ಚಿಗರಿಗಂಗಾಳಚೆಲುವಿ,ಬೆದರಿನಿಂತಾಳ...
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 18
ಚಿಗರಿ ಗಂಗಾಳ ಚೆಲುವಿ ಚೆದುರಿ ನಿಂತಾಳ ನೋಡೋ ಬೆದರಿ ನಿಂತಾಳ
ಹೊಳೆ ಹಳ್ಳ ತೊರೆದಾವೋ ಗೆಣೆಯ ಹಕ್ಕಿ ಬಡಿದಾವೋ
ಆಗದ ಹೊಟ್ಟಿ ಉರಿದಾವೋ ಗೆಣೆಯಾ ಹೊಟ್ಟಿ ಉರದಾವ...
......
ಮರಳು ಮಾಡಾಕ ಹೋಗಿ ಮರಳು ಸಿದ್ಧನ ನಾರಿ
ಮರುಳಾಗಾಳೋ ಜಂಗಮಯ್ಯಾಗ...
ಕಿನ್ನಾರಿ ಆಗ್ಯಾಳೋ ಕೈಯಾಗ,
ನುಡಿದಾಳೋ ಬಂದಾಂಗ ಮೈಯಾಗ
ಆಡುತಾಡುತ ಬಂದು ಸಿಂಗಾರ ಸೊಳ್ಳಿ ಹಾಂಗ
ಹಾರಿ ನಾ ಕಿವಿಗಲ್ಲ ಕಡಿದೇನ
ಹಾದಿ ತಪ್ಪಿಸಿಕೊಂಡು ಗುಂಗಿಯ ಹುಳದಾಂಗ
ನನ್ನನ್ನ ದುರುಗುಟ್ಟಿ ನೋಡಿದೇನ...
ಆ ಕವಿತೆಗಳ ಪೈಕಿ ಬಹುಪಾಲು ಕವಿತೆಗಳು ನಾಡಿನ ವೈಭವ, ಸುಗ್ಗಿಯ ಸೊಬಗು, ಅನ್ನದಾತನ ಬಣ್ಣನೆ, ಸಾಮಾಜಿಕ ಪಿಡುಗು, ರಾಜಕೀಯ ಅತಿರೇಕತನ, ಅತ್ಯಾಚಾರಗಳ ವಿರುದ್ಧವೇ ಸುತ್ತಾಡಿದವು. ಕವಿತೆಗಳ ಈ ಸುತ್ತಾಟಕ್ಕೆ ವೇದಿಕೆ ಸೃಷ್ಟಿಯಾಗಿದ್ದು, ಧಾರವಾಡ ಸಾಹಿತ್ಯ ಸಂಭ್ರಮದಲ್ಲಿನ ಬೇಂದ್ರೆ ಮತ್ತು ಕುವೆಂಪು ಕವಿತೆಗಳ ಓದು ಗೋಷ್ಠಿ. ಸಾಹಿತ್ಯ ಸಂಭ್ರಮದ ಎರಡನೇ ದಿನ ಶನಿವಾರ ನಡೆದ ಗೋಷ್ಠಿಯಲ್ಲಿ ಬರೋಬ್ಬರಿ 16 ಕವಿಗಳು ಬೇಂದ್ರೆಯವರ ಹಾಗೂ ಕುವೆಂಪು ಅವರ ಕವನ ವಾಚನ ಮಾಡಿದರು. ಧಾರವಾಡದಲ್ಲಿ ಸಾಹಿತ್ಯ ಸಂಭ್ರಮ ನಡೆಯುತ್ತಿರುವ ಪರಿಣಾಮ ಇಲ್ಲಿ ಬೇಂದ್ರೆಯವರ ಕವನಗಳನ್ನೇ ಕವಿಗಳು ಹೆಚ್ಚಾಗಿ ಆಯ್ದುಕೊಂಡಿದ್ದು ಸುಳ್ಳಲ್ಲ. ಬೇಂದ್ರೆ ಹಾಗೂ ಕುವೆಂಪು ಕನ್ನಡ ಸಾರಸ್ವತ ಲೋಕಕ್ಕೆ ಅಗ್ರ ಕವಿತೆಗಳ ಕೊಡುಗೆ ನೀಡಿದ್ದಾರೆ. ಸಾಮಾಜಿಕ ಅಂಕುಡೊಂಕು ತೋರಿಸುವ, ತಿವಿಯುವ ಕವಿತೆಗಳನ್ನೇ ಆಯ್ದುಕೊಂಡಿದ್ದರು. ಕವನ ವಾಚನ ಆರಂಭಿಸಿದ ಚಂದ್ರಶೇಖರ ತಾಳ್ಯ, ಬೇಂದ್ರೆ ಅವರ ಕಲ್ಪವೃಕ್ಷ ವೃಂದಾವನಂಗಳಲಿ... ಕವನ ವಾಚಿಸಿದರು. ಬಳಿಕ ನಾಡೋಜ ಚನ್ನವೀರ ಕಣವಿ, ಭಾದ್ರಪದ ಬಯಲು ಸೀಮೆ ಕವನದ ಮೂಲಕ ಸುಗ್ಗಿಯ ಸೊಬಗು ಮೂಡಿಸಿದರು. ಚೆನ್ನಣ್ಣ ವಾಲೀಕಾರ, ಬೇಂದ್ರೆಯವರ ಬಹು ಪ್ರಸಿದ್ಧ ಬಾರೋ ಸಾಧನ ಕೇರಿಗೆ ಮರಳಿ ನನ್ನೂರಿಗೆ... ಕವನ ವಾಚಿಸಿ ನೆರೆದವರನ್ನು ಬೇಂದ್ರೆಯಜ್ಜನೂರಿನ ಪರಿಚಯ ಮಾಡಿಸಿಕೊಟ್ಟರು. ಅಲ್ಲಮಪ್ರಭು ಬೆಟ್ಟದೂರು ಕುವೆಂಪು ರಚಿತ ಓ ನನ್ನ ಸಹೋದರರೇ ಬೇಗ ಬನ್ನಿ... ಕವಿತೆಯ ಮೂಲಕ ಮೌಢ್ಯತೆ ಹೊರಬಿಟ್ಟು ಬನ್ನಿ ಎನ್ನುವ ಸಂದೇಶ ಸಾರಿದರಲ್ಲದೇ ಮನುಜಮತಕೆ ಒಂದಾಗಲು ಕರೆಯಿತ್ತರು. ರಾಜಕಾರಣಿಯಾದರೂ ಸಾಹಿತ್ಯ ಕೃಷಿ ಮಾಡುತ್ತಿರುವ ವೈಎಸ್ವಿ ದತ್ತ, ಅನ್ನ ಬಕಾಸುರ ರಾಜ್ಯದಲ್ಲಿ ಅನ್ನಕೆ ಕೊರತೆಯಿಲ್ಲ, ಆದರೂ ಮುಕ್ಕವರಿಗೆ ಕೊರತೆಯಿಲ್ಲ.. ಎನ್ನುವ ಕವನ ವಾಚಿಸುವ ಮೂಲಕ ಇಂದಿನ ರಾಜಕೀಯ ಸ್ಥಿತಿಗೆ ಕನ್ನಡಿ ಹಿಡಿದರು. ಲತಾ ರಾಜಶೇಖರ ಕುವೆಂಪು ಅವರ ಓ ನನ್ನ ಚೇತನ ಆಗು ನೀ ಅನಿಕೇತನ... ಕವನ ವಾಚಿಸಿದರು. ಶಾಂತಾ ಇಮ್ರಾಪುರ, ಭೂಮಿ ತಾಯಿಯ ಮೇಲೆ ನಡೆಯುತ್ತಿರುವ ನಿರಂತರ ಅತ್ಯಾಚಾರ ಕಂಡು ಕವಿ ಬೇಂದ್ರೆ ಅನುಭವಿಸಿದ ತಳಮಳ ವ್ಯಕ್ತವಾಗಿರುವ ಕವನ ವಾಚಿಸಿದರು. ಬೇಂದ್ರೆಯವರ ತೀವ್ರವಾದ ಸಾಮಾಜಿಕ ಪ್ರಜ್ಞೆ, ಉತ್ಕಟವಾದ ಜೀವಪರ ಕಾಳಜಿ ಈ ಕವನದಲ್ಲಡಗಿತ್ತು. ಹೇಮಾ ಪಟ್ಟಣಶೆಟ್ಟಿ ತಮ್ಮ ಕವನದ ಮೂಲಕ ಜಾತಿ ವ್ಯವಸ್ಥೆಗೆ ಚಾಟಿ ಬೀಸಿದರು. ಗುರುಲಿಂಗ ಕಾಪನೆ, ನೇಗಿಲ ಯೋಗಿಯ ಮಹಿಮೆ ಬಿಚ್ಚಿಟ್ಟರು. ಚೆನ್ನೈ ವಿವಿಯ ಕನ್ನಡ ಪ್ರಾಧ್ಯಾಪಕಿ ತಮಿಳ್ ಸೆಲ್ವಿ, ಕನಸಿನ ಲೋಕಕೆ ಕರೆದೊಯ್ದು ಬಡವನ ಸಿಟ್ಟು ದವಡೆಗೆ ಮೂಲ ಎಂಬ ಮಾತು ರುಜುವಾತಾದರೆ ಹೇಗಿದ್ದೀತು ಎನ್ನುವ ಕಲ್ಪನೆ ಕಣ್ಮುಂದೆ ಕಟ್ಟಿ ಕೊಟ್ಟರು. ಬಸಲಿಂಗಯ್ಯ ಹಿರೇಮಠ, ಎಲ್. ಹನುಂಮತಯ್ಯ, ಚಂದ್ರಶೇಖರ ವಸ್ತ್ರದ, ಶ್ರೀನಿವಾಸ ವಾಡಪ್ಪಿ, ಬಸವರಾಜ ಡೋಣೂರ ಮತ್ತಿತರರು ಕವನ ವಾಚಿಸಿದರು. ರಾಧಿಕಾ ಕಾಖಂಡಕಿ, ಇನ್ನೂ ಯಾಕ ಬರಲಿಲ್ಲ ಹುಬ್ಬಳ್ಳಿಯಾಂವಾ ವಾರದಾಗ ಮೂರು ಸರ್ತಿ ಬಂದು ಹೋಗಾವಾಂ... ಕವನ ವಾಚಿಸಿ ಗೋಷ್ಠಿಗೆ ಶ್ರೀಕಾರ ಹಾಡಿದರು. ಗೋಷ್ಠಿ ವಿಷದೀಕರಿಸಿದ ಶ್ಯಾಮಸುಂದರ ಬಿದರಕುಂದಿ, ಉತ್ತರದ ಬೇಂದ್ರೆ, ದಕ್ಷಿಣದ ಕುವೆಂಪು ಕನ್ನಡ ನಾಡು ನುಡಿ ಜಾಗೃತಿಗೊಳಿಸಿದರು. ಇವರಿಬ್ಬರೂ ಕನ್ನಡದ ಕಣ್ಣುಗಳೆಂದು ಬಣ್ಣಿಸಿದರು.