ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮಹದಾಯಿ ಮಧ್ಯಂತರ ಆದೇಶಕ್ಕೆ ಮೊಯ್ಲಿಗೆ ಮನವಿ

Vishwanath S
Updated On : 22 Jan 2014, 2:34 am

ಹುಬ್ಬಳ್ಳಿ: ಬೆಳಗಾವಿ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿ ಮಹದಾಯಿ ನ್ಯಾಯಾಧೀಕರಣದಿಂದ ಮಧ್ಯಂತರ ಆದೇಶ ಪಡೆಯುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ವೀರಪ್ಪ ಮೊಯ್ಲಿ ಅವರಿಗೆ ಕಳಸಾ ಹೋರಾಟ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಈಚೆಗೆ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿ ಅವರನ್ನು ಭೇಟಿಯಾದ ಕಳಸಾ ಹೋರಾಟ ಸಮಿತಿ ಪದಾಧಿಕಾರಿಗಳು ಮಹಾದಾಯಿ ತಿರುವು ಯೋಜನೆ ಕಳೆದ ಮೂರು ವರ್ಷಗಳಿಂದ ನ್ಯಾಯಾಧೀಕರಣದಲ್ಲಿದೆ. ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಇತರ ನ್ಯಾಯಾಧೀಕರಣದಲ್ಲಿ ಒಂದು ವರ್ಷದೊಳಗೆ ಮಧ್ಯಂತರ ಆದೇಶ ಪಡೆದಿರುವ ಉದಾಹರಣೆಗಳಿದ್ದರೂ ರಾಜ್ಯ ಸರ್ಕಾರ ಮಾತ್ರ ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಿಲ್ಲ.
ಕಳಸಾ ಮತ್ತು ಬಂಡೂರಿ ಹಳ್ಳಗಳಿಂದ ನೀರು ಪಡೆಯುವುದಕ್ಕೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ಅನುಮತಿ ಪಡೆಯುವುದಕ್ಕೂ ರಾಜ್ಯ ಸರ್ಕಾರ ಯತ್ನಿಸಿಲ್ಲ. ಮಹದಾಯಿ ಕಣಿವೆ ವ್ಯಾಪ್ತಿಯಲ್ಲಿ ಸುಮಾರು 200 ಟಿಎಂಸಿ ನೀರು ಲಭ್ಯವಿದ್ದು, ಅದರ ಪೈಕಿ ಶೇ. 90ರಷ್ಟು ಅರಬ್ಬಿ ಸಮುದ್ರ ಸೇರುತ್ತದೆ.
2002ರಲ್ಲಿ ಕೇಂದ್ರ ಜಲ ಆಯೋಗ ಮಹಾದಾಯಿ ಕಣಿವೆ ವ್ಯಾಪ್ತಿಯಲ್ಲಿನ 7.56 ಟಿಎಂಸಿ ನೀರನ್ನು ಬಳಕೆ ಮಾಡುವುದಕ್ಕೆ ಅನುಮತಿ ನೀಡಿದೆ. ಅಲ್ಲದೇ ಸರ್ವೋಚ್ಚ ನ್ಯಾಯಾಲಯ ಕೂಡ ಮಲಪ್ರಭಾ ನದಿಗೆ ಕಳಸಾ ಹಳ್ಳವನ್ನು ಜೋಡಣೆ ಕಾಮಗಾರಿಗೆ ಪ್ರತಿಬಂಧಕ ವಿಧಿಸಿಲ್ಲ ಎಂದು ವೀರಪ್ಪ ಮೊಯ್ಲಿ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ. 2002ರಲ್ಲಿ ಕೇಂದ್ರ ಜಲ ಆಯೋಗ ನೀಡಿರುವ ಪರವಾನಗಿ ಆಧಾರದ ಮೇಲೆ ನ್ಯಾಯಾಧೀಕರಣದ ಎದುರು ಮಧ್ಯಂತರ ಆದೇಶ ಪಡೆಯುವುದಕ್ಕೆ ರಾಜ್ಯ ಸರ್ಕಾರಕ್ಕೆ ಸೂಚಿಸುವುದರ ಜೊತೆಗೆ ನೀರಿನ ಅಗತ್ಯವನ್ನು ಪ್ರಧಾನಿ ಮನಮೋಹನ್  ಸಿಂಗ್ ಅವರ ಗಮನಕ್ಕೆ ತರಬೇಕು ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಕಳಸಾ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ಸಂಚಾಲಕ ವಿಕಾಸ ಸೊಪ್ಪಿನ, ವಿಕಾಸ ಗೊಳಸಂಗಿಮಠ ಇನ್ನಿತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement