ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪ್ರಭಾವಿಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ

Mainashree
Updated On : 20 Jan 2014, 11:51 am

ಕನ್ನಡಪ್ರಭ ವಾರ್ತೆ, ಧಾರವಾಡ, ಜ. 19
ತೋಳಬಲವುಳ್ಳ ಸಮುದಾಯದ ದಬ್ಬಾಳಿಕೆ, ಕಿಡಿಗೇಡಿಗಳ ಅಟ್ಟಹಾಸ, ರಾಜಕಾರಣಿಗಳ ಹಿತಾಸಕ್ತಿ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದ್ದು, ವ್ಯಕ್ತಿ ಅಭಿವ್ಯಕ್ತಿ ಸ್ವಾತಂತ್ರ್ಯ ಬಿಕ್ಕಟ್ಟಿನಲ್ಲಿದೆ ಎಂಬ ಕಟು ಸತ್ಯಾಂಶದ ಮೇಲೆ ಧಾರವಾಡ ಸಾಹಿತ್ಯ ಸಂಭ್ರಮ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ.
ಧಾರವಾಡ ಸಾಹಿತ್ಯ ಸಂಭ್ರಮದ ಮೂರನೇ ದಿನ ಭಾನುವಾರ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆದ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ವಿಷಯ ಕುರಿತಾದ ಗೋಷ್ಠಿಯಲ್ಲಿ ಚಂದ್ರಶೇಖರ ಪಾಟೀಲ, ಪದ್ಮರಾಜ ದಂಡಾವತಿ, ಮಲ್ಲಿಕಾ ಘಂಟಿ ಮಾತನಾಡಿದರು.
ಮಲ್ಲಿಕಾ ಘಂಟಿ ಮಾತನಾಡಿ, ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಕೆಲವರ ಹಿತಾಸಾಕ್ತಿಗೆ ಒಳಗಾಗಿ ಮೊಟಕುಗೊಳ್ಳುತ್ತಿದೆ. ಇನ್ನೊಂದೆಡೆ ಆಚಾರ, ಸಂಪ್ರದಾಯ, ನಂಬಿಕೆಗಳಿಗೆ ಕಟ್ಟು ಬಿದ್ದ ಸಮಾಜದಿಂದಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಬಿಕ್ಕಟ್ಟು ಅನುಭವಿಸುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಅನೇಕ ಮಹಿಳೆಯರು ಕಿಟಕಿಯಲ್ಲಿಯೇ ಹೊರಗಿನ ಸೌಂದರ್ಯವನ್ನು ಸವಿಯಬೇಕಿದೆ. ಪ್ರಗತಿಪರ, ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಎಂದು ಹೇಳಲಾಗುವ ಇಂತಹ ಸಂಸ್ಕೃತಿಯಿಂದ ಮಹಿಳೆಯ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತಿದೆ ಎಂದರು.
ಲೇಖನ ಜವಾಬ್ದಾರಿ: ಹಾಸ್ಯ ಚಟಾಕಿ ಸಿಡಿಸುತ್ತಲೇ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಮಾತನಾಡಲಾಂಭಿಸಿದ ಚಂದ್ರಶೇಖರ ಪಾಟೀಲ, ತಮ್ಮ ಜೀವನದಲ್ಲಾದ ಕೆಲ ಘಟನೆಗಳನ್ನು ಮೆಲಕು ಹಾಕಿದರು. ಅಲ್ಲದೆ, ತೋಳಬಲ ವಿದ್ದವರು ಸಮುದಾಯಿಕವಾಗಿ ಒಬ್ಬರನ್ನೊಬ್ಬರು ಮೇಲೆಬ್ಬಿಸಿ ಸತ್ಯಾಂಶವನ್ನು ಮುಚ್ಚಿ ಹಾಕುವ ಪ್ರಯತ್ನಗಳು ಸಮಾಜದಲ್ಲಿ ಹೆಚ್ಚಾಗಿವೆ. ಇಂತಹ ಸಂದರ್ಭದಲ್ಲಿ ಲೇಖಕನ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಲೇಖಕ ಇಂತಹ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಸಮಾಜವನ್ನು ಜಾಗೃತಗೊಳಿಸಬೇಕು. ಅಲ್ಲದೆ, ಯಾವುದೇ ಪೊಳ್ಳು ಬೆದರಿಕೆಗೆ ಅಂಜದೆ, ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಯೋಗಿಸಬೇಕು ಎಂದು ಸಲಹೆ ನೀಡಿದರು.
ನಾಟಕಕಾರರು, ಸಾಹಿತಿಗಳು ರೂಪಕಗಳ ಆಶ್ರಯದಲ್ಲಿ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಡುತ್ತಾನೆ. ಆದರೆ, ಪತ್ರಿಕಾ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ರೂಪಕಗಳ ಕೊರತೆ ಇದೆ. ಒಂದು ವೇಳೆ ಪತ್ರಿಕೆಯಲ್ಲಿ ಪ್ರಸ್ತುತ ಪಡಿಸಿದರೆ, ಮಾನಹಾನಿ ಪ್ರಕರಣ ದಾಖಲಾಗಿರುತ್ತದೆ. ಅದರಂತೆ ರಾಜಕಾರಣಿಗಳ ಭ್ರಷ್ಟಾಚಾರಗಳ ವಿರುದ್ಧ ಪತ್ರಿಕೆಯಲ್ಲಿ ದಾಖಲೆಗಳನ್ನಿಟ್ಟುಕೊಂಡು ಬರೆದರೂ, ಶಾಸಕಾಂಗ ಸಭೆಯಲ್ಲಿ ಹಕ್ಕು ಚ್ಯುತಿ ಮಂಡನೆ ಮಾಡುವ ಅವಕಾಶವಿದೆ. ಪತ್ರಿಕೋದ್ಯಮದಲ್ಲಿಯೂ ಸಹ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಬಲಾಢ್ಯರ ಪ್ರಭಾವವಿದೆ. ಆದರೂ ಸಮಾಜವನ್ನು ಎಚ್ಚರಿಸುವ ಕಾರ್ಯದಲ್ಲಿ ಸದಾತೊಡಗಿದೆ ಎಂದು ಪದ್ಮರಾಜ ದಂಡಾವತಿ ಪ್ರತಿಪಾದಿಸಿದರು. ಹಿರಿಯ ಸಾಹಿತಿ ಸಿ.ಎನ್. ರಾಮಚಂದ್ರನ್ ಮಾತನಾಡಿದರು. ಗೋಷ್ಠಿಯನ್ನು ನಟರಾಜ್ ಹುಳಿಯಾರ್ ನಿರ್ದೇಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement