ಸ್ವಾರ್ಥ ಇರುವಲ್ಲಿ ಆತ್ಮಬಲ ನಿಲ್ಲಲಾರದು: ಸಂಸದ ವಿಶ್ವನಾಥ
ಧಾರವಾಡ: ಸ್ವಾರ್ಥ ಮನೋಭಾವ ಇರುವಲ್ಲಿ ಆತ್ಮಬಲ ನಿಲ್ಲಲಾರದು. ಸ್ವಾರ್ಥಕ್ಕೆ ಬಲಿಯಾಗದೇ ಆತ್ಮಬಲದಿಂದಲೇ ಇಷ್ಟು ವರ್ಷ ಜೀವನ ಸಾಗಿಸಿರುವ ಪಾಟೀಲ ಪುಟ್ಟಪ್ಪನವರ ನಡೆ-ನುಡಿ ಕನ್ನಡಿಗರಿಗೆ ಮಾರ್ಗದರ್ಶಿ ಎಂದು ಸಂಸದ ಎಚ್. ವಿಶ್ವನಾಥ ಹೇಳಿದರು.
ಹುಬ್ಬಳ್ಳಿಯ ಡಾ. ಪಾಟೀಲ ಪುಟ್ಟಪ್ಪ ವಿಚಾರ ವೇದಿಕೆಯಿಂದ ಬುಧವಾರ ಡಾ. ಪಾಟೀಲ ಪುಟ್ಟಪ್ಪನವರ 94ನೇ ಜನ್ಮ ದಿನೋತ್ಸವ ಹಾಗೂ ಪಾಪು ಪ್ರಶಸ್ತಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪಾಪು ಅವರು ತಮ್ಮ ಜೀವನದಲ್ಲಿ ಗಳಿಸಿದ ಆಸ್ತಿಯೆಂದರೆ ಅನುಭವ ಮಾತ್ರ. ಅವರ ಪ್ರತಿ ಮಾತು ಅನುಭವದ ಮಾತು. ಅವವರ ಅನುಭವ ನಾಡಿನ ಏಳ್ಗೆಗೆ ಸದಾ ಮಾರ್ಗದರ್ಶಿಯಾಗಿರಲಿ ಎಂದು ಎಚ್. ವಿಶ್ವನಾಥ ಆಶಿಸಿದರು.
ಅಭಿನಂದನಾ ಭಾಷಣ ಮಾಡಿದ ಮಾಜಿ ಸಂಸದ ಐ.ಜಿ. ಸನದಿ, ಖಡಕ್ ಲೇಖನಿ ಮೂಲಕ ಸತ್ಯ ಹೇಳಿಕೊಂಡು ಬಂದ ಪಾಪು ಸದಾ ಕಾಲ ಸಮಾಜದ ಏಳ್ಗೆ ಅವರ ಚಿಂತನ-ಮಂಥನವಾಗಿದೆ. ಸಾಮಾಜಿಕ ಬದಲಾವಣೆಗಳಿಗೆ ಹರಿಕಾರರು ಆದ ಅವರು, ಸಮಾಜ ಹಾಗೂ ರಾಜಕೀಯ ವಲಯ ಹಾಗೂ ವ್ಯಕ್ತಿಗಳ ನಡೆ-ನುಡಿ ತಿದ್ದಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಖಾದ್ರಿ ಅಚ್ಯುತನ್ ಅವರಿಗೆ ಪಾಪು ಪುರಸ್ಕಾರ ಪ್ರದಾನ ಮಾಡಲಾಯಿತು. ನಾಡೋಜ ಪಾಟೀಲ ಪುಟ್ಟಪ್ಪ ಅವರನ್ನು ಅಭಿಮಾನಿಗಳು ಸನ್ಮಾನಿಸಿದರು. ಹಿರಿಯ ಸಾಹಿತಿ ವೃಷಭೇಂದ್ರಸ್ವಾಮಿ, ಶಿವಾನಂದ ಜೋಶಿ, ಜಿ.ಜಿ. ದೊಡವಾಡ ಇದ್ದರು.