ಪ್ರಶಸ್ತಿಗಾಗಿ ಲಾಬಿ ಸರಿಯಲ್ಲ: ಹೊರಟ್ಟಿ
ಕನ್ನಡಪ್ರಭ ವಾರ್ತೆ, ಧಾರವಾಡ, ಜ. 22
ಪ್ರಶಸ್ತಿ ಪಡೆಯುವುದಕ್ಕೆ ಲಾಬಿ ಮಾಡದೇ ಸ್ವಂತ ಪರಿಶ್ರಮದ ಮೇಲೆ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಹುಬ್ಬಳ್ಳಿಯ ಶ್ರೀನಿವಾಸ ಕಲಾ ಸಂಗಮ ಹಾಗೂ ಕಲಾಶ್ರೀ ಸಾಂಸ್ಕೃತಿಕ ಸಂಘ ಆಯೋಜಿಸಿದ್ದ್ದ ಮಕ್ಕಳ ಬಹುಮುಖ ಪ್ರತಿಭಾ ಪ್ರದರ್ಶನ, ದೋಟಿಹಾಳ ಸೋಮನಾಥ ಅವರ ಹಂಬಲ ಕವಿತಾ ಸಂಕಲನ ಬಿಡುಗಡೆ ಮತ್ತು ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜ ಸುಧಾರಣೆಯಲ್ಲಿ ಕೆಲಸ ಮಾಡಿದವರನ್ನು ಸನ್ಮಾನಿಸುವುದು ಅವರಿಗೆ ನೀಡಿದ ಗೌರವ. ಆದರೆ, ಇತ್ತೀಚೆಗೆ ತಮ್ಮನ್ನು ತಾವೇ ಸತ್ಕರಿಸಿಕೊಳ್ಳುವ ಕಾಲ ಬಂದಿದೆ. ಇದಕ್ಕೆ ವ್ಯತಿರಿಕ್ತವಾಗಿ ನಿಜವಾದ ಸಾಧಕರನ್ನು ಶ್ರೀನಿವಾಸ ಕಲಾ ಸಂಗಮ ಆಯ್ಕೆ ಮಾಡಿದ್ದು ಶ್ಲಾಘನೀಯ ಎಂದು ಹೇಳಿದರು.
ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಶ್ರೀನಾಥ ಒಡೆಯರ್, ಸುಭಾಸ ನರೇಂದ್ರ, ಸಹನಾ ಭಟ್, ದೋಟಿಹಾಳ ಸೋಮನಾಥ ಅವರನ್ನು ಸನ್ಮಾನಿಸಲಾಯಿತು. ಡಿಡಿಪಿಐ ಡಾ. ಬಿ.ಕೆ.ಎಸ್. ವರ್ಧನ್, ಮಕ್ಕಳಲ್ಲಿ ಹುದುಗಿರುವ ಅಗಾಧವಾದ ಕಲೆಗೆ ನಾವು ಬೆಲೆ ಕಟ್ಟಲಾಗದು. ಯಾವುದೇ ಸರ್ಕಾರಗಳು ಮಾಡದ ಸಾಧನೆಯನ್ನು ಸಂಘ, ಸಂಸ್ಥೆಗಳು ಮಾಡುತ್ತಿವೆ ಎಂದರು.
ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ, ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಹಾಗೂ ರಾಷ್ಟ್ರಭಕ್ತಿ, ರಾಷ್ಟ್ರದ ಬಗೆಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಇಂತಹ ಚಟುವಟಿಕೆಗಳಿಗೆ ಇಂಬು ನೀಡುವ ದಿಸೆಯಲ್ಲಿ ಶ್ರೀನಿವಾಸ ಕಲಾ ಸಂಗಮ, ಹುಬ್ಬಳ್ಳಿ ಹಾಗೂ ಕಲಾಶ್ರೀ ಸಾಂಸ್ಕೃತಿಕ ಸಂಸ್ಥೆಗಳು ಮಾಡುತ್ತಿರುವ ಕಾರ್ಯ ಅಭಿನಂದನೀಯ ಎಂದರು.
ಪ್ರಾಸ್ತಾವಿಕ ಮಾತನಾಡಿದ ಕಲಾಸಂಗಮದ ಅಧ್ಯಕ್ಷ ರಾಜಶೇಖರ ಮಾಣಿಕ್ಯಂ, ನಮ್ಮ ಸಂಸ್ಥೆಗಳು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನ್ವೇಷಣೆ ಮಾಡಿ ಅವರಿಗೆ ನೃತ್ಯ, ಸಂಗೀತ, ವಾದ್ಯ ಇತ್ಯಾದಿಗಳಲ್ಲಿ ತರಬೇತಿ ನೀಡಲಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಅನೇಕ ಕಲಾ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಅವರನ್ನು ನಾಡಿಗೆ ಪರಿಚಯಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು. ನವೀನಶಾಸ್ತ್ರಿ ಪುರಾಣಿಕ ಹಾಗೂ ಜಯಶ್ರೀ ಭಾವಿಕಟ್ಟಿ ನಿರೂಪಿಸಿದರು. ವಸಂತಶಾಸ್ತ್ರಿ ಪುರಾಣಿಕ ವಂದಿಸಿದರು. ಮಮತಾ ನಾಯಕ ಇದ್ದರು. ಉತ್ತಮ ಪ್ರದರ್ಶನ ತೋರಿದ ಮಕ್ಕಳನ್ನು ಸನ್ಮಾನಿಸಲಾಯಿತು.