ಸಾಹಿತ್ಯ ಸಂಭ್ರಮದ ಮನದಾಳ
ಅಪರೂಪದ ಕಾರ್ಯಕ್ರಮ
2 ವರ್ಷಗಳಿಂದ ನಡೆಯುತ್ತಿರುವ ಧಾರವಾಡ ಸಾಹಿತ್ಯ ಸಂಭ್ರಮ ಅಪರೂಪದ ಕಾರ್ಯಕ್ರಮ. ಈ ಸಂಭ್ರಮದಲ್ಲಿ 100ಕ್ಕೂ ಹೆಚ್ಚು ಪ್ರಮುಖ ಸಾಹಿತಿಗಳು ಸಕ್ರಿಯವಾಗಿ ಭಾಗವಹಿಸಿರುವುದು ಈ ಕಾರ್ಯಕ್ರಮದ ವಿಶೇಷ. ಹೊಸ ತಲೆಮಾರಿನ ಬರಹಗಾರರಿಗೆ ಇದು ವೇದಿಕೆಯಾಗಿದೆ. ಈ ರೀತಿಯ ಸಾಹಿತ್ಯ ಉತ್ಸವ ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತಿತ್ತು. ಆದರೆ, ಇದೀಗ ಧಾರವಾಡದಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ. ಇಲ್ಲಿನ ಪುಸ್ತಕ ಮಾರಾಟ ಮಳಿಗೆಗಳು ಸಾಹಿತ್ಯ ಸಂಭ್ರಮಕ್ಕೆ ಪೂರಕವಾಗಿವೆ.
ನರಹಳ್ಳಿ ಬಾಲಸುಬ್ರಹ್ಮಣ್ಯ, ವಿಮರ್ಶಕರು
ಗೋಷ್ಠಿಗಳು ಅರ್ಥಪೂರ್ಣ
ಶುಕ್ರವಾರ ನಡೆದ ಎಲ್ಲ ಗೋಷ್ಠಿಗಳು ಅರ್ಥಪೂರ್ಣವಾಗಿದ್ದವು. ಅದರಲ್ಲೂ ವಿಶೇಷವಾಗಿ ನಾಟಕ ಕೃತಿ ಹುಟ್ಟುವ ರೀತಿ ಎಂಬ ವಿಷಯ ಎಲ್ಲರೂ ಸದುಪಯೋಗ ಪಡಿಸಿಕೊಳ್ಳುವಂತಹದ್ದಾಗಿತ್ತು. ಮೊದಲು ಮಂದಗತಿಯಲ್ಲಿ ಸಾಗಿದ ಸಂವಾದಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಮರ್ಶಕರು, ಸಾಹಿತಿಗಳು ಹುರುಪು ನೀಡಿದರು.
ಡಾ.ಬಿ.ಎನ್. ಸುಮಿತ್ರಾಬಾಯಿ, ವಿಮರ್ಶಕರು
ಕನ್ನಡದ ಬಗ್ಗೆ ಚಿಂತನೆ ಬೇಕು
ಧಾರವಾಡ ಸಾಹಿತ್ಯ ಸಂಭ್ರಮ ಕಲ್ಪನೆಯಿಂದ ನೋಡಲು ಅಸಾಧ್ಯ ಎನ್ನುವಂತೆ ನಡೆಯುತ್ತಿದೆ. ಸಂಭ್ರಮದಲ್ಲಿ ನಡೆಯುವ ಸಂವಾದಗಳು ಕನ್ನಡ ಅಳಿವು- ಉಳಿವಿನ ಕುರಿತು ಇನ್ನೂ ಹೆಚ್ಚಿನ ಚಿಂತನೆಗಳು ನಡೆಯಬೇಕಿದೆ. ರನ್ನ, ಪಂಪ, ಪೊನ್ನ, ರಾಘವಾಂಕರಿಂದ ಹಿಡಿದು ಕುವೆಂಪು, ದ.ರಾ. ಬೇಂದ್ರೆ ಸೇರಿದಂತೆ ಹೊಸ ತಲೆಮಾರಿನ ಬರಹಗಾರರ ಕಾದಂಬರಿ, ಕಾವ್ಯ, ಕಥೆಗಳ ಬಗ್ಗೆ ಚಿಂತನೆಗಳು ಚೆನ್ನಾಗಿ ನಡೆಯುತ್ತಿವೆ.
- ಶಿವಸೋಮಣ್ಣ ನಿಟ್ಟೂರ, ಧಾರವಾಡ
ಸೊಗಸಾದ ಸಾಹಿತ್ಯ ಸಂಭ್ರಮ
ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಕಳೆದ ವರ್ಷವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದರಂತೆ ಈ ವರ್ಷ ಸಹ ಅಷ್ಟೆ ಸೊಗಸಾಗಿ ನಡೆಯುತ್ತಿರುವುದು ಸಂತೋಷದ ವಿಷಯ. ಶುಕ್ರವಾರ ಲಕ್ಷ್ಮಿನಾರಾಯಣ ಭಟ್ಟ ಅವರೊಂದಿಗೆ ನಡೆದ ಕವಿಯೊಂದಿಗೆ ಕಾರ್ಯಕ್ರಮವನ್ನು ಗೋಷ್ಠಿ ನಿರ್ದೇಶಕ ಬಸವರಾಜ ಸಾದರ ಚೆನ್ನಾಗಿ ನಡೆಸಿಕೊಟ್ಟರು. ಧಾರವಾಡಕ್ಕೆ ಈ ಸಾಹಿತ್ಯ ಸಂಭ್ರಮ ಸಾಂಸ್ಕೃತಿಕ ಉತ್ಸವದ ಮೆರುಗು ನೀಡಿದೆ.
ಶಶಿಕಾಂತ ಕುನ್ನೂರ, ಕವಿವಿ ವಿದ್ಯಾರ್ಥಿ
ಸಂವಾದದ ಲಾಭ ಎಲ್ಲರಿಗೂ ಆಗಲಿ
ಧಾರವಾಡ ಸಾಹಿತ್ಯ ಸಂಭ್ರಮದಲ್ಲಿನ ನಡೆಯುತ್ತಿರುವ ಸಂವಾದದ ಲಾಭ ಎಲ್ಲರಿಗೂ ತಲುಪಬೇಕು. ಸಾಹಿತ್ಯದ ಬಗ್ಗೆ ಆಸಕ್ತಿವುಳ್ಳ ಸಾಕಷ್ಟು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಿಲ್ಲ. ಇಲ್ಲಿನ ಚರ್ಚಾ ವಿಷಯ ಪ್ರತಿಯೊಬ್ಬರ ಮನಮುಟ್ಟುವಂತಿವೆ. ಅಲ್ಲದೆ, ಇಲ್ಲಿ ಸಮಯಕ್ಕೆ ವಿಶೇಷ ಮಾನ್ಯತೆ ನೀಡಲಾಗುತ್ತಿದೆ. ಕಾರ್ಯಕ್ರಮದ ಸಂಯೋಜಕರು ಊಟ, ಪುಸ್ತಕ ಮಳಿಗೆಗಳನ್ನು ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ.
- ವಾಸಣ್ಣ ದೇಸಾಯಿ, ಮುಧೋಳ
ಸಾಹಿತ್ಯ ಓದುಗರನ್ನು ಹೆಚ್ಚಿಸಲು ಸಹಕಾರಿ
ಕನ್ನಡ ಸಾಹಿತ್ಯದ ಅಧ್ಯಯನ ಮಾಡಬಯಸುವವರಿಗೆ ಒಲವು ಮೂಡಿಸುವಂತಿದೆ ಈ ಧಾರವಾಡ ಸಾಹಿತ್ಯ ಸಂಭ್ರಮ. ಇಲ್ಲಿ ನಡೆಯುವ ಗೋಷ್ಠಿಗಳು ಸಾಹಿತ್ಯದ ವಿವಿಧ ಮಗ್ಗಲುಗಳನ್ನು ಓದುಗರಿಗೆ ಪರಿಚಯಿಸುತ್ತಿದ್ದು, ಸಾಹಿತ್ಯ ಓದುಗರನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಸಾಹಿತ್ಯದ ಕುರಿತು ಜ್ಞಾನ ಪಡೆಯಬಹುದು. ಸಾಹಿತ್ಯದ ಹಲವಾರು ಆಯಾಮಗಳು ವಿಷದೀಕರಣಗೊಳ್ಳುವ ಮೂಲಕ ಸಾಮಾಜಿಕ ನೆಲಗಟ್ಟಿನ ಸ್ಥಿತಿಗತಿಗಳು ಬಹಿರಂಗಗೊಳ್ಳುತ್ತಿವೆ.
ಹನುಮಂತ ಜವಳಗೇರ, ಹಂಪಿ ವಿವಿ ವಿದ್ಯಾರ್ಥಿ
ಎಲ್ಲರ ಮನಗೆದ್ದ ಸಂಭ್ರಮ
ಧಾರವಾಡ: ಧಾರವಾಡದಲ್ಲಿ ಶುಕ್ರವಾರ ಸಾಹಿತ್ಯ ಸಂಭ್ರಮದ್ದೇ ಗೌಜು. ಕೆಲ ದಿನಗಳ ಹಿಂದಷ್ಟೇ ಧಾರವಾಡ ಜಿಲ್ಲಾ ಉತ್ಸವದಲ್ಲಿ ಮಿಂದೆದ್ದ ಧಾರವಾಡದ ಜನರಿಗೆ ಅದರಲ್ಲೂ ಸಾಹಿತ್ಯಾಸಕ್ತರಿಗೆ ಧಾರವಾಡ ಸಾಹಿತ್ಯ ಸಂಭ್ರಮ-2014 ಮತ್ತಷ್ಟು ಮುದ ನೀಡಿದಂತಿತ್ತು. ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಧಾರವಾಡ ಸಾಹಿತ್ಯ ಸಂಭ್ರಮ-2014ನ್ನು ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ ಉದ್ಘಾಟಿಸಿದರು. ಭಾಷಣದುದ್ದಕ್ಕೂ ದೇಶದ ರಾಜಕೀಯ ಸ್ಥಿತಿ ಮೂದಲಿಸಿದ ಅನಂತಮೂರ್ತಿ, ಸಾಹಿತ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ರಾಜಕೀಯವನ್ನೂ ಬಹಿರಂಗಗೊಳಿಸಿದರು. ನಂತರ ನಾಟಕ ಕೃತಿ ಹುಟ್ಟುವ ರೀತಿ, ನಾನು ಮಚ್ಚಿದ ಇತ್ತೀಚಿನ ಕನ್ನಡ ಪುಸ್ತಕ, ಯುವ ಬರಹಗಾರರ ಸವಾಲುಗಳು, ಮಕ್ಕಳ ಸಾಹಿತ್ಯಕ್ಕೆ ಹೊಸ ತಿರುವು, ಕವಿಯೊಂದಿಗೆ ಈ ಸಂಜೆ ಗೋಷ್ಠಿಗಳು ಸಾಹಿತ್ಯಾಸಕ್ತರ ಗಮನ ಸೆಳೆದವು. ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ ಬೆಳೆಸಲು ಏನು ಮಾಡಬೇಕು. ಸಾಹಿತ್ಯ ರಾಜಕೀಯದಿಂದ ದೂರ ಇರಬೇಕು ಮತ್ತಿತರ ವಿಷಯಗಳ ಬಗ್ಗೆ ಗಂಭೀರ ಚರ್ಚೆ ಈ ಗೋಷ್ಠಿಯಲ್ಲಿ ನಡೆದವು.
ಸಾಹಿತ್ಯ ಸಂಭ್ರಮದಲ್ಲಿ ಇಂದು
ಧಾರವಾಡ: ಜ. 18ರ ಶನಿವಾರ ಬೆಳಗ್ಗೆ 10ರಿಂದ 11ರವರೆಗೆ ನಡೆಯುವ ಜನಪ್ರಿಯ ಸಾಹಿತ್ಯದ ಸಾಂಸ್ಕೃತಿಕ ಆಯಾಮಗಳು ಎಂಬ ವಿಷಯ ಕುರಿತಾಗಿ ಬಿ.ಎನ್. ಸುಮಿತ್ರಾಬಾಯಿ, ವಿವೇಕ ಶಾನಭಾಗ ಹಾಗೂ ಜೋಗಿ ಮಾತನಾಡಲಿದ್ದಾರೆ. ಈ ಗೋಷ್ಠಿಗೆ ಟಿ.ಪಿ. ಅಶೋಕ ನಿರ್ದೇಶನ ನೀಡಲಿದ್ದಾರೆ. ಬೆಳಗ್ಗೆ 11ಕ್ಕೆ ಸಂಶೋಧನೆ ಇತ್ತೀಚಿನ ಪ್ರವೃತ್ತಿಗಳು ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 12.15 ರಿಂದ 1.30ರ ವರೆಗೆ 'ಬೇಂದ್ರೆ ಮತ್ತು ಕುವೆಂಪು ಕವಿತೆಗಳ ಓದು' ಕುರಿತು ಮೂರನೇ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಓದು- ಗಮಕ- ವ್ಯಾಖ್ಯಾನ ಗೋಷ್ಠಿಯಲ್ಲಿ ಗಣಪತಿ ಪದ್ಯಾಣ ಬಿ.ಪಿ. ಸಂಪತ್ಕುಮಾರ ಮಾತನಾಡಲಿದ್ದಾರೆ. ಸಂಜೆ 4.15ರಿಂದ 5.15ರ ವರೆಗೆ ವಿಚಾರ ಸಂಕಿರಣ, ಸೈನಿಕ ಸಾಹಿತ್ಯ, ಕಿಟೆಲ್ ಕುರಿತು ಕೆಲವು ಹೊಸ ಸಂಗತಿಗಳು, ಬದಲಾಗುತ್ತಿರುವ ಓದುವ ದಾರಿಗಳು ಕುರಿತು ಮಾತನಾಡುವರು. ಸಂಜೆ 5.30ಕ್ಕೆ ಸಾಹಿತಿಯೊಂದಿಗೆ ಈ ಸಂಜೆ ಗೊಷ್ಠಿಯಲ್ಲಿ ಚಂದ್ರಶೇಖರ ಕಂಬಾರ ಭಾಗವಹಿಸಲಿದ್ದಾರೆ. 6.45ಕ್ಕೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿದೆ.