ಸುದ್ದಿ ಸಂಕ್ಷೇಪ
ಇಂದಿನಿಂದ ಉಪನ್ಯಾಸ, ಕ್ಷೇತ್ರ ಕಾರ್ಯಾಗಾರ
ಧಾರವಾಡ: ಇಲ್ಲಿನ ಧರ್ಮಸ್ಥಳ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಜ. 21 ರಿಂದ ಮೂರು ದಿನಗಳ ಕಾಲ ಕಣ ಸಂಚಯನ ಪ್ರಕ್ರಿಯೆ ಮತ್ತು ಧಾತು ಸಂಚಯನ ಪ್ರಕ್ರಿಯೆ ವಿಷಯದ ಕುರಿತು ಅಂತಾರಾಷ್ಟ್ರೀಯ ಉಪನ್ಯಾಸ ಮತ್ತು ಕ್ಷೇತ್ರ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಾಚಾರ್ಯ ಡಾ. ಎಸ್. ಮೋಹನಕುಮಾರ, ಜ. ಜ. 21 ರಂದು ಬೆಳಗ್ಗೆ 10ಕ್ಕೆ ಕೇಂದ್ರ ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಶೈಲೇಶ ನಾಯಕ ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು. ಹೈದರಾಬಾದ್ ಆಟೋಮಿಕ್ ಮಿನರಲ್ ಡಿವಿಜನ್ ನಿರ್ದೇಶಕ ಡಾ. ಪಿ.ಎಸ್. ಪರಿಹರ ಅತಿಥಿಯಾಗಿದ್ದು, ಎಸ್ಡಿಎಂ ಸೊಸೈಟಿ ಕಾರ್ಯದರ್ಶಿ ಜಿನೇಂದ್ರ ಪ್ರಸಾದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು. ಕಾರ್ಯಾಗಾರ ಸಂಚಾಲಕ ಡಾ. ವಿ.ಎಸ್. ಹೆಗಡೆ ಮಾತನಾಡಿ, ಕಾರ್ಯಾಗಾರದಲ್ಲಿ ಇಟಲಿ, ನಾರ್ವೆ ಇತರ ದೇಶದ ವಿಜ್ಞಾನಿಗಳು, 80 ಸಂಶೋಧಕರು, ಪರಿಣಿತರು ಪಾಲ್ಗೊಳ್ಳುವರು ಎಂದು ಹೇಳಿದರು.
ದೃಶ್ಯಕಲಾ ರಸಗ್ರಹಣ ಕಮ್ಮಟ
ಧಾರವಾಡ: ಕರ್ನಾಟಕ ಕಲಾ ಮಹಾವಿದ್ಯಾಲಯದ ಸೃಜನಶೀಲ ವಿದ್ಯಾರ್ಥಿಗಳ ವೇದಿಕೆ, ಕರ್ನಾಟಕ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಕಲಾ ಮಂಡಳ ಸಂಯುಕ್ತ ಆಶ್ರಯದಲ್ಲಿ 'ದೃಶ್ಯ ಕಲಾ ರಸಗ್ರಹಣ ಕಮ್ಮಟ'ವನ್ನು ಜ. 25 ಮತ್ತು 26ರಂದು ಇಲ್ಲಿಯ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ. ಈಗಾಗಲೇ ಜಿಲ್ಲೆಯ ವಿವಿಧ ಮಹಾವಿದ್ಯಾಲಯಗಳಿಗೆ ಈ ಕುರಿತು ಮಾಹಿತಿ ರವಾನಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಜ. 22ರ ಸಂಜೆ ಒಳಗಾಗಿ ತಮ್ಮ ಹೆಸರನ್ನು ದೂರವಾಣಿ ಮೂಲಕ ನೋಂದಾಯಿಸಬಹುದು. ಮಾಹಿತಿಗೆ ಡಾ. ಎ.ಆರ್.ಯಾರ್ದಿ (ಮೊಸಂ-7829001184) ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಇಂದು ಕವನ ವಾಚನ
ಧಾರವಾಡ: ಎಂ. ಡಿ. ಗೋಗೇರಿ ದತ್ತಿ ಅಂಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಜ. 21ರಂದು ಸಂಜೆ 6ಕ್ಕೆ 'ಗೋಗೇರಿ ಅವರ ಕವನಗಳ ವಾಚನ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಮಚಂದ್ರ ಪಾಟೀಲ, ಡಾ. ಬಸು ಬೇವಿನಗಿಡದ, ಡಾ. ಜಿನದತ್ತ ಹಡಗಲಿ, ಅನಿಲ ದೇಸಾಯಿ ಅವರು ಕವನ ವಾಚಿಸಲಿದ್ದು, ದತ್ತಿ ದಾನಿ ಎಂ.ಡಿ. ಗೋಗೇರಿ ಉಪಸ್ಥಿತರಿರುವರು. ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ಎಸ್. ವರ್ಧನ್ ಅಧ್ಯಕ್ಷತೆ ವಹಿಸುವರು.