ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಧಿಕಾರಿಗಳಲ್ಲಿ ವೃತ್ತಿ ಪ್ರೌಢಿಮೆ ಅಗತ್ಯ

Mainashree
Updated On : 23 Jan 2014, 11:00 am

ಕನ್ನಡಪ್ರಭ ವಾರ್ತೆ, ಧಾರವಾಡ, ಜ. 22
ಆಡಳಿತದಲ್ಲಿ ಶಿಸ್ತು, ಪಾರದರ್ಶಕತೆ, ಸರ್ಕಾರಿ ನಿಯಮಗಳ ಪಾಲನೆ ಹಾಗೂ ಜನಪರ ನಿಲುವು ಕಾಯ್ದುಕೊಳ್ಳಲು ಅಧಿಕಾರಿಗಳಲ್ಲಿ ವೃತ್ತಿ ಪ್ರೌಢಿಮೆ ಅಗತ್ಯವಿದೆ ಎಂದು ನಿವೃತ್ತ ಜಂಟಿ ಮುಖ್ಯ ಚುನಾವಣಾಧಿಕಾರಿ ಎನ್. ಕ್ಷೇತ್ರಪಾಲ ಹೇಳಿದರು.
ಬುಧವಾರ ಇಲ್ಲಿಯ ರಾಜ್ಯ ಶಾಲಾ ಹೊಣೆಗಾರಿಕೆ, ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣೆ ಸಂಸ್ಥೆ (ಸಿಸ್ಲೆಪ್-ಕರ್ನಾಟಕ) ಸಾರ್ವಜನಿಕ ಶಿಕ್ಷಣ ಇಲಾಖೆ ಡಿಡಿಪಿಐ ಹಾಗೂ ಅದಕ್ಕೂ ಮೇಲ್ಪಟ್ಟ ಅಧಿಕಾರಿಗಳಿಗೆ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ನಿಯಮಾವಳಿಗಳ ಬಗ್ಗೆ ಆಳ ಜ್ಞಾನ ಹೊಂದಿದ್ದರೆ ಮಾತ್ರ ಆಡಳಿತದ ನಿರ್ವಹಣೆ ಸುಲಭವಾಗಲಿದೆ ಎಂದರು.
ಖ್ಯಾತ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ, ಅಧಿಕಾರಿಗಳು ತಮ್ಮ ಹುದ್ದೆಯ ಘನತೆ ಎತ್ತಿ ಹಿಡಿಯುವಲ್ಲಿ ಅಗತ್ಯವಿರುವ ನಿಯಮಾವಳಿಗಳ ಪರಿಪಾಲನೆಗೆ ಪೂರಕ ಜ್ಞಾನ ಹೊಂದಿರಬೇಕು ಎಂದರು.
 ಅಧ್ಯಕ್ಷತೆ ವಹಿಸಿದ್ದ ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ ಜಂಟಿ ನಿರ್ದೇಶಕ ಜಿ.ಆರ್. ಕೆಂಚರಡ್ಡೆರ, ಆಡಳಿತದ ನಿರ್ವಹಣೆಯಲ್ಲಿ ಅಗತ್ಯವಿರುವ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ಅರಿವು ಅಧಿಕಾರಿಗಳಿಗೆ ಇರಬೇಕು ಎಂದರು.  
ಕವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಪಿ.ಎಸ್. ಹಳ್ಯಾಳ ಹಾಗೂ ಕೇಂದ್ರ ಸರ್ಕಾರದ ಸಿಎಂಡಿಆರ್ ಕೇಂದ್ರದ ಡಾ. ವಿನೋದ ಅಣ್ಣಿಗೇರಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಸಿಸ್ಲೆಪ್ ಹಿರಿಯ ಸಹಾಯಕ ನಿರ್ದೇಶಕ ಆರ್.ಎಸ್. ಮುಳ್ಳೂರ ಸ್ವಾಗತಿಸಿದರು. ಸಿಸ್ಲೆಪ್ ಉಪನ್ಯಾಸಕಿ ಪಾರ್ವತಿ ವಸ್ತ್ರದ ನಿರೂಪಿಸಿದರು. ಸಹಾಯಕ ನಿರ್ದೇಶಕ ಅಶ್ವಿನ್ ವಂದಿಸಿದರು. ತಪ್ಪಿತಸ್ಥ ನೌಕರರ ವಿಷಯದಲ್ಲಿ ಕರಡು ದೋಷಾರೋಪ ಪಟ್ಟಿ ತಯಾರಿಸುವ ವಿಧಾನ, ಸರ್ಕಾರಿ ನೌಕರರನ್ನು ಒಳಗೊಂಡ ಹಗರಣಗಳ ಆರೋಪ ಪಟ್ಟಿಗೆ ಅನುಗುಣವಾಗಿ ಕೈಗೊಳ್ಳಬೇಕಾದ ಕ್ರಮಗಳು, ವಿಚಾರಣಾಧಿಕಾರಿ-ಮಂಡನಾಧಿಕಾರಿಗಳ ನೇಮಕ, ಅವರ ಕರ್ತವ್ಯಗಳು, ವಿಚಾರಣಾ ವರದಿಯಲ್ಲಿ ಪರಿಶೀಲಿಸಬೇಕಾದ ಅಂಶಗಳು, ಅಂತಿಮ ಆದೇಶ ಹೊರಡಿಸುವ ಕ್ರಮಗಳು, ಲೋಕಾಯುಕ್ತ ಪ್ರಕರಣಗಳ ವಿಲೇವಾರಿ, ಕ್ರಿಮಿನಲ್ ಪ್ರಕರಣಗಳ ನಿರ್ವಹಣೆ ಸೇರಿದಂತೆ ಅನೇಕ ಆಡಳಿತಾತ್ಮಕ ವಿಚಾರಗಳ ಕುರಿತು ತರಬೇತಿ ನೀಡಲಾಯಿತು. ಗುಲ್ಬರ್ಗ ಹಾಗೂ ಧಾರವಾಡ ವಿಭಾಗಗಳ ಆಡಳಿತ ಉಪನಿರ್ದೇಶಕರು (ಡಿಡಿಪಿಐ), ಡಯಟ್ ಪ್ರಾಚಾರ್ಯರು, ಸಹನಿರ್ದೇಶಕರು ಸೇರಿದಂತೆ 30 ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement