ಹೊಸ ಅನ್ವೇಷಣೆಗೆ ಮುಂದಾಗಿ
ಹುಬ್ಬಳ್ಳಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದಾಗಿ ಪ್ರಪಂಚ ಚಿಕ್ಕದಾಗಿದೆ. ಇದೇ ವೇಳೆ ಸಾಕಷ್ಟು ಸವಾಲುಗಳನ್ನು ಹುಟ್ಟು ಹಾಕಿದೆ ಎಂದು ದೇಶಪಾಂಡೆ ಫೌಂಡೇಶನ್ ಅಧ್ಯಕ್ಷ ಗುರುರಾಜ ದೇಶಪಾಂಡೆ ಅಭಿಪ್ರಾಯಪಟ್ಟರು.
ಶುಕ್ರವಾರ ನಗರದ ಲ್ಯಾಮಿಂಗ್ಟನ್ ಶಾಲೆಯಲ್ಲಿ ರೋಟರಿ ಸಂಸ್ಥೆಯಿಂದ ಆಯೋಜಿಸಲಾಗಿದ್ದ 'ಶಿಕ್ಷಣ ಮತ್ತು ವೃತ್ತಿ ಆಯ್ಕೆ ಮೇಳ-2014' ಉದ್ಘಾಟಿಸಿ ಮಾತನಾಡಿದ ಅವರು, ಕಳೆದು ನಾಲ್ಕೈದು ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳಾಗಿವೆ. ಆವಿಷ್ಕಾರ ಹೆಚ್ಚುತ್ತಾ ಹೋದಂತೆ ಸವಾಲುಗಳೂ ಅದೇ ರೀತಿಯಾಗಿ ಹುಟ್ಟುತ್ತಾ ಹೋಗಿವೆ. ಈ ಸವಾಲುಗಳಿಗೆ ತಕ್ಕ ಉತ್ತರ ಕೊಡುವ ಶಕ್ತಿ ಇಂದಿನ ವಿದ್ಯಾರ್ಥಿಗಳಲ್ಲಿದೆ. ವಿದ್ಯಾರ್ಥಿಗಳು ಹೊಸ ಪ್ರಯೋಗ, ಅನ್ವೇಷಣೆಗಳನ್ನು ಕೈಗೊಳ್ಳಬೇಕಿದೆ ಎಂದರು.
ಇದು ಸ್ಪರ್ಧಾತ್ಮಕ ಯುಗ. ಇಲ್ಲಿ ಸ್ಪರ್ಧೆ ಅನಿವಾರ್ಯ. ಈ ಯುಗಕ್ಕೆ ತಕ್ಕಂತೆ ನಾವು ಮುನ್ನಡೆಯದೇ ಹೋದಲ್ಲಿ ನಮಗೆ ಬೆಲೆ ಸಿಗದು. ನಮ್ಮ ಜ್ಞಾನ, ಸಾಮರ್ಥ್ಯಕ್ಕೆ ತಕ್ಕಂತೆ ವಿಫುಲ ಅವಕಾಶಗಳೂ ಇವೆ. ವಿದ್ಯಾರ್ಥಿಗಳು ಸದಾ ಪ್ರಯತ್ನಶೀಲರಾಗಿರಬೇಕು. ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಪ್ರಯತ್ನದ ಹಾದಿಯಲ್ಲಿ ಸಾಗಿದ್ದೇ ಆದಲ್ಲಿ ನಿರೀಕ್ಷಿತ ಫಲವೂ ಲಭ್ಯ. ವಿದ್ಯಾರ್ಥಿಗಳು ಈ ಆವಿಷ್ಕಾರದ ಯುಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಿದೆ ಎಂದು ದೇಶಪಾಂಡೆ ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ. ಕರಮರಿ ಮಾತನಾಡಿ, ರೋಟರಿ ಸಂಸ್ಥೆಯು ಶಿಕ್ಷಣ ಹಾಗೂ ವೃತ್ತಿ ಆಯ್ಕೆ ಮೇಳ ಆಯೋಜಿಸುತ್ತಿದ್ದು ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ನರೇಂದ್ರ ಬರವಾಲ್ ಮಾತನಾಡಿ, ಹಿಂದಿನ ದಿನಗಳಿಗೆ ಹೋಲಿಸಿದಾಗ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸಾಕಷ್ಟು ಬದಲಾವಣೆಯಾಗಿದೆ. ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಓದಲು ಸಾಕಷ್ಟು ಸೌಲಭ್ಯ ಸಿಗುತ್ತದೆ. ಈ ಸೌಲಭ್ಯವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಪ್ರತಿಭೆ, ಅರ್ಹತೆ ಹೊಂದಿದ್ದರೂ ಅವಕಾಶಗಳ ಮಾಹಿತಿಯ ಕೊರತೆಯಿಂದಾಗಿ ಸೂಕ್ತ ವೃತ್ತಿ ಆಯ್ಕೆ ಮಾಡಿಕೊಳ್ಳುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಇಂಥ ಮೇಳಗಳು ಪ್ರತಿಭಾನ್ವಿತರಿಗೆ ವೇದಿಕೆಯಾಗಿದೆ ಎಂದರು.
ಅಚ್ಯುತ ಲಿಮಯೆ, ಮೋಹನ ಟೆಂಗಿನಕಾಯಿ, ಸುಲೋಚನಾ ಪಾಟೀಲ, ಡಾ. ಪಿ.ಬಿ. ಗತ್ತಿ, ಎಸ್.ಬಿ. ಶೆಟ್ಟಿ ಮತ್ತಿತರರಿದ್ದರು. ಮೇಳದಲ್ಲಿ 60ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕುಗಳು, ವೃತ್ತಿಪರ ಶಿಕ್ಷಣ, ಕಾನೂನು ಶಿಕ್ಷಣ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಪಾಲ್ಗೊಂಡಿವೆ. ಮೂರು ದಿನಗಳ ಕಾಲ ನಡೆಯಲಿರುವ ಮೇಳದಲ್ಲಿ ಆಹ್ವಾನಿತರಿಂದ ವಿಶೇಷ ಉಪನ್ಯಾಸ ನಡೆಯಲಿದೆ.