬಾರಿ ಮೊದಲ ದಿನವೇ ಶೇ. 90ರಷ್ಟು ಗುರಿ ಸಾಧನೆ ಮಾಡಲು ಒತ್ತು ನೀಡುವಂತೆ ಎಲ್ಲ ನೋಡಲ್ ಅಧಿಕಾರಿಗಳಿಗೆ, ಮೇಲ್ವಿಚಾರಕರಿಗೆ, ಸಿಬ್ಬಂದಿಗೆ ಕೋರಿದರು. ರೋಟರಿ ಸಂಸ್ಥೆ ಹೊರಡಿಸಿರುವ ಪಲ್ಸ್ ಪೋಲಿಯೋ ಸಿಡಿಯನ್ನು ಜಾಥಾದಲ್ಲಿ ಪ್ರಕಟಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಜ. 18ರ ಬೆಳಗ್ಗೆ 8ಕ್ಕೆ ಹುಬ್ಬಳ್ಳಿಯಲ್ಲಿ, 9ಕ್ಕೆ ಧಾರವಾಡದಲ್ಲಿ ಪಲ್ಸ್ ಪೋಲಿಯೋ ಜಾಗೃತಿ ಜಾಥಾ ಹಮ್ಮಿಕೊಳ್ಳಲು ನಿರ್ಣಯಿಸಲಾಯಿತು. ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಡಾ. ಪ್ರಭು ಬಿರಾದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.