ವಿದ್ಯುನ್ಮಾನ ಮಾಧ್ಯಮ ತೆಗಳುವ ಬದಲು ಪಳಗಿಸಿ
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 19
ಸಾಹಿತ್ಯ ಎಂದ ಕೂಡಲೇ ಪೆನ್ನು, ಹಾಳೆ ಕಣ್ಣ ಮುಂದೆ ಬರುತ್ತದೆ. ಆದರೆ, ಕಾಲ ಬದಲಾಗಿದೆ. ವಿದ್ಯುನ್ಮಾನ ಮಾಧ್ಯಮ ಬಳಕೆಯೂ ಸಾಹಿತ್ಯ ಕ್ಷೇತ್ರದಲ್ಲಾಗಬೇಕಿದೆ. ಈಗಾಗಲೇ ಸಾಕಷ್ಟು ಸಾಹಿತಿಗಳು ವಿದ್ಯುನ್ಮಾನ ಮಾಧ್ಯಮಕ್ಕೆ ವಗ್ಗಿಕೊಂಡಿದ್ದಾರೆ. ವಿದ್ಯುನ್ಮಾನ ಮಾಧ್ಯಮವನ್ನು ತೆಗಳುವ ಬದಲು ಅದನ್ನು ಪಳಗಿಸಿಕೊಳ್ಳುವ ಕಲೆ ಕರಗತ ಮಾಡಿಕೊಳ್ಳಬೇಕೆಂಬ ಅಭಿಪ್ರಾಯಕ್ಕೆ ನೆರೆದ ಹಿರಿಯ ಸಾಹಿತಿಗಳೂ ಸೇರಿದಂತೆ ಎಲ್ಲರೂ ಸಮ್ಮತಿ ನೀಡಿದಂತಿತ್ತು.
ಇಲ್ಲಿನ ಕರ್ನಾಟಕ ವಿವಿಯ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಭಾನುವಾರ ನಡೆದ ಧಾರವಾಡ ಸಾಹಿತ್ಯ ಸಂಭ್ರಮದ ಮೂರನೇ ಗೋಷ್ಠಿಯಲ್ಲಿ ವಿದ್ಯುನ್ಮಾನ ಮಾಧ್ಯಮ ಮತ್ತು ಸಾಹಿತ್ಯ ಕುರಿತು ವ್ಯಾಪಕ ಚರ್ಚೆ ನಡೆಯಿತು. ವಸುಧೇಂದ್ರ ಹಾಗೂ ಎನ್ಎಎಂ ಇಸ್ಮಾಯಿಲ್ ವಿದ್ಯುನ್ಮಾನ ಮಾಧ್ಯಮ ಜಗತ್ತನ್ನು ಪರಿಚಯಿಸುವ ಕೆಲಸ ಮಾಡಿದರು. ಮಾತು ಆರಂಭಿಸಿದ ವಸುಧೇಂದ್ರ, ವಿದ್ಯುನ್ಮಾನ ಮಾಧ್ಯಮದ ಬಗ್ಗೆ ಅದೆಷ್ಟೋ ಸಾಹಿತಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಕೆಲವರು ವಿದ್ಯುನ್ಮಾನ ಮಾಧ್ಯಮ ಬಳಸಿಕೋಂಡ ನಂತರ ತೆಗಳಿಕೆ ಬಿಟ್ಟು ಹೊಗಳಲಾರಂಭಿಸಿದ್ದಾರೆ. ತಾವು ರಚಿಸಿದ ಪುಸ್ತಕವೊಂದಕ್ಕೆ ದೇಶ-ವಿದೇಶದವರು ಸಾಥ್ ನೀಡಿದರು. ಆದರೆ, ಪುಸ್ತಕ ಬಿಡುಗಡೆಯಾಗುವವರೆಗೆ ಪುಸ್ತಕ ಪ್ರಕಟಣೆಗೆ ಸಹಕಾರಿಯಾದವರ ಮುಖವನ್ನೇ ನೋಡಲಿಲ್ಲ. ವಿಶೇಷವೆಂದರೆ ಒಂದೇ ಒಂದು ಹಾಳೆ ಬಳಸದೆಯೇ ಪುಸ್ತಕ ಪ್ರಕಟವಾಯಿತು ಎಂದಾಗ ನೆರೆದವರ ಮುಖದಲ್ಲಿ ಅಚ್ಚರಿ.
ಬಳಿಕ ಮಾತಿಗಿಳಿದ ಇಸ್ಮಾಯಿಲ್, ವಿದ್ಯುನ್ಮಾನ ಮಾಧ್ಯಮದ ಸೌಲಭ್ಯಗಳ ಬಗ್ಗೆ ಬಿಡಿ ಬಿಡಿಯಾಗಿ ವಿವರಿಸಿದರು. ಆಡಿಯೋ, ವಿಡಿಯೋ ಹಾಗೂ ಬರವಣಿಗೆಯನ್ನು ಒಂದು ಮಾಡಿದ ಮಾಧ್ಯಮ ಕಂಪ್ಯೂಟರ್. ಕಾಲಕ್ಕೆ ತಕ್ಕಂತೆ ವಿದ್ಯುನ್ಮಾನ ಮಾಧ್ಯಮ ಬಳಸಿಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಾ ಸಾಗಿದೆ. ರೇಡಿಯೊ ಜನರನ್ನು ತಲುಪಲು 38 ವರ್ಷ ತೆಗೆದುಕೊಂಡಿತು, ಟಿವಿ 13 ವರ್ಷದಲ್ಲಿ ಜನರನ್ನು ತಲುಪಿತು. ಇದೇ ವೇಳೆ ಇಂಟರ್ನೆಟ್ 4 ವರ್ಷದಲ್ಲಿ ಜನರನ್ನು ತಲುಪಿತು. ಫೇಸ್ಬುಕ್ ಬಳಕೆಯಲ್ಲಿ ಭಾರತ ವಿಶ್ವದಲ್ಲಿಯೇ 3ನೇ ದೊಡ್ಡ ರಾಷ್ಟ್ರವೆನಿಸಿಕೊಂಡಿದೆ. ಮೊಬೈಲ್ ಬಳಕೆಯಲ್ಲಂತೂ ಕ್ರಾಂತಿಯೇ ಆಗಿದೆ. ಕರ್ನಾಟಕದಲ್ಲಿ ಪ್ರತಿ ಸಾವಿರ ಜನರಲ್ಲಿ 534 ಮಂದಿ ಮೊಬೈಲ್ ಬಳಸುತ್ತಿದ್ದಾರೆ. ದೇಶದ 2.5 ಕೋಟಿ ಜನ 3ಜಿ ಬಳಸುತ್ತಿದ್ದಾರೆ. ಇದೇ ವೇಳೆ ಲ್ಯಾಂಡ್ಫೋನ್ 1.5 ಕೋಟಿ ಜನರನ್ನು ತಲುಪಲು 15 ವರ್ಷ ಕಾಲ ಬೇಕಾಯಿತು. ಇಂದಿನ ಆಧುನಿಕ ಯುಗದಲ್ಲಿ ಟಿವಿ, ಕಂಪ್ಯೂಟರ್, ಮೊಬೈಲ್ ಎಂಬ ಮೂರು ಪರದೆ ಮಾನವನ ಭಾಗವಾಗಿ ಬಿಟ್ಟಿದೆ ಎಂದು ಪ್ರತಿಪಾದಿಸಿದರು.
ಹೊಸ ಬದಲಾವಣೆಯನ್ನು ನಾವು ಭಾವುಕತೆಯಿಂದ ದ್ವೇಷಿಸುತ್ತೇವೆ. ಬಳಿಕ ನಿಧಾನವಾಗಿ ಅದನ್ನು ಒಪ್ಪಿಕೊಂಡು ಬಿಡುತ್ತೇವೆ. ಬೇಕಾದಲ್ಲಿ ಬೇಕಾದಾಗ ಓದಲು ವಿದ್ಯುನ್ಮಾನ ಮಾಧ್ಯಮ ಅವಕಾಶ ಮಾಡಿಕೊಟ್ಟಿದೆ. ಪ್ರಕಾಶಕ, ಲೇಖಕ, ಓದುಗನ ಮಧ್ಯೆ ಸಂವಾದಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ. ಇ-ಬುಕ್ ಮಾರುಕಟ್ಟೆ ಸೃಷ್ಟಿಯಾಗಿದೆ. ಇದರ ಮೂಲಕ ಪುಸ್ತಕ ಖರೀದಿ, ಮಾರಾಟಕ್ಕೆ ಅನುಕೂಲವಾಗಿದೆ ಎಂದ ಇಸ್ಮಾಯಿಲ್ ಸಭಿಕರ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಿದರಲ್ಲದೇ, ವಿದ್ಯುನ್ಮಾನ ಮಾಧ್ಯಮದಿಂದ ಸಮಸ್ಯೆಗಳು ಎದುರಾಗುತ್ತವೆ ಎನ್ನುವುದಕ್ಕಿಂತ ಮುಖ್ಯವಾಗಿ ನಾವದನ್ನು ಒಳ್ಳೆಯ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕು ಎಂದರು.