ಮಕ್ಕಳ ಕಲಿಕಾ ಮಾಧ್ಯಮ ಕನ್ನಡವಾಗಲಿ
ಧಾರವಾಡ: ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ದೊರೆಯದ ಹೊರತು ಮಕ್ಕಳ ಸಾಹಿತಿಗಳು ಬರೆದದ್ದು ವ್ಯರ್ಥ ಎಂದು ಮಕ್ಕಳ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಖೇದ ವ್ಯಕ್ತಪಡಿಸಿದ್ದಾರೆ. ಧಾರವಾಡ ಸಾಹಿತ್ಯ ಸಂಭ್ರಮ-2014ರ ಅಂಗವಾಗಿ ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ತಿರುವು ಕುರಿತ ಗೋಷ್ಠಿಯಲ್ಲಿ ಅಭಿಪ್ರಾಯ ಮಂಡಿಸಿದ ಅವರು, ಪ್ರೌಢಿಮೆಯ ಹೆಗಲ ಮೇಲೆ ಮುಗ್ಧತೆ ಸವಾರಿ ಮಾಡುವುದೇ ಮಕ್ಕಳ ಸಾಹಿತ್ಯ ಎಂದು ಹೇಳಿದರು. ಹಿಂದಿನ ಮಕ್ಕಳ ಸಾಹಿತ್ಯಕ್ಕೂ, ಈಗಿನ ಮಕ್ಕಳ ಸಾಹಿತ್ಯಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಮಕ್ಕಳ ಸಾಹಿತ್ಯದ ಭಾಷಿಕ ಪದ, ಧೋರಣೆ, ವಸ್ತುಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹಿಂದೆ ರಾಜರತ್ನಂ, ಹೊಯ್ಸಳ ಮತ್ತಿತರ ಮಕ್ಕಳ ಸಾಹಿತಿಗಳು ಬರೆದಂತೆ ಇಂದಿನವರಿಂದ ಸಾಹಿತ್ಯ ಕೃಷಿಯಾಗುತ್ತಿಲ್ಲ. ಮಕ್ಕಳು ಹಾಗೂ ಪ್ರೌಢರಿಗೆ ಏಕಕಾಲಕ್ಕೆ ಅರ್ಥವಾಗುವಂಥ ಕೃತಿಯೇ ಉತ್ತಮ ಮಕ್ಕಳ ಸಾಹಿತ್ಯವಾಗುತ್ತದೆಂಬ ಸತ್ಯವನ್ನು ಮಕ್ಕಳ ಸಾಹಿತಿಗಳು ಅರಿತುಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ವಿಚಾರ ಮಂಡಿಸಿದ ಮತ್ತೊಬ್ಬ ಮಕ್ಕಳ ಸಾಹಿತಿ ಎಲ್.ಜಿ. ಮೀರಾ, ಮಕ್ಕಳು ಸಾಹಿತ್ಯ ಓದಲು ಅನುಕೂಲವಾಗುವಂತಹ ವಾತಾವರಣ ನಿರ್ಮಿಸುವ ಹೊಣೆಗಾರಿಕೆ ಪೋಷಕರ ಮೇಲಿದೆ. ಶಾಲೆಯಲ್ಲಿಯೂ ಸಹ ಶಿಕ್ಷಕರು ಪಠ್ಯವನ್ನು ಹರಕೆ ಒಪ್ಪಿಸುವಂತೆ ಹೇಳದೇ, ಪಠ್ಯವನ್ನು ರಸವತ್ತಾಗಿ ಮಂಡಿಸಿದಲ್ಲಿ ಮಕ್ಕಳಲ್ಲಿ ಓದುವ ಬಯಕೆ ಮೂಡುತ್ತದೆ ಎಂದರು. ಇಂದಿನ ಮಕ್ಕಳ ಸಾಹಿತ್ಯದಲ್ಲಿ ಆಡು ಭಾಷೆ ಸಾಮಾನ್ಯವಾಗಿದೆ. ಕಥಾ ವಸ್ತುವಿನ ಆಯ್ಕೆ, ಭಾಷೆ ಹಾಗೂ ಅಭಿವ್ಯಕ್ತಿಯಲ್ಲಿ ಹೊಸತನ ಕಾಣುತ್ತಿದೆ. ಮನರಂಜನೆಯಷ್ಟೇ ಮಕ್ಕಳ ಸಾಹಿತ್ಯದ ವಸ್ತುವಾಗಿರಬಾರದು. ಮಕ್ಕಳು ಸಾಹಸ, ಕುತೂಹಲ ಹಾಗೂ ವಿನೋದಗಳನ್ನೂ ಇಷ್ಟಪಡುತ್ತಾರೆ ಎನ್ನುವುದನ್ನು ಸಾಹಿತಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು. ಮಕ್ಕಳ ಸಾಹಿತ್ಯ ಗುರುತಿಸುವ ಗಂಭೀರ ಕೆಲಸ ನಡೆದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಮಕ್ಕಳ ಸಾಹಿತಿ ಆನಂದ ಪಾಟೀಲ, ಮಕ್ಕಳ ಸಾಹಿತ್ಯ ಗ್ರಹಿಸುವುದು ಕಠಿಣವಾಗಿದೆ ಎಂದರು. ಅಬ್ದುಲ್ ರೆಹಮಾನ್ ಪಾಷಾ ಗೋಷ್ಠಿ ನಿರ್ದೇಶಿಸಿದರು.