ಕಾಪಸೆ, ಕೃಷ್ಣಪ್ಪಗೆ ಅಂಬಿಕಾತನಯದತ್ತ ಪ್ರಶಸ್ತಿ ಪ್ರಕಟ
ಧಾರವಾಡ: ಪ್ರತಿಷ್ಠಿತ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಈ ಬಾರಿ ಸಾಹಿತಿಗಳಾದ ಡಾ. ಗುರುಲಿಂಗ ಕಾಪಸೆ ಹಾಗೂ ಡಾ.ಜಿ. ಕೃಷ್ಣಪ್ಪ ಅವರಿಗೆ ಲಭಿಸಿದೆ. ಶುಕ್ರವಾರ ಈ ಕುರಿತು ಮಾಹಿತಿ ನೀಡಿದ ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ, ವರಕವಿ ಬೇಂದ್ರೆ ಅವರ 119ನೇ ಜನ್ಮದಿನದ ನಿಮಿತ್ತ ಜ.31ರಂದು ಧಾರವಾಡದ ಸಾಧನಕೇರಿ ಬೇಂದ್ರೆ ಭವನದಲ್ಲಿ ಹಿರಿಯ ಕವಿ, ಚಿಂತಕ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 1 ಲಕ್ಷ ಮೊತ್ತದ ಈ ಪ್ರಶಸ್ತಿಯನ್ನು ಈ ಬಾರಿ ಇಬ್ಬರು ಗಣ್ಯರಿಗೆ ನೀಡಲಾಗಿದ್ದು, ತಲಾ 50 ಸಾವಿರ ಪ್ರಶಸ್ತಿ ಮೊತ್ತ ನೀಡಲಾಗುವುದು ಎಂದರು. 2002ರಿಂದ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಕಳೆದ ಬಾರಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ನೀಡಲಾಗಿತ್ತು. ಅಂತೆಯೇ, ಈ ಹಿಂದೆ ಕೆ.ಎಸ್. ನಾರಾಯಣಾಚಾರ್ಯ, ಚೆನ್ನವೀರ ಕಣವಿ, ಎಚ್.ಎಸ್. ರಾಘವೇಂದ್ರರಾವ್ ಅವರಿಗೆ ನೀಡಲಾಗಿದೆ. ವಿಶೇಷವಾಗಿ ಬೇಂದ್ರೆ ಸಾಹಿತ್ಯದ ಕುರಿತು ಅಧ್ಯಯನ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ನಾಡಿನ 25 ವಿದ್ವಾಂಸರು ಡಾ. ಗುರುಲಿಂಗ ಕಾಪಸೆ ಹಾಗೂ ಡಾ. ಕೃಷ್ಣಪ್ಪ ಅವರ ಹೆಸರು ಸೂಚಿಸಿದ ಹಿನ್ನೆಲೆಯಲ್ಲಿ ಇಬ್ಬರಿಗೂ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.