ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅತಿ ನೀರು, ರಾಸಾಯನಿಕದಿಂದ ಹಾನಿ

Mainashree
Updated On : 23 Jan 2014, 10:59 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 22
ಬೆಳೆಗೆ ಬೇಕಾಗಿದ್ದು ಪ್ರಾಣವಾಯು ಹಾಗೂ ಸೂರ್ಯನ ಬೆಳಕೇ ವಿನಃ ಅತಿಯಾದ ನೀರಲ್ಲ. ಅತಿಯಾದ ನೀರು ಹಾಗೂ ರಸಾಯನಿಕ ಬಳಕೆಯಿಂದ ಭೂಮಿ ಬರಡಾಗುತ್ತಿದೆ ಎಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಸುರೇಶ ದೇಸಾಯಿ ಅಭಿಪ್ರಾಯಪಟ್ಟರು.
ಇಲ್ಲಿನ ಬಿವಿಬಿ ಕಾಲೇಜಿನಲ್ಲಿ ದೇಶಪಾಂಡೆ ಫೌಂಡೇಶನ್ ಬುಧವಾರ ಆಯೋಜಿಸಿದ್ದ 'ಕೃಷಿ ಸಿಂಚನ' ಕಾರ್ಯಕ್ರಮದಲ್ಲಿ ನೆರೆದ ಸಾವಿರಾರು ರೈತರನ್ನುದ್ದೇಶಿಸಿ ಮಾತನಾಡಿದ ಅವರು, ಅತಿಯಾದ ನೀರು ಹಾಗೂ ರಸಾಯನಿಕ ಬಳಸಿದ ಮಾತ್ರಕ್ಕೆ ಸಮೃದ್ಧ ಬೆಳೆ ಬೆಳೆಯುತ್ತದೆ ಎನ್ನುವ ಭ್ರಮೆ ರೈತರಲ್ಲಿದೆ. ಅದರಲ್ಲಿಯೂ ನೀರಾವರಿ ಇದ್ದರಂತೂ ಭರಪೂರ ಬೆಳೆ ಬೆಳೆಯಬಹುದೆಂಬ ರೈತರ ಕಲ್ಪನೆಯೇ ತಪ್ಪು. ಅತಿಯಾದ ನೀರಿನಿಂದಾಗಿ ಭೂಮಿ ಸವಳು-ಜವಳಾಗುತ್ತದೆ. ಜತೆಗೆ ಭೂಮಿ ಸಂಪೂರ್ಣವಾಗಿ ಬರಡಾಗುವ ಆತಂಕವೇ ಹೆಚ್ಚು ಎಂದರು.
ನಮ್ಮ ಬಹುತೇಕ ರೈತರಿಗೆ ಸೂರ್ಯನ ಬೆಳಕಿನ ಬಗ್ಗೆಯೇ ತಿಳಿದಿಲ್ಲ. ಸೂರ್ಯನ ಬೆಳಕಿನ ವಿಷಯ ಬಂದಾಗ ಯುರೋಪ ದೇಶಕ್ಕೆ ಹೋಲಿಸಿದಾಗ ನಮ್ಮ ದೇಶದ ರೈತರೇ ಪುಣ್ಯವಂತರು. ಯುರೋಪಗೆ ಪ್ರತಿ ವರ್ಷ 1 ಸಾವಿರ ಗಂಟೆಗಳ ಕಾಲ ಸೂರ್ಯನ ಬೆಳಕು ಸಿಕ್ಕರೆ, ಭಾರತಕ್ಕೆ 4 ಸಾವಿರ ಗಂಟೆ ಕಾಲ ಸೂರ್ಯನ ಬೆಳಕು ಸಿಗುತ್ತದೆ. ಸೂರ್ಯನ ಬೆಳಕು ಬಳಸಿಕೊಂಡು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದರು.
ದೇಶದಲ್ಲಿ ಕೀಟನಾಶಗಳ ಬಳಕೆ ಹೆಚ್ಚುತ್ತಾ ಸಾಗಿದೆ. ಒಂದೊಮ್ಮೆ ಇದೇ ಸ್ಥಿತಿ ಮುಂದುವರಿದರೆ ಸಂಪೂರ್ಣ ಭೂಮಿ ಬರಡಾಗಿ ಕೃಷಿ ಪ್ರಧಾನ ರಾಷ್ಟ್ರವಾಗಿರುವ ಭಾರತದಿಂದ ಕೃಷಿಯೇ ಮರೆಯಾಗಿ ಹೋಗುವ ಆತಂಕವಿದೆ. ನಾವು ಸಾವಯವ ಕೃಷಿ ಪದ್ಧತಿಯತ್ತ ಮುಖ ಮಾಡದೇ ಹೋದಲ್ಲಿ ದೊಡ್ಡ ಗಂಡಾಂತರ ಎದುರಾಗಲಿದೆ ಎಂದರು.
ಸಾವಯವ ಪದ್ಧತಿ ಪ್ರಚುರ ಪಡಿಸಲಾಗುತ್ತಿದೆಯಾದರೂ ಈ ಬಗ್ಗೆ ರೈತರಲ್ಲಿರುವ ಕೆಲ ತಪ್ಪು ತಿಳಿವಳಿಕೆಯಿಂದಾಗಿ ಅಲ್ಪ ಪ್ರಮಾಣದಲ್ಲಿ ಮಾತ್ರ ರೈತರು ಸಾವಯವ ಪದ್ಧತಿ ಅನುಸರಿಸುತ್ತಿದ್ದಾರೆ. ಸಾವಯವ ಪದ್ಧತಿಯಿಂದ ಇಳುವರಿ ಕಡಿಮೆಯಾಗುತ್ತದೆ ಎಂಬ ಕಲ್ಪನೆಯೇ ತಪ್ಪು. ಹೆಚ್ಚಿನ ಇಳುವರಿ ತಂದು ಕೊಡುವುದೇ ಸಾವಯವ ಪದ್ಧತಿ. ಈ ಪದ್ಧತಿಯಲ್ಲಿ ಕೆಲವೊಂದಿಷ್ಟು ನಿಯಮ ಅನುಸರಿಸುವಲ್ಲಿ ಎಡವಿದ ಫಲವಾಗಿ ಇಳುವರಿ ಕುಂಠಿತಗೊಂಡಿರುವ ಸಾಧ್ಯತೆಯುಂಟು. ಭೂಮಿಯನ್ನು ಫಲವತ್ತಾಗಿಸಲು ಹಸಿರೆಲೆ ಗೊಬ್ಬರ ಮುಖ್ಯ. ಅದರಲ್ಲಿಯೂ ಭೂಮಿಯಲ್ಲಿ ಬೆಳೆದ ಬೆಳೆಗಳ ಹಸಿರೆಲೆಯನ್ನೇ ಗೊಬ್ಬರಕ್ಕೆ ಉಪಯೋಗಿಸಬೇಕು. ಇದು ಭೂಮಿಯನ್ನು ಹೆಚ್ಚು  ಫಲವತ್ತಾಗಿಸುತ್ತದೆ. ಕೀಟಬಾಧೆ ತಪ್ಪಿಸಲು ಮಿಶ್ರ ಬೆಳೆ ಬೆಳೆಯಬೇಕು. ಜತೆಗೆ ಬೆಳೆಯ ಮಧ್ಯ ಅಲ್ಲಲ್ಲಿ ಮೆಂತೆ, ಎಳ್ಳು ಹಾಗೂ ಕೋತಂಬರಿ ಗಿಡಗಳನ್ನು ಬೆಳೆಸಬೇಕು. ಗೋವು ತಿನ್ನದ ವನಸ್ಪತಿಯ ಕಷಾಯ ತಯಾರಿಸಿ ಕೀಟಬಾಧೆಗೊಳಗಾಗಿ ಬೆಳೆಗಳಿಗೆ ಸಿಂಪಡಿಸಬೇಕು. ಪ್ರಮುಖವಾಗಿ ದಕ್ಷಿಣೋತ್ತರ ದಿಕ್ಕಿಗೆ ಬೀಜ ಬಿತ್ತಬೇಕು ಎಂದರು.
ಕಬ್ಬು ಬೆಳೆಗೆ ಹೆಚ್ಚಿನ ನೀರು ಬೇಕು ಎಂಬ ತಪ್ಪು ಕಲ್ಪನೆ ರೈತರಲ್ಲಿದೆ. ಕಬ್ಬಿಗೆ ಹೆಚ್ಚಿನ ನೀರಲ್ಲ ತೇವಾಂಶದ ಅಗತ್ಯವಿದೆ. ತೇವಾಂಶ ಕಾಯ್ದುಕೊಳ್ಳಲು ಹಾಗೂ ಕೀಟಬಾಧೆ ತಪ್ಪಿಸಲು ಕಬ್ಬಿನ ಮಧ್ಯದಲ್ಲಿ ಅನ್ಯ ಬೆಳೆ ಬೆಳೆಯಬೇಕು. ಜತೆಗೆ 9 ರಿಂದ 10 ಅಡಿ ಅಂತರದಲ್ಲಿ ಕಬ್ಬು ನಾಟಿ ಮಾಡಬೇಕು ಎಂದು ದೇಸಾಯಿ ರೈತರಿಗೆ ಮಾಹಿತಿ ನೀಡಿದರು.
ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಗುರುರಾಜ ದೇಶಪಾಂಡೆ ಮಾತನಾಡಿ, ಕೃಷಿಯಲ್ಲಿ ಇರುವ ನೆಮ್ಮದಿ ಇನ್ನಾವುದೇ ಕ್ಷೇತ್ರದಲ್ಲಿ ಕಾಣಲು ಸಾಧ್ಯವಿಲ್ಲ. ಕೃಷಿಯಿಂದ ರೈತರು ಹಣಗಳಿಸುತ್ತಾರೆನ್ನುವ ಮಾತೇ ತಪ್ಪು. ರೈತರು ಕೃಷಿಯಲ್ಲಿ ಹಣವನ್ನಲ್ಲ, ನೆಮ್ಮದಿಯನ್ನು ಅರಸುತ್ತಾರೆ. ಎಲ್ಲ ಕ್ಷೇತ್ರಗಳಿಗೂ ರೈತನೇ ಅನ್ನದಾತ. ಆತನ ಖುಣ ತೀರಿಸಲಾಗದು. ಈ ಕಾರಣಕ್ಕಾಗಿಯೇ ದೇಶಪಾಂಡೆ ಫೌಂಡೇಶನ್, ಕೃಷಿ ಕ್ಷೇತ್ರದಲ್ಲಿನ ಹೊಸ ಹೊಸ ಆವಿಷ್ಕಾರಗಳನ್ನು ತಿಳಿಸಿಕೊಡುವ ಕಾರ್ಯ ಮಾಡುತ್ತಿದೆ. ದೇಶಪಾಂಡೆ ಫೌಂಡೇಶನ್‌ನ ದೇಶಪಾಂಡೆ ಸುಸಂಧಿ ಕೃಷಿ ಚೇತನ ವಿಭಾಗದಲ್ಲಿರುವ ಪ್ರತಿನಿಧಿಗಳು ರೈತರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ರೈತರು ಈ ಕೃಷಿ ಸೇನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶ್ರೀನಿವಾಸ ದೇಶಪಾಂಡೆ, ಜಯಶ್ರೀ ದೇಶಪಾಂಡೆ, ಪ್ರಕಾಶ ಭಟ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement