ಪ್ಲಾಸ್ಟಿಕ್ ಬಳಕೆ ಇಂದಿನ ಫ್ಯಾಷನ್
ಧಾರವಾಡ: ನಿತ್ಯ ಬಳಕೆಯ ಸಾಮಗ್ರಿಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತೆಗೆದುಕೊಂಡು ಹೋಗುವುದು ಇಂದಿನ ಫ್ಯಾಶನ್ನಾಗಿ ಪರಿಣಮಿಸಿದೆ ಎಂದು ಪರಿಸರವಾದಿ ಡಾ. ಸಂಜೀವ ಕುಲಕರ್ಣಿ ಹೇಳಿದರು.
ವಿಜಯನಗರದ ಶ್ರೀ ಸಾಯಿ ಎಂಟರ್‌ಪ್ರೈಸೆಸ್ ಪರಿಸರ ಸ್ನೇಹಿ ಪೇಪರ್ ಕ್ಯಾರಿ ಬ್ಯಾಗ್ ಉತ್ಪಾದನಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಅನುಕೂಲಕ್ಕೆ ಎಂದು ಆರಂಭವಾದ ಪ್ಲಾಸ್ಟಿಕ್ ಬಳಕೆ ಇಂದು ಅನಾನೂಕೂಲಕ್ಕೆ ಕಾರಣವಾಗಿದೆ. ಬರಿಗೈಯಲ್ಲಿ ಮಾರುಕಟ್ಟೆಗೆ ಬರುವವರು ಅನಿವಾರ್ಯವಾಗಿ ಪ್ಲಾಸ್ಟಿಕ್ ಚೀಲಗಳ ಮೊರೆ ಹೋಗುತ್ತಿದ್ದಾರೆ. ಪ್ಲಾಸ್ಟಿಕ್ ಬದಲು ಪರಿಸರ ಸ್ನೇಹಿ ಪೇಪರ್ ಬ್ಯಾಗ್‌ನ ಬಳಕೆ ಹೆಚ್ಚಾಗಬೇಕಿದೆ ಎಂದರು.
ಬಳಸಿದ ಪ್ಲಾಸ್ಟಿಕ್‌ಗಳನ್ನು ಚರಂಡಿಗೆ ಎಸೆಯುತ್ತಿರುವುದರಿಂದ ನಿಲ್ಲುವ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ ಎಂದರು.
ಸಂಸ್ಥೆ ಮುಖ್ಯಸ್ಥೆ ಜ್ಯೋತಿ ಹಿರೇಮಠ, ಜನರು ಕಣ್ಣಿಗೆ ಕಾಣುವ ವಸ್ತು ಬಳಸುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬದಲು ಪರಿಸರ ಸ್ನೇಹಿ ಪೇಪರ್ ಬ್ಯಾಗ್ ಕಂಡರೆ ಅವುಗಳನ್ನು ಬಳಸುತ್ತಾರೆ. ಆದ್ದರಿಂದ ಸಣ್ಣ ಪ್ರಮಾಣದಲ್ಲಿ ಆರಂಭವಾಗಿರುವ ಪರಿಸರ ಸ್ನೇಹಿ ಬ್ಯಾಗ್ ಉತ್ಪಾದನೆಯನ್ನು ಬರುವ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಆರಂಭಿಸುವ ಯೋಚನೆ ಇದೆ ಎಂದು ಹೇಳಿದರು. ಸಮಾರಂಭದಲ್ಲಿ ಕಾರ್ಮಿಕ ಮುಖಂಡ ನಾಗರಾಜ ಗುರಿಕಾರ, ಸಂಸ್ಥೆ ಅಧ್ಯಕ್ಷ ಜ್ಯೋತಿ ಹಿರೇಮಠ, ಗಂಗಮ್ಮ ಶಿವಯ್ಯನಮಠ ಇದ್ದರು.