ಅವಸರದ ಪ್ರವೃತ್ತಿಯಿಂದಾಗಿ ನೆಮ್ಮದಿ ನಾಶ: ಕುಲಕರ್ಣಿ
ಧಾರವಾಡ: ಇಂದಿನ ಸಮಾಜ ವ್ಯವಸ್ಥೆಯಲ್ಲಿನ ಅವಸರದ ಪ್ರವೃತ್ತಿಯಿಂದಾಗಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.
ಇಲ್ಲಿಯ ಜೆಎಸ್ಸೆಸ್ ಕಾಲೇಜಿನಲ್ಲಿ ನಡೆದ 25ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಮಾನಸಿಕ ನೆಮ್ಮದಿ ಇಲ್ಲದೇ ಬೇರೆ ವಿಚಾರಗಳೊಂದಿಗೆ ವಾಹನ ಚಾಲನೆ ಮಾಡುವುದು ಅಪಘಾತಗಳಿಗೆ ಕಾರಣವಾಗಿದೆ. ಅಲ್ಲದೇ, ರಸ್ತೆ ನಿಯಮಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಇದೆ. ವಿನಾಕಾರಣ ಜೀವಹಾನಿ ಮಾಡಿಕೊಳ್ಳುವುದು ಸರಿಯಲ್ಲ. ವಾಹನ ನಡೆಸುವಾಗ ಸುರಕ್ಷಿತವಾಗಿರಬೇಕೆಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪಸೆ, ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಹೆಲ್ಮೆಟ್, ಬೆಲ್ಟ್ ಇತ್ಯಾದಿಗಳನ್ನು ಸುರಕ್ಷಾ ಸಾಧನಗಳನ್ನು ಧರಿಸುವುದರಿಂದ ಜೀವಹಾನಿ ತಪ್ಪಿಸಬಹುದು ಎಂದರು. ಬೆಳಗಾವಿ ವಿಭಾಗ ಸಾರಿಗೆ ಆಯುಕ್ತ ಬಿ.ಪಿ. ಉಮಾಶಂಕರ, ಡಿಸಿಪಿ ಶ್ರೀನಾಥ ಜೋಶಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಸಾಯಿಪ್ರಸಾದ ರಸ್ತೆ ಸುರಕ್ಷತೆ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ವಿತ್ತಾಧಿಕಾರಿ ಡಾ. ಅಜಿತಪ್ರಸಾದ, ಕೇವಲ ಇಲಾಖೆ ಅಧಿಕಾರಿ, ಸಿಬ್ಬಂದಿ ಮಾತ್ರ ಸಪ್ತಾಹದಲ್ಲಿ ಪಾಲ್ಗೊಳ್ಳದೇ ಪ್ರತಿಯೊಬ್ಬ ಪ್ರಜೆಯೂ ಸಕ್ರಿಯವಾಗಿ ಪಾಲ್ಗೊಂಡರೆ ಮಾತ್ರ ಅಪಘಾತಗಳನ್ನು ತಡೆಗಟ್ಟಲು ಸಾಧ್ಯ ಎಂದರು.
ಪ್ರಾಚಾರ್ಯ ಡಾ. ಎಸ್.ಎನ್. ಹೆಗಡೆ ಸ್ವಾಗತಿಸಿದರು. ನರೇಂದ್ರ ಹೋಳ್ಕರ ಪ್ರಾಸ್ತಾವಿಕ ಮಾತನಾಡಿದರು. ಎಸ್.ಎಸ್. ಖಾಜಿ ವಂದಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು.