ಜಿಮಖಾನಾ ಮೈದಾನ: ವರದಿ ಸಲ್ಲಿಕೆ
ಹುಬ್ಬಳ್ಳಿ: ನಗರದ ಜಿಮಖಾನಾ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಶನಿವಾರ ಜಿಲ್ಲಾಧಿಕಾರಿ ಸಮೀರ ಶುಕ್ಲ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಕರ್ನಾಟಕ ಜಿಮಖಾನಾ ಅಸೋಸಿಯೇಷನ್ ಸ್ವಾಧೀನದಲ್ಲಿದ್ದ ಮೈದಾನವನ್ನು ಕೆಲವೇ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಷಡ್ಯಂತ್ರ ನಡೆಯುತ್ತಿದೆ ಎಂದು ನಾಡೋಜ ಪಾಟೀಲ ಪುಟ್ಟಪ್ಪ ಸೇರಿದಂತೆಇತರರು ಸರ್ಕಾರಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈದಾನಕ್ಕೆ ಸಂಬಂಧಿಸಿದಂತೆ ಉದ್ಭವಿಸಿದ ವಿವಾದ, ವಸ್ತುಸ್ಥಿತಿ ಕುರಿತು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಸರ್ಕಾರದ ಸೂಚನೆ ಅನ್ವಯ ಜಿಲ್ಲಾಧಿಕಾರಿ ಶುಕ್ಲ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಜಿಮಖಾನಾ ಕ್ಲಬ್ ಕೆಲವು ತಪ್ಪುಗಳನ್ನು ಎಸಗಿದೆ ಎಂದು ಹೇಳಿದ್ದಾರೆ. ಮುನ್ಸಿಪಲ್ ಕಾಯ್ದೆ ಪ್ರಕಾರ ಕಟ್ಟಡ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿದ್ದಾರೆ. ಅದೇ ಪ್ರಕಾರ ಜಯಪ್ರಿಯ ಆಸ್ಪತ್ರೆ ವೈದ್ಯ ಶ್ರೀಕೃಷ್ಣ ನಾಡಗೌಡ ಅವರು ತಾವು ಸಲ್ಲಿಸಿದ್ದ ತಕರಾರನ್ನು ಹಿಂಪಡೆದಿದ್ದಾರೆ. ಹುಬ್ಬಳ್ಳಿ ನಗರದ ಇನ್ನಿತರ ಕ್ರಿಕೆಟ್ ಕ್ಲಬ್ಗಳು ಸಲ್ಲಿಸಿದ ಮನವಿಯಲ್ಲಿ ಜಿಮಖಾನಾ ಮೈದಾನದಲ್ಲಿ ಇದೀಗ ಅತ್ತ್ಯುತ್ತಮ ಕ್ರಿಕೆಟ್ ಆಡುವುದಕ್ಕೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಡಿಸಿ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಸರ್ಕಾರಕ್ಕೆ ಜಿಲ್ಲಾಧಿಕಾರಿ ಸಮೀರ್ ಶುಕ್ಲ ಅವರು ಸಲ್ಲಿಸಿರುವ ವರದಿಯಲ್ಲಿ ಶೇ. 90ಕ್ಕೂ ಹೆಚ್ಚು ಅಂಶಗಳು ಗ್ರೌಂಡ್ ಬಚಾವೋ ಸಮಿತಿ ಪರವಾಗಿವೆ ಎಂದು ಗ್ರೌಂಡ್ ಬಚಾವೋ ಸಮಿತಿ ಸದಸ್ಯರು ಶನಿವಾರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.