ಸಂಘಟಿತ ಹೋರಾಟ ಅಗತ್ಯ: ಜೋಶಿ
ಕುಂದಗೋಳ: ರಾಜಕೀಯ ಸೊಂಕು ತಗಲದಂತೆ ಜಾಗೃತಿ ವಹಿಸಿದರೆ ಮಾತ್ರ ರೈತ ಸಂಘಗಳು ಬೆಳೆಯಲು ಸಾಧ್ಯ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.
ತಾಲೂಕಿನ ಸಂಶಿ ಗ್ರಾಮದಲ್ಲಿ ತಮ್ಮ ಸಂಸದರ ನಿಧಿಯಿಂದ ನಿರ್ಮಾಣಗೊಂಡ ರೈತ ಭವನದ ಉದ್ಘಾಟನೆ ಹಾಗೂ ಬೆಳೆ ರಕ್ಷಕ ರೈತ ಸಂಘದ ಬೆಳ್ಳಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘಟಿತರಾಗಿ ಹೋರಾಡಬೇಕು. ದೇಶದಲ್ಲಿ ಶೇ. 70ರಷ್ಟು ಕುಟುಂಬಗಳು ಕೃಷಿಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿವೆ. ರೈತ ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರಗಳು ರೈತರ ಅವಶ್ಯಕ ಬೇಡಿಕೆಗಳನ್ನು ಈಡೇರಿಸುವಲ್ಲಿ ಇಚ್ಛಾಶಕ್ತಿ ಪ್ರದರ್ಶಿಸದೇ ಇರುವುದು ನಿಜಕ್ಕೂ ನೋವಿನ ಸಂಗತಿ ಎಂದರು.
ಅಟಲ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರೈತರ ಅನುಕೂಲಕ್ಕಾಗಿ ನದಿಗಳ ಜೋಡಣೆ ಕಾರ್ಯ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದರು. ಆದರೆ, ರಾಜಕೀಯ ಬದಲಾವಣೆಯಿಂದ ಆ ಕನಸು ಹಾಗೆಯೇ ಉಳಿದುಕೊಂಡಿದೆ. ಆದ್ದರಿಂದ ಇದನ್ನು ಪೂರ್ಣಗೊಳಿಸಲು ರೈತರೆಲ್ಲರೂ ಬಿಜೆಪಿಯೊಂದಿಗೆ ಕೈಜೋಡಿಸಬೇಕೆಂದು ವಿನಂತಿಸಿಕೊಂಡರು.
ಸಾನ್ನಿಧ್ಯವಹಿಸಿದ್ದ ಶ್ರೀ ಫಕ್ಕಿರಸಿದ್ಧರಾಮ ಸ್ವಾಮೀಜಿ ಹಾಗೂ ವಿರಕ್ತಮಠದ ಶ್ರೀ ಚೆನ್ನಬಸವದೇವರು ಮಾತನಾಡಿದರು. ರೈತ ಸಂಘದ ಅಧ್ಯಕ್ಷ ವೆಂಕನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ನಿರ್ಮಾಲಾದೇವಿ ಉಪ್ಪಿನ, ತಾಪಂ ಸದಸ್ಯೆ ಅಂಬಕ್ಕ ಪಾಟೀಲ, ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ ಮೂರೊಪಂತರ, ಉಪಾಧ್ಯಕ್ಷೆ ಪ್ರೇಮಾ ಜಾಧವ ಮತ್ತಿತರರಿದ್ದರು.