ಹೊಸತು ಹಳತರ ಸೊಗಸು
ಧಾರವಾಡ: ಹಳೆಗನ್ನಡ ಕನ್ನಡ ಸಾಹಿತ್ಯದ ಬೇರು. ಪ್ರಸ್ತುತ ನಿರ್ಲಕ್ಷ್ಯದ ಪರಮಾವಧಿಯಿಂದ ಹಳೆಗನ್ನಡ ಕಾವ್ಯದ ಓದು ಕಡಿಮೆಯಾಗುತ್ತಿದೆ ಹೊರತು ಹೊಸಗನ್ನಡದ ಪ್ರಭಾವದಿಂದಲ್ಲ ಎಂಬ ವಾಸ್ತವಾಂಶದ ಮೇಲೆ ಧಾರವಾಡ ಸಾಹಿತ್ಯ ಸಂಭ್ರಮ ಹಳೆಗನ್ನಡ ಕಾವ್ಯದ ಓದು ಯಾಕೆ ಬೇಕು ಗೋಷ್ಠಿ ಬೆಳಕು ಚೆಲ್ಲಿತು. ಇಲ್ಲಿನ ಕರ್ನಾಟಕ ವಿವಿಯ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಧಾರವಾಡ ಸಾಹಿತ್ಯ ಸಂಭ್ರದ 3ನೇ ದಿನದ ಎರಡನೇ ಗೋಷ್ಠಿಯಲ್ಲಿ ಹಳೆಗನ್ನಡ ಗತವೈಭವ ಹೊಸಗನ್ನಡದಲ್ಲಿ ಅವಿತಿದೆ ಎಂಬುದನ್ನು ಹಂ.ಪ. ನಾಗರಾಜಯ್ಯ, ಎಂ.ಎಚ್. ಕೃಷ್ಣಯ್ಯ, ಬಿ. ಸುಕನ್ಯಾ ಮಾತನಾಡಿದರು. ಅದರಂತೆ ನಾಗರಾಜ ಹೊಸಗನ್ನಡವೇ ಶ್ರೇಷ್ಠ ಎಂಬುದರ ಕುರಿತು ನಾಗರಾಜ ವಸ್ತಾರೆ ವಾದ ಮಂಡನೆ ಮಾಡಿದರು. ನಾಗರಾಜ ವಸ್ತಾರೆ, ಪಂಪ, ರನ್ನ, ನಾಗವರ್ಮ, ರಾಘವಾಂಕರ ಹಳೆಗನ್ನಡ ಇಂದಿನ ಸಾಹಿತ್ಯಕ್ಕೆ ಬೇಕಿಲ್ಲ. ಪ್ರಸ್ತುತ ವರ್ತಮಾನದಲ್ಲಿರುವ ಹೊಸಗನ್ನಡಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ಹಾಗಾಗಿ, ಹಳೆಗನ್ನಡದಲ್ಲಿನ ಛಂದಸ್ಸು, ರೂಪಕ, ವ್ಯಾಕರಣ ಇಂದಿನ ಸಾಹಿತ್ಯಕ್ಕೆ ಅವಶ್ಯಕವಿಲ್ಲ. ಈ ಹಿಂದಿನ ಹಳೆಗನ್ನಡ ಕಾವ್ಯ ಓದುವುದರಿಂದ ನಮಗೆ ಸೃಜನಶೀಲತೆ ಬರುವುದಿಲ್ಲ. ವರ್ತಮಾನವೇ ಧಾತು ಎಂದು ವಾದ ಮಂಡನೆ ಮಾಡಿದರು. ಇದಕ್ಕೆ ಪ್ರತಿಯಾಗಿ ಹಂ.ಪ. ನಾಗರಾಜಯ್ಯ, ಹಳೆಗನ್ನಡ ಭವಿಷ್ಯದ ಕಲ್ಪನೆ ಹೊಂದಿದೆ. ವರ್ತಮಾನದ ಧಾತುವೇ ಹಳೆಗನ್ನಡ. ಇಂತಹ ಕನ್ನಡ ಕಲಿಕೆ ಕನ್ನಡ ಸಾಹಿತ್ಯಕ್ಕೆ ಹೊಸತನ್ನು ನೀಡಬಲ್ಲದು ಮತ್ತು ಓದುಗರಿಗೆ ಆರೋಗ್ಯಕರ ಸಾಹಿತ್ಯ ಹಳೆಗನ್ನಡ ಎಂದು ಪ್ರತಿಪಾದಿಸಿದರು. ಎಂ.ಎಚ್. ಕೃಷ್ಣಯ್ಯ ಮಾತನಾಡಿ, ಮನುಷ್ಯನ ಬದುಕಿನಲ್ಲಿ ತಾಂತ್ರಿಕತೆಗಳ ಪ್ರಭಾವದಿಂದ ಅನೇಕ ಬದಲಾವಣೆಗಳಾಗಿವೆ. ಅಲ್ಲದೆ, ಪ್ರತಿಯೊಬ್ಬ ಮನುಷ್ಯನಲ್ಲಿ ತಾನು ಪರಿಪೂರ್ಣ ಎಂಬ ಭಾವನೆ ಇದ್ದೆ ಇರುತ್ತದೆ. ಆ ಪೈಕಿಯಲ್ಲಿ ನಾಗರಾಜ ವಸ್ತಾರೆ ಅವರು ಮಾತನಾಡುತ್ತಿದ್ದಾರೆ ಎಂದರು. ಬಿ. ಸುಕನ್ಯಾ, ವ್ಯಕ್ತಿತ್ವ ರೂಪಗೊಳ್ಳಲು ಹಳೆಗನ್ನಡ ಸಹಾಯಕಾರಿ. ವರ್ಣರಂಜಿತ ಭಾಷೆಯ ಬಳಕೆ ಇಂದಿನ ಕಾವ್ಯಗಳ ಲಯವಾಗಿ ಪರಿಣಮಿಸಿದೆ. ಹಳೆಗನ್ನಡದಲ್ಲಿ ಕೆಲ ಸನ್ನಿವೇಶಗಳು ಹೃದಯಸ್ಪರ್ಶಿಯಾಗಿ ಮೂಡಿಸಲಾಗಿದೆ. ಇಂತಹ ಬರಹಗಳು ಸೃಜನಶೀಲ ಬರವಣಿಗೆಗೆ ಗಟ್ಟಿತನ ನೀಡುತ್ತವೆ ಎಂದರು. ಬಸವರಾಜ ಕಲ್ಗುಡಿ ಗೋಷ್ಠಿ ನಿರ್ದೇಶಿಸಿದರು.