ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹಿಂಜರಿಕೆ ಬಿಟ್ಟು ಮುನ್ನುಗ್ಗಿದರೆ ನಿಶ್ಚಿತ ಫಲ

Mainashree
Updated On : 21 Jan 2014, 12:26 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 20
ಯಾವುದೇ ಉದ್ಯೋಗ ಕೈಗೊಳ್ಳುವ ಮುನ್ನ ಲಾಭ-ನಷ್ಟದ ಬಗ್ಗೆ ಯೋಚನೆ ಬೇಡ. ಹಿಂಜರಿಕೆಯಂತೂ ಇರಲೇಬಾರದು, ಅಂದುಕೊಂಡು ಗುರಿ ಸಾಧಿಸುವ ನಿಟ್ಟಿನಲ್ಲಿ ಮುನ್ನುಗ್ಗಬೇಕೆಂದು ವಿವಿಧ ಕ್ಷೇತ್ರದ ದಿಗ್ಗಜರು ಯುವ ಮನಸ್ಸುಗಳನ್ನು ಹುರಿದುಂಬಿಸಿದರು.
ದೇಶಪಾಂಡೆ ಫೌಂಡೇಶನ್ ವಿದ್ಯಾನಗರದ ಬಿವಿಬಿ ಕಾಲೇಜ್‌ನಲ್ಲಿ ಹಮ್ಮಿಕೊಂಡಿರುವ 4ನೇ ಯುವ ಸಮ್ಮೇಳನದಲ್ಲಿ ಸೋಮವಾರ ಅಭಿವೃದ್ಧಿ ಸಂವಾದದಲ್ಲಿ ಪಾಲ್ಗೊಂಡಿದ್ದ, ಮಣಿಪಾಲ್ ಗ್ಲೋಬಲ್ ಎಜ್ಯುಕೇಶನ್ ಚೇರ್‌ಮನ್ ಟಿ.ವಿ. ಮೋಹನದಾಸ್ ಪೈ, ಪ್ರಧಾನ ಸಹ ಸಂಸ್ಥಾಪಕ ದೀಪ ಜೋಶಿ ಹಾಗೂ ಭಾರತದಲ್ಲಿರುವ ಕೆನಡಾ ರಾಯಭಾರಿ ಸ್ಟೀವರ್ಟ್ ಬೆಕ್, ಸ್ವಯಂ ಉದ್ಯೋಗಕ್ಕೂ ಮುನ್ನ ಮಾಡಿಕೊಳ್ಳಬೇಕಾದ ತಯಾರಿ, ಎದುರಾಗುವ ಸಮಸ್ಯೆಗಳು, ಎದುರಿಸುವ ಬಗೆ ತಿಳಿಸಿಕೊಟ್ಟರು.
ಮೊದಲು ಮಾತು ಆರಂಭಿಸಿದ ಮೋಹನದಾಸ್ ಪೈ, ತಾವು ಇಸ್ಕಾನ್ ಸಂಸ್ಥೆಗೆ ಅಕ್ಷಯ ಪಾತ್ರೆ ಯೋಜನೆಯ ಬಗ್ಗೆ ತಿಳಿಸಿಕೊಟ್ಟೆವು. ಸಮಾಜ ಇಸ್ಕಾನ್ ಗುರುತಿಸುವಾಗ ನೀವು ಸಮಾಜಕ್ಕೇನಾದರೂ ಕೊಡುವಂತೆ ತಿಳಿಸಿದೆವು. ಅಕ್ಷಯ ಪಾತ್ರೆ ಆರಂಭವಾಗುವ ಕಾಲಕ್ಕೂ ಸಾಕಷ್ಟು ಸವಾಲು ಎದುರಾಗಿದ್ದವು. ಆದರೆ, ಅದನ್ನೆಲ್ಲ ಬದಿಗೊತ್ತಿ ಗುರಿಯತ್ತ ಮುನ್ನುಗ್ಗಿದ ಪರಿಣಾಮ ಅಕ್ಷಯ ಪಾತ್ರೆ ಇಂದು ಮಾದರಿಯಾಗಿ ನಿಂತಿದೆ. ಎಲ್ಲವೂ ಪಾರದರ್ಶಕವಾಗಿದ್ದಾಗಿಯೂ ಶಾಸಕರೊಬ್ಬರು ಅಧಿವೇಶನದಲ್ಲಿ ಅಕ್ಷಯ ಪಾತ್ರೆಯತ್ತ ಬೊಟ್ಟು ಮಾಡಿ ತೋರಿದರು. ಆದರೆ, ವಾಸ್ತವಾಂಶ ಹೊರ ಬಂದಾಗ ಆರೋಪ ಮಾಡಿದವರೂ ಸುಮ್ಮನಾದರು.
ನಾವು ಕಂಡ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುನ್ನುಗ್ಗಬೇಕು. ಕಾಲಕಾಲಕ್ಕೆ ನಾವು ಕೈಗೊಂಡ ಕಾರ್ಯದ ಬಗ್ಗೆ ಪರಿಶೀಲನೆ ಮಾಡಬೇಕು, ಜತೆಗೆ ಯೋಜನೆಯಲ್ಲಿ ಅಗತ್ಯವಿದ್ದರೆ ಕೆಲ ಸಣ್ಣ ಬದಲಾವಣೆ ಮಾಡಿಕೊಳ್ಳಬೇಕು. ಹಣಕಾಸಿನ ಸಮಸ್ಯೆ ಎದುರಾದಾಗ ದಾನಿಗಳಿಂದ ಸಹಾಯ ಪಡೆದುಕೊಂಡರೆ ತಪ್ಪಿಲ್ಲ. ಯಾವುದೇ ಕಾರಣಕ್ಕೂ ಸಂಯಮ, ಸ್ಫೂರ್ತಿ ಕಳೆದುಕೊಳ್ಳಬಾರದು. ಆಗ ಮಾತ್ರ ಉದ್ದಿಮೆ ಬೆಳೆದು ಬರಲು ಸಾಧ್ಯ ಎಂದರು.
ಸವಾಲು ಎದುರಿಸಿ: ಎನ್‌ಜಿಒಗಳು ಸಾಮಾಜಿಕ ಕಾರ್ಯದಲ್ಲಿ ತೊಡಗುವಾಗ ಜನರು ಸಂಶಯದಿಂದ ನೋಡುವುದು ಸಹಜ. ಆದರೆ ನಾವು ಎದೆಗುಂದಬಾರದು. ಸಾಮಾಜಿಕ ಕಾರ್ಯವೇ ಮುಖ್ಯ ಉದ್ದೇಶವಾಗಿರುವಾಗ ಹಿಂಜರಿಕೆಯಿರಬಾರದು. ಜತೆಗೆ ನಾವು ಮಾಡುತ್ತಿರುವ ಕಾರ್ಯವನ್ನು ಜನರಿಗೆ ಮನದಟ್ಟು ಮಾಡಬೇಕು. ಸಾಮಾಜಿಕ ಕಾರ್ಯವನ್ನು ಒಳ್ಳೆಯ ಉದ್ದೇಶವಿಟ್ಟುಕೊಂಡು ಮಾಡಬೇಕೇ ವಿನಃ ಹಣಕ್ಕಾಗಿ ಅಲ್ಲ. ಸಾಮಾಜಿಕ ಕಾರ್ಯ ನಮ್ಮ ಧರ್ಮವೂ ಹೌದು ಎಂದರು.
ಶಿಕ್ಷಣವೇ ಮುಖ್ಯ: ಸ್ಟೀವರ್ಟ್ ಬೆಕ್ ಮಾತನಾಡಿ, ಸ್ವಾವಲಂಬನೆಯ ಹಾದಿಗೂ ಮುನ್ನ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣವಿಲ್ಲದೇ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸರ್ಕಾರ ಕೂಡ ಶಿಕ್ಷಣಕ್ಕೆ ಒತ್ತು ನೀಡಬೇಕು. ಜತೆಗೆ ಮೂಲಸೌಕರ್ಯದತ್ತ ಗಮನ ಹರಿಸಬೇಕು. ಇವೆಲ್ಲ ಸಿಕ್ಕ ಬಳಿಕ ಜನ ಸಹಜವಾಗಿ ಸ್ವಾವಲಂಬನೆಯತ್ತ ಮುಖ ಮಾಡುತ್ತಾರೆ. ಇದರಿಂದಾಗಿ ದೇಶದ ಆರ್ಥಿಕ ಪ್ರಗತಿ ಸಾಧ್ಯ. ಯಾವುದೇ ಕಾರ್ಯ ಕೈಗೊಳ್ಳುವ ಮುನ್ನ ಸ್ಪಷ್ಟ ಯೋಜನೆ ಹಾಗೂ ಗುರಿ ಹೊಂದಿರಬೇಕು. ಆದಾಗಲೇ ಪರಿಣಾಮಕಾರಿ ಫಲಿತಾಂಶ ಸಿಗಲು ಸಾಧ್ಯ ಎಂದರು.
ಜಾಗೃತಿ ಮೂಡಿಸಿ: ದೀಪ ಜೋಶಿ ಮಾತನಾಡಿ, ಜನರನ್ನು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಜಾಗೃತಿ ಮೂಡಿಸುವುದು ಸುಲಭದ ಮಾತಲ್ಲ. ತಮ್ಮ ಸಂಸ್ಥೆ ಮಹಿಳೆಯರನ್ನು ಸಂಘಟಿತರನ್ನಾಗಿಸುವ ಹಾಗೂ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಕೈಗೊಂಡಿತ್ತು. ಈ ಸಂದರ್ಭ ಸಾಕಷ್ಟು ಸವಾಲು ಎದುರಾದವು. ಹೀಗಿದ್ದಾಗ ಸಂಯಮ ಕಳೆದುಕೊಳ್ಳದೇ ಮುನ್ನುಗ್ಗಿದ ಪರಿಣಾಮ ಇಂದು ಗುಡ್ಡಗಾಡು ಪ್ರದೇಶದ ಸಾಕಷ್ಟು ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ತಾವು ಕೈಗೊಂಡ ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳುವಷ್ಟು ಸಶಕ್ತರಾಗಿದ್ದಾರೆ ಎಂದರು. ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಡಾ. ಗುರುರಾಜ ದೇಶಪಾಂಡೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement