ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಭಿವೃದ್ಧಿ ಕಾರ್ಯ ಪುನರಾರಂಭಕ್ಕಾಗಿ ಬೃಹತ್ ಪಾದಯಾತ್ರೆ

Rashmi Kasaragodu
Updated On : 19 Jan 2014, 12:06 pm

ನವಲಗುಂದ: ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಗೆ ತಂದಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಹಾಲಿ ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಆರೋಪಿಸಿ, ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ನೇತೃತ್ವದಲ್ಲಿ ಶುಕ್ರವಾರ ತಾಲೂಕಿನಲ್ಲಿ ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಸಲಾಯಿತು.
ಅಳಗವಾಡಿ ಗ್ರಾಮದಲ್ಲಿರುವ ಹುತಾತ್ಮ ಬಸಪ್ಪ ಲಕ್ಕುಂಡಿ ವೀರಗಲ್ಲಿಗೆ ಪೂಜೆ ಸಲ್ಲಿಸುವ ಮೂಲಕ ಬೃಹತ್ ಪ್ರತಿಭಟನಾ ಪಾದಯಾತ್ರೆಗೆ ಮುನೇನಕೊಪ್ಪ ಚಾಲನೆ ನೀಡಿದರು. ಪಾದಯಾತ್ರೆಯುದ್ದಕ್ಕೂ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕ ಕೋನರಡ್ಡಿ ವಿರುದ್ಧ ಘೋಷಣೆ ಕೂಗಿ, ರೈತರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಮುನೇನಕೊಪ್ಪ, ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿನ ಸ್ಥಗಿತಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ತಕ್ಷಣಕ್ಕೆ ಆರಂಭಿಸಬೇಕು. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು 8 ತಿಂಗಳು ಗತಿಸಿದರೂ ಯಾವುದೊಂದು ಹೊಸ ಯೋಜನೆಗಳನ್ನು ಜಾರಿಗೆ ತಂದಿಲ್ಲ ಎಂದು ದೂರಿದರು. ಹೆಚ್ಚಿನ ಸಂಖ್ಯೆಯಲ್ಲಿ ರೈತರೇ ವಾಸವಾಗಿರುವ ತಾಲೂಕಿನಲ್ಲಿ ರೈತರ ಸಮಸ್ಯೆ ಕೇಳುವವರೇ ಇಲ್ಲ ಎಂಬಂತಾಗಿದೆ. ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳ ಈ ಮನೋಭಾವನೆಯನ್ನು ಖಂಡಿಸುವ ನಿಟ್ಟಿನಲ್ಲಿ ಪ್ರಥಮ ಹಂತದಲ್ಲಿ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಂಡಿದೆ ಎಂದರು.
ಬಿಜೆಪಿ ಸರ್ಕಾರದಲ್ಲಿ ತಾಲೂಕಿನಾದ್ಯಂತ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿತ್ತು. ಆದರೆ, ಇದೀಗ ಅದೇ ಕಾಮಗಾರಿಗಳಿಗೆ ಶಾಸಕ ಎನ್.ಎಚ್. ಕೋನರಡ್ಡಿ ಭೂಮಿ ಪೂಜೆ ನಡೆಸುತ್ತಿರುವುದು ನಾಚಿಗೇಡಿತನದ ಸಂಗತಿ. ಸರ್ಕಾರ ರೈತವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದ್ದರೂ, ಶಾಸಕ ಕೋನರಡ್ಡಿ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. 8 ತಿಂಗಳ ಅವಧಿಯಲ್ಲಿ ಶಾಸಕರು,  ಕ್ಷೇತ್ರಕ್ಕೆ ಒಂದೇ ಒಂದು ಹೊಸ ಯೋಜನೆ ತರಲು ಸಾಧ್ಯವಾಗಿಲ್ಲ ಎಂದು ಮಾಜಿ ಶಾಸಕ ಮುನೇನಕೊಪ್ಪ ಕಿಡಿಕಾರಿದರು.
ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಸ್ಥಗಿತಗೊಳಿಸಲು ಮುಂದಾದರೇ ರೈತರು ಹಾಗೂ ಶ್ರೀಸಾಮಾನ್ಯರೊಂದಿಗೆ ಕೂಡಿಕೊಂಡು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಸ್ಥಳೀಯ ಶಾಸಕರು ಗ್ರಾಪಂ ಸದಸ್ಯರ ಅಧಿಕಾರ ಮೊಟಕುಗೊಳಿಸುವಂತಹ ಹುನ್ನಾರಕ್ಕೆ ಕೈಹಾಕಿದರೆ ಸುಮ್ಮನಿರುವುದಿಲ್ಲ ಎಂದು ಗುಡಗಿದ ಮುನೇನಕೊಪ್ಪ, ಬಸವ ವಸತಿ ಯೋಜನೆ ಅಡಿಯಲ್ಲಿ ಮಂಜೂರಾದ ಮನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರ ಗ್ರಾಪಂ ಸದಸ್ಯರಿಗಿದೆ. ಶಾಸಕ ಕೋನರಡ್ಡಿ, ಗ್ರಾಪಂ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಬೆದರಿಕೆ ಹಾಕಿ ತಾವೇ ಈ ಅಧಿಕಾರ ಚಲಾಯಿಸಲು ಮುಂದಾಗಿದ್ದಾರೆ ಎಂದು ದೂರಿದ ಅವರು, ತಾಕತ್ತಿದ್ದರೆ ಸರ್ಕಾರದಿಂದ 100 ಮನೆಗಳನ್ನು ಮಂಜೂರು ಮಾಡಿಸಿಕೊಂಡು ಬರಲಿ ಎಂದು ಸವಾಲು ಹಾಕಿದರು.
ಅಳಗವಾಡಿ ಗ್ರಾಮದಲ್ಲಿನ ರು. 42 ಕೋಟಿಗಳ ಏತ ನೀರಾವರಿ ಯೋಜನೆಗೆ ಚಾಲನೆ ನೀಡಬೇಕು, ಕಳಸಾ-ಬಂಡೂರಿ ಕಾಮಗಾರಿ ಆರಂಭಕ್ಕೆ ಕ್ರಮಕೈಗೊಳ್ಳಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು. ತಾಲೂಕು ಬಿಜೆಪಿ ಅಧ್ಯಕ್ಷ ಎ.ಬಿ. ಹಿರೇಮಠ, ಜಿಪಂ ಉಪಾಧ್ಯಕ್ಷ ಫಕ್ಕೀರಪ್ಪ ಜಕ್ಕಣ್ಣವರ,  ಡಾ. ಎಂ.ಬಿ. ಮುನೇನಕೊಪ್ಪ, ಷಣ್ಣುಖ ಗುರಿಕಾರ, ಜಿಪಂ ಸದಸ್ಯರಾದ ಶಾಂತಾ ನಿಡವಣಿ, ಅಡಿವೆಪ್ಪ ಮನಮಿ, ಸುರೇಶ ಗಾಣಿಗೇರ, ಎಪಿಎಂಸಿ ಅಧ್ಯಕ್ಷ ಎ.ಎಸ್. ಬಾಗಿ, ತಾಪಂ ಸದಸ್ಯರಾದ ಮಲ್ಲನಗೌಡ ರಾಟಿಮನಿ, ನಿಂಗಪ್ಪ ಬಾರಕೇರ, ಶ್ಯಾಮಲಾ ಕೆರಿಮನಿ, ಲಲಿತಾ ಕುಲಕರ್ಣಿ, ರೈತ ಮುಖಂಡ ಬಸಣ್ಣ ಬೆಳವಣಕಿ, ನಾಗನಗೌಡ ಪಾಟೀಲ, ರಾಯನಗೌಡ ಪಾಟೀಲ, ನಾಗಪ್ಪ ಹರ್ತಿ, ಸಿದ್ದಣ್ಣ ಕಿಟಗೇರಿ, ಶ್ರೀಕಾಂತ ಪಾಟೀಲ, ಕರಿಯಪ್ಪ ಕುರ್ಲಗೇರಿ, ಅಜೀತ ಮುಳಗುಂದಮಠ, ಮಂಜುನಾಥ ನಾಯ್ಕರ, ಎಸ್.ಬಿ. ದಾನಪ್ಪಗೌಡರ, ಅಭಿನಂದನ ಜೈನರ, ಬಾಳನಗೌಡರ, ಕೊಟ್ರೇಶ ಶಿರೂರ, ಈರಣ್ಣ ಚವಡಿ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement